ಹಳ್ಳಿ ಕಾಲೇಜುