ಮಾಧ್ಯಮ ಶಾಂತಿ ಹರಡುವ ಶಕ್ತಿ ಆಗಲಿ,

ಮಾಧ್ಯಮ ಶಾಂತಿ ಹರಡುವ ಶಕ್ತಿ ಆಗಲಿ, ಯುದ್ಧ ಪ್ರಚೋದಕವಾಗಬಾರದು: ಕೆ. ಶ್ರೀನಿವಾಸ ರೆಡ್ಡಿ


ವೀರಮಾರ್ಗ ನ್ಯೂಸ್ : ಆಬೂ ಪರ್ವತ (ರಾಜಸ್ಥಾನ ) ಮಾಧ್ಯಮವು ಸಮಾಜದಲ್ಲಿ ಶಾಂತಿ ಹರಡುವ ಶಕ್ತಿಯಾಗಿ ಕಾರ್ಯನಿರ್ವಹಿಸಬೇಕು, ಯುದ್ಧ ಪ್ರಚೋದನೆಗೆ ಕಾರಣವಾಗಬಾರದು ಎಂದು ತೆಲಂಗಾಣ ಮೀಡಿಯಾ ಅಕಾಡೆಮಿ ಅಧ್ಯಕ್ಷ ಕೆ. ಶ್ರೀನಿವಾಸ ರೆಡ್ಡಿ ಹೇಳಿದರು.
ಅವರು ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ‌ ಈಶ್ವರೀಯ ವಿಶ್ವವಿದ್ಯಾಲಯ ಮಾಧ್ಯಮ ಸೇವಾ ವಿಭಾಗದ ವತಿಯಿಂದ ರಾಜಸ್ಥಾನದ ಅಬು ಪರ್ವತ ದಿಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ರಾಷ್ಟ್ರೀಯ ಮಾಧ್ಯಮ ಸೇವಾ ವರ್ಗದ ಮಹಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


“ನಾವು ಕೇವಲ ಸುದ್ದಿಗಳನ್ನು ನೀಡುವವರಲ್ಲ, ಶಾಂತಿ ಮತ್ತು ಪ್ರೀತಿಯ ಸಂದೇಶವಾಹಕರಾಗಬೇಕು. ಸತ್ಯವನ್ನು ಸಹ ಪ್ರೀತಿಯಿಂದಲೇ ಹೇಳಬೇಕು. ವಿಶ್ವದಲ್ಲಿ ಶಾಂತಿ ಸ್ಥಾಪನೆಗಿಂತ ಮೊದಲು ನಮ್ಮೊಳಗೆ ಶಾಂತಿ ಬೆಳೆಸಿಕೊಳ್ಳಬೇಕು. ಪತ್ರಕರ್ತರು ದಿನಕ್ಕೆ ಐದು ನಿಮಿಷವಾದರೂ ರಾಜಯೋಗ ಅಭ್ಯಾಸ ಮಾಡಿದರೆ, ಅದರ ಸಕಾರಾತ್ಮಕ ಸ್ಪಂದನೆಗಳು ವಿಶ್ವದಾದ್ಯಂತ ಹರಡುತ್ತವೆ,” ಎಂದು ಅವರು ಹೇಳಿದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಈಶ್ವರೀಯ ವಿಶ್ವವಿದ್ಯಾಲಯ ಗಳ ಸಂಸ್ಥೆಯ ಹೆಚ್ಚುವರಿ ಮಹಾಸಚಿವ ರಾಜಯೋಗಿ‌ ಬ್ರಹ್ಮಾಕುಮಾರ ಮೃತ್ಯುಂಜಯ ಭಾಯೀಜೀ ಮಾತನಾಡಿ, “ಇಲ್ಲಿ ಭಾಗವಹಿಸಿದ ಪತ್ರಕರ್ತರು ಆಧುನಿಕ ನಾರದ ಮುನಿಗಳಂತೆ. ಶಾಂತಿ ಎಲ್ಲ ಧರ್ಮ, ಭಾಷೆ ಮತ್ತು ವರ್ಗಗಳಿಗೆ ಅಗತ್ಯ. ಶಾಂತಿ ನಮ್ಮ ಸ್ವಧರ್ಮ. ಅದು ಕೆಲಕಾಲಕ್ಕೆ ಮಾತ್ರವಲ್ಲ, ಸದಾಕಾಲ ಇರಬೇಕಾಗಿದೆ. ಸ್ವ-ಪರಿವರ್ತನೆಯ ಮೂಲಕವೇ ವಿಶ್ವ ಪರಿವರ್ತನೆ ಸಾಧ್ಯ. ಮಹತ್ವದ ಹಾಗೂ ಶ್ರೇಷ್ಠ ಸಂಕಲ್ಪಗಳಿಂದಲೇ ಶಾಂತಿ ಸ್ಥಾಪನೆ ಸಾಧ್ಯ,” ಎಂದು ಹೇಳಿದರು. ಅಹಿಂಸೆ ಯಾವುದೇ ಜಾತಿ ಅಥವಾ ವರ್ಗಕ್ಕೆ ಸೀಮಿತವಲ್ಲ, ಅದು ಮಾನವಕುಲದ ಧರ್ಮ ಎಂದರು.


