ಆಶ್ರಯ ನಿವೇಶನಗಳ ಯೋಜನೆಯಲ್ಲಿ ಅವ್ಯವಹಾರ ತನಿಖೆಗೆ ಕರವೇ ಪ್ರವೀಣ ಶೆಟ್ಟಿ ಬಣ ಆಗ್ರಹ
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಪಟ್ಟಣದ ಪುರಸಭೆಯಲ್ಲಿ ಬಡವರಿಗಾಗಿ ನೀಡುವ ಉದ್ದೇಶದಿಂದ ಇರುವ ಆಶ್ರಯ ನಿವೇಶನಗಳಿಗಾಗಿ ಭೂಮಿ ಖರೀದಿ ಮತ್ತು ನಿವೇಶನ ಹಂಚಿಕೆಯಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರ ನಡೆದಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಈ ಕುರಿತು ಸಮಗ್ರ ತನಿಖೆ ನಡೆಸಿ ಬಡ ಜನತೆಗೆ ನಿವೇಶನಗಳು ದೊರಕುವಂತೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣಶೆಟ್ಟಿ ಬಣ)ದ ತಾಲೂಕ ಅಧ್ಯಕ್ಷ ಮಹೇಶ ಕಲಘಟಗಿ ಆಗ್ರಹಿಸಿದರು.

ಅವರು ಈ ಕುರಿತು ಕರವೇ ವತಿಯಿಂದ ಪಟ್ಟಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪಟ್ಟಣದಲ್ಲಿ ಪುರಸಭೆ ಆಡಳಿತ ಮಂಡಳಿಯವರು ಹಲವಾರು ವರ್ಷಗಳಿಂದ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಕೆಲ ಸದಸ್ಯರು ಸೇರಿ ಪುರಸಭೆಯಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಪಟ್ಟಣದ ತಮ್ಮ-ತಿಮ್ಮಿ ಗುಡ್ಡದಲ್ಲಿ ನಿವೇಶನಕ್ಕಾಗಿ ಭೂಮಿ ಖರೀದಿಸಿದ್ದು, ಅಲ್ಲಿ ಹೋಗಿ ಬರಲು ದಾರಿಯೇ ಇಲ್ಲ ಅಲ್ಲದೆ ಅಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ, ಫಲಾನುಭವಿಗಳಿಗೆ ಜಾಗೆ ಗುರುತಿಸಿಯೀ ಕೂಡಾ ನೀಡಲಾಗಿಲ್ಲ, ಶಿಗ್ಲಿ ರಸ್ತೆಯಲ್ಲಿ ೩೨ ಎಕರೆ ೨೭ ಗುಂಟೆ ಜಮೀನಿನಲ್ಲಿ ಸುಮಾರು ೧೧೧೬ ನಿವೇಶನಗಳನ್ನು ಗುರುತಿಸಿದ್ದು ಆದರೆ ಈ ಭೂಮಿಯ ಜಾಗೆ ವಾಸಸ್ಥಾನಕ್ಕೆ ಯೋಗ್ಯವೇ ಇಲ್ಲ ಆದರೂ ಸಹ ಪ್ರಭಾವಿ ಪುರಸಭೆ ಸದಸ್ಯರ ಕೈವಾಡದಿಂದ ಇಂತಹ ಭೂಮಿಗಳನ್ನು ಖರೀದಿಸಲಾಗಿದೆ, ಇದು ಹಳ್ಳದ ಜವುಳು ಪ್ರದೇಶವಾಗಿದ್ದು, ಮಳೆಗಾಲದಲ್ಲಿ ಅಲ್ಲಿ ವಾಸಿಸುವದು ಸಹ ದುಸ್ತರವಾಗುತ್ತದೆ, ಇಂತಹ ಅನೇಕ ಅವ್ಯವಹಾರಗಳು ಪಟ್ಟಣದ ಪುರಸಭೆಯಲ್ಲಿ ನಡೆದಿದ್ದು, ಬಡವರಿಗೆ ನಿವೇಶನ ದೊರಕಿಸಿಕೊಡುವದಾಗಿ ಕೆಲವರು ಫಲಾನುಭವಿಗಳಿಂದ ಹಣ ಪಡೆದಿದ್ದು ನಮ್ಮ ಬಳಿ ದಾಖಲೆಗಳಿದ್ದು ಶೀಘ್ರದಲ್ಲಿಯೇ ಎಲ್ಲ ಪೂರಕ ದಾಖಲೆಗಳನ್ನು ಮಾಧ್ಯಮದ ಮುಂದೆ ಪ್ರಚಾರ ಪಡಿಸುತ್ತೇವೆ, ಭೂಮಿ ಖರೀದಿಯ ವೇಳೆ ಸಂಬoಧಿಸಿದ ಅಧಿಕಾರಿಗಳು ಸಹ ಇದರಲ್ಲಿ ಶಾಮೀಲಾಗಿದ್ದು, ಕೂಡಲೇ ತನಿಖೆ ಕೈಗೊಂಡು ನಂತರ ನಿವೇಶನಗಳನ್ನು ಅರ್ಹರಿಗೆ ವಿತರಿಸಬೇಕೆಂದು ಆಗ್ರಹಿಸುವದಾಗಿ ಹೇಳಿದರು.

ಮಂಜುನಾಥ ಗಾಂಜಿ ಮಾತನಾಡಿ, ನಿವೇಶನ ಹಂಚಿಕೆಯಲ್ಲಿ ವಿಳಂಭ ಮಾಡುವದರ ಜೊತೆಗೆ ಪುರಸಭೆ ಕೆಲ ಸದಸ್ಯರು ಓರ್ವ ಫಲಾನುಭವಿಗಳ ಕಡೆಯಿಂದ ೨೫-೩೦ ಸಾವಿರ ರೂಗಳನ್ನು ತೆಗೆದುಕೊಂಡಿದ್ದು ಫಲಾನುಭವಿಗಳಿಂದ ತಿಳಿದು ಬಂದಿದೆ, ಅದಕ್ಕೆ ಸಂಬoಧಿಸಿದ ಆಡಿಯೋ ಮತ್ತು ವಿಡಿಯೋ ಸಂಭಾಷಣೆಗಳು ಲಬ್ಯವಿದ್ದು, ಕೂಡಲೇ ಈ ಕುರಿತಂತೆ ಕ್ರಮ ನಡೆಯದಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟಕ್ಕೆ ಮುಂದಾಗುತ್ತೇವೆ, ಇದಕ್ಕೊಂದು ತಾರ್ಕಿಕ ಅಂತ್ಯ ದೊರೆಯುವವರೆಗೆ ಹೋರಾಟದಿಂದ ಹಿಂದೆ ಸರಿಯುವದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಈಶ್ವರಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ವಿರೇಶ ಹಗ್ಗರದ ಹಾಜರಿದ್ದರು.