ಸರಣಿ ಬೆಲೆ ಏರಿಕೆ ಮಾಡಿದ ಸರ್ಕಾರದ ವಿರುದ್ಧ ಸಮರ ಸಾರಿದ ಬಿಜೆಪಿ, ಜನಾಕ್ರೋಶ ಯಾತ್ರೆಗೆ ಚಾಲನೆ

ಸರಣಿ ಬೆಲೆ ಏರಿಕೆ ಮಾಡಿದ ಸರ್ಕಾರದ ವಿರುದ್ಧ ಸಮರ ಸಾರಿದ ಬಿಜೆಪಿ, ಜನಾಕ್ರೋಶ ಯಾತ್ರೆಗೆ ಚಾಲನೆ
ವೀರಮಾರ್ಗ ನ್ಯೂಸ್ ಬೆಂಗಳೂರು :
ಹಾಲು, ವಿದ್ಯುತ್, ಬಸ್ ಪ್ರಯಾಣ, ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಆಯೋಜಿಸಿರುವ 16 ದಿನಗಳ ಜನಾಕ್ರೋಶ ಯಾತ್ರೆಗೆ ಇಂದಿನಿಂದ ಮೈಸೂರಿನಲ್ಲಿ ಚಾಲನೆ ನೀಡಿಲಾಗಿದ್ದು, ಸರ್ಕಾರದ ವಿರುದ್ದ ರಣಕಹಳೆ ಮೊಳಗಿಸಿದೆ. ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಿಂದಲೇ ಚಾಲನೆ ನೀಡಿರುವುದು ವಿಶೇಷವಾಗಿದೆ.
ಬೆಂಗಳೂರಿನಲ್ಲಿ ಹೋರಾಟವನ್ನು ಕೊನೆಗೊಳಿಸಲಿದೆ. ಅಷ್ಟರಲ್ಲಿ ತಮ ಬೇಡಿಕೆಗಳಿಗೆ ಸರಕಾರ ಸ್ಪಂದಿಸಬೇಕು ಎನ್ನುವ ಎಚ್ಚರಿಕೆಯನ್ನೂ ಬಿಜೆಪಿ ನೀಡಿದೆ.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಧಿಕೃತ ವಿರೋಧ ಪಕ್ಷವಾದ ಬಿಜೆಪಿ ದೊಡ್ಡ ಮಟ್ಟದಲ್ಲಿ ಜನಾಂದೋಲನ ರೂಪಿಸಿರುವುದು ಇದೇ ಮೊದಲು.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬವರು ಮೂಡಾದಲ್ಲಿ ಕಾನೂನು ಬಾಹಿರವಾಗಿ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಹಾಗೂ ಜೆಡಿಎಸ್ ಬೆಂಗಳೂರಿನಿಂದ ಮೈಸೂರಿನವರೆಗೆ ಜಂಟಿ ಪಾದಯಾತ್ರೆಯನ್ನು ನಡೆಸಿದ್ದರು. ಆದರೆ, ಈಗ ಬಿಜೆಪಿಯೊಂದೇ ಏಕಾಂಗಿಯಾಗಿ ಸರ್ಕಾರದ ವಿರುದ್ದ ಬೃಹತ್ ಪ್ರಮಾಣದಲ್ಲಿ ಬೀದಿಗಿಳಿದು ಹೋರಾಟಕ್ಕೆ ಧುಮುಕಿರುವುದು ವಿಶೇಷವಾಗಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಿನ ಅಧಿದೇವತೆ ಚಾಮುಂಡಿಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಿದರು. ಪಕ್ಷದ ಅಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಸಿ.ಎನ್. ಅಶ್ವತ್ಥನಾರಾಯಣ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಬಿ. ಶ್ರೀರಾಮುಲು, ಬೈರತಿ ಬಸವರಾಜು, ಸಿ.ಟಿ. ರವಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಹಾಲಿ ಸಂಸದ ಯದವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಸೆಂಟ್ರಲ್ ಪ್ಟೋ? ಆಫೀಸ್ ವೃತ್ತದಿಂದ ಅಶೋಕ ಮಾರ್ಗವಾಗಿ ಗಾಂಧಿ ಚೌಕದವರೆಗೆ ಪಾದಯಾತ್ರೆ ನಡೆಸಲಾಯಿತು. ಗಾಂಧಿ ಚೌಕದ ಬಳಿ ತೆರೆದ ವಾಹನದಲ್ಲಿ ನಾಯಕರು ಜನರನ್ನು ಉದ್ದೇಶಿಸಿ ಮಾತನಾಡಿದರು. ಬೆಲೆ ಏರಿಕೆ ಮಾತ್ರವಲ್ಲದೆ, ಮುಸ್ಲಿಂ ಓಲೈಕೆ, ದಲಿತರ ಹಣ ಲೂಟಿ, ರೈತರನ್ನು ಅವಗಣಿಸಿದ ಭ್ರಷ್ಟ ಕಾಂಗ್ರೆಸ್ ಸರಕಾರ ಎಂದು ಆರೋಪಿಸಿರುವ ಬಿಜೆಪಿ ಎ. 7ರಿಂದ ಮೇ 3ರ ವರೆಗೆ ಅಂದರೆ 16 ದಿನಗಳ ಕಾಲ ಒಟ್ಟು 4 ಹಂತಗಳ ಹೋರಾಟವನ್ನು ರೂಪಿಸಿದೆ.
ರಾಜ್ಯದಲ್ಲಿ ಕಳೆದ ಇಪ್ಪತ್ತು ತಿಂಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆ ನಿರಂತರವಾಗಿದೆ. ಸಾಮಾನ್ಯ ಜನರಿಗೆ ಬರೆ ಎಳೆಯುವ ಕೆಲಸವಾಗುತ್ತಿದೆ. ದುಬಾರಿ ಜೀವನವನ್ನು ನಾಡಿನ ಜನ ನಡೆಸುವ ದುಸ್ಥಿತಿ ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿದೆ. ಉಸಿರಾಡುವ ಗಾಳಿ ಬಿಟ್ಟರೆ ಉಳಿದ ಎಲ್ಲವೂ ಬೆಲೆ ಏರಿಕೆ ನಿರಂತರವಾಗಿದೆ. ಮತದಾರರಿಗೆ ವರದಾನ ಆಗುವ ಬದಲು ಸರ್ಕಾರ ಶಾಪಗ್ರಸ್ಥವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ವಿದ್ಯುತ್ ದರ ಏಪ್ರಿಲ್ ೧ರಿಂದ ಪ್ರತಿ ಯೂನಿಟ್ ಗೆ 36 ಪೈಸೆ ಜಾಸ್ತಿ ಮಾಡಿದ್ದಾರೆ. ಹಾಲಿನ ದರ ನಾಲ್ಕು ರೂಪಾಯಿ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಮೂರನೇ ಬಾರಿ ಜಾಸ್ತಿ ಮಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲೂ ಚಿಕಿತ್ಸೆ ದರ ಜಾಸ್ತಿ ಮಾಡಿದ್ದಾರೆ. ಬಡವರು, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗುವ ಜನರಿಗೂ ಬರೆ ಎಳೆಯುತ್ತಿದೆ. ಅಫಿಡವಿಟ್, ಮುದ್ರಾಂಕ ಶುಲ್ಕ, ವೃತ್ತಿಪರ ತೆರಿಗೆ, ಬಸ್ ದರ ಜಾಸ್ತಿ ಮಾಡಿದ್ದಾರೆ. ರಾಜ್ಯದ ಜನತೆಯ ಮೇಲೆ ಬೆಲೆ ಏರಿಕೆಯ ಹೊರೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನಡೆಯನ್ನು ಖಂಡಿಸಿ ಜನಾಕ್ರೋಶ ಯಾತ್ರೆಯನ್ನು ನಡೆಸಲಿದೆ.
38.060 ಕೋಟಿ ಎಸ್‌ಸಿ, ಟಿಪಿಎಸ್ ಹಣ ದುರುಪಯೋಗ ಆಗಿದೆ. ಇದನ್ನು ನಾವು ಖಂಡಿಸುತ್ತಿದ್ದೇವೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ಎರಡು ಪ್ರಮುಖ ಹೋರಾಟ ಮಾಡುತ್ತೇವೆ. ಇಂದು ಮೈಸೂರು ಭಾಗದಲ್ಲಿ ಹೋರಾಟ ನಡೆಯುತ್ತದೆ. ನಾಳೆ ಮಂಡ್ಯ, ಏ.9 ರಂದು ಕೊಡಗು, ಮಂಗಳೂರು, ೧೦ರಂದು ಉಡುಪಿ, ಚಿಕ್ಕಮಗಳೂರಿನಲ್ಲಿ ಹೋರಾಟ ಮಾಡುತ್ತೇವೆ. ೨ನೇ ಹಂತದ ಹೋರಾಟ ಶಿವಮೊಗ್ಗದಿಂದ 13ರಂದು ಆರಂಭವಾಗುತ್ತದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ನವರು ಮುಸ್ಲಿಂ ಒಲೈಕೆಗಾಗಿ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಯಾಕೆ ಜನಾಕ್ರೋಶ ಯಾತ್ರೆ?
ಒಟ್ಟು ನಾಲ್ಕು ಹಂತಗಳಲ್ಲಿ ಯಾತ್ರೆ ನಡೆಯಲಿದೆ