ವಿಶಿಷ್ಟ ಅತಿಥಿ ಅನುಭವ್ ಮಾತುರ್ (ಟೈಮ್ಸ್ ಸ್ಕೂಲ್ ಆಫ್ ಮೀಡಿಯಾ, ಗ್ರೇಟರ್ ನೋಯ್ಡಾ) ಮಾತನಾಡಿ, “ಇಂದಿನ ಮಕ್ಕಳ ಕಾರ್ಟೂನ್ ಕಾರ್ಯಕ್ರಮಗಳಲ್ಲೂ ಹಿಂಸಾಚಾರ ಹೆಚ್ಚಾಗಿದೆ. ಇದರಿಂದ ಮಕ್ಕಳಿಗೆ ಹಿಂಸಾಚಾರ ಸಾಮಾನ್ಯವೆಂಬ ಭಾವನೆ ಮೂಡುತ್ತಿದೆ. ಇದನ್ನು ತಡೆಯಲು ಮಾಧ್ಯಮ ಮತ್ತು ಪೋಷಕರು ಜವಾಬ್ದಾರಿ ವಹಿಸಬೇಕು,” ಎಂದು ಸಲಹೆ ನೀಡಿದರು.


ರುಡ್ಕಿಯಿಂದ ಆಗಮಿಸಿದ ಡಿವೈನ್ ಮಿರರ್ ಸಂಪಾದಕ ಶ್ರೀಗೋಪಾಲ್ ನಾರ್ಸನ್ ಅವರು, ಬ್ರಹ್ಮಾಕುಮಾರಿಗಳ ಮೀಡಿಯಾ ವೇದಿಕೆಗಳನ್ನು ಪ್ರಶಂಸಿಸಿ, “ಇದು ಜಾಹೀರಾತು ರಹಿತ ಮಾಧ್ಯಮವಾಗಿದ್ದು, ವಿಶ್ವ ಶಾಂತಿಗಾಗಿ ಕಾರ್ಯನಿರ್ವಹಿಸುತ್ತಿದೆ,” ಎಂದರು.
ಗುರುಗ್ರಾಮದಿಂದ ಆಗಮಿಸಿದ ಶ್ರೀಮತ್ ಎಕ್ಸ್‌ಪ್ರೆಸ್ ಮುಖ್ಯ ಸಂಪಾದಕ ಡಿ.ಡಿ. ಮಿತ್ತಲ್ ಅವರು, “ಮಾಧ್ಯಮ ದೇಶದ ನಾಲ್ಕನೇ ಸ್ತಂಭ. ವಿಶ್ವ ಶಾಂತಿಯ ಹೊಣೆಗಾರಿಕೆ ಮಾಧ್ಯಮದ ಮೇಲಿದೆ, ಏಕೆಂದರೆ ಅದರ ಬಳಿ ಕಲಂ ಮತ್ತು ಮೈಕ್ ಎಂಬ ಬಲವಿದೆ,” ಎಂದು ಹೇಳಿದರು.


ಮೀಡಿಯಾ ವಿಭಾಗದ ಉಪಾಧ್ಯಕ್ಷೆ ಬಿ.ಕೆ. ಸರಳಾ ದೀದಿ ಅವರು ಮಹಾಸಮ್ಮೇಳನದಲ್ಲಿ ರೂಪುಗೊಂಡ ಏಳು ಸೂತ್ರಗಳ ಕ್ರಿಯಾಯೋಜನೆಯನ್ನು ಸಭೆಗೆ ಮಂಡಿಸಿದರು. ಈ ಯೋಜನೆಗೆ ಏಕಮತದಿಂದ ಅನುಮೋದನೆ ದೊರೆಯಿತು. ಸಕಾರಾತ್ಮಕ ಮತ್ತು ಪರಿಹಾರಾಧಾರಿತ ಪತ್ರಿಕೋದ್ಯಮಕ್ಕೆ ಒತ್ತು ನೀಡುವುದು, ಸಾಂಸ್ಕೃತಿಕ ಸಂವಾದವನ್ನು ಉತ್ತೇಜಿಸುವುದು, ನೈತಿಕ ಮೌಲ್ಯಗಳನ್ನು ಬೆಳೆಸುವುದು ಮತ್ತು ಮಾಧ್ಯಮ ಕಾರ್ಯಕರ್ತರ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದು ಇದರ ಮುಖ್ಯ ಅಂಶಗಳಾಗಿವೆ.
ಮೌಂಟ್ ಅಬು ಪರ್ವತ ದ ಜ್ಞಾನಸರೋವರದಲ್ಲಿ ನಡೆದ ಈ ನಾಲ್ಕು ದಿನಗಳ ರಾಷ್ಟ್ರೀಯ ಮೀಡಿಯಾ ಮಹಾಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ 450ಕ್ಕೂ ಹೆಚ್ಚು ಪತ್ರಕರ್ತರು ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಆರಂಭದಲ್ಲಿ ಬಿ.ಕೆ. ರಾಘವೇಂದ್ರ ಅವರು ಅತಿಥಿಗಳನ್ನು ಸ್ವಾಗತಿಸಿದರು. ಬ್ರಹ್ಮಾಕುಮಾರಿಗಳ ಮಹಿಳಾ ವಿಭಾಗದ ರಾಷ್ಟ್ರೀಯ ಸಂಯೋಜಕಿ ಬಿ.ಕೆ. ಸವಿತಾ ದೀದಿ ಅವರು ಪ್ರೇರಣಾದಾಯಕ ಭಾಷಣ ನೀಡಿದರು. ವಡೋದರಾದ ಮೀಡಿಯಾ ವಿಭಾಗದ ಸಬ್‌ಜೋನಲ್ ಸಂಯೋಜಕ ಬಿ.ಕೆ. ನರೇಂದ್ರ ಭಾಯಿ ಅವರು ಧನ್ಯವಾದಗಳನ್ನು ಅರ್ಪಿಸಿದರು. ಸಮಾರಂಭವನ್ನು ಅಜ್ಮೇರಿನಿಂದ ಆಗಮಿಸಿದ ಬಿ.ಕೆ. ಯೋಗಿನಿ ಸಹೋದರಿ ಯಶಸ್ವಿಯಾಗಿ ನಿರ್ವಹಿಸಿದರು.