ಹಂತ-1 : ಇಂದು ಮಂಡ್ಯ ಹಾಗೂ ಹಾಸನ, ಏ. 9- ಕೊಡಗು ಮತ್ತು ಮಂಗಳೂರು, ಏ. 10- ಉಡುಪಿ ಹಾಗೂ ಚಿಕ್ಕಮಗಳೂರು, ಏ 11-ಉತ್ತರ ಕನ್ನಡ ಮತ್ತು ಏ. 12 ಶಿವಮೊಗ್ಗ.
ಹಂತ-2 : ಏ. 15- ನಿಪ್ಪಾಣಿ, ಏ. 16- ಬೆಳಗಾವಿ, ಹುಬ್ಬಳ್ಳಿ. ಏ. 17- ಬಾಗಲಕೋಟೆ, ವಿಜಯಪುರ. ಏ. 18- ಕಲಬುರಗಿ, ಬೀದರ್, ಚಡಚಣ.

ಹಂತ- 3 : ಏ. 21- ದಾವಣಗೆರೆ, ಹಾವೇರಿ. ಏ. 22-ಗದಗ, ಕೊಪ್ಪಳ. ಏ. 23- ಯಾದಗಿರಿ, ರಾಯಚೂರು. ಏ. 24- ಬಳ್ಳಾರಿ, ವಿಜಯನಗರ. ಏ. 25- ಚಿತ್ರದುರ್ಗ, ತುಮಕೂರು.
ಹಂತ-4 : ಎ. 27- ಕೋಲಾರ, ಚಿಕ್ಕಬಳ್ಳಾಪುರ. ಮೇ 3- ಬೆಂಗಳೂರು ಮಹಾನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ.

Leave a Reply

Your email address will not be published. Required fields are marked *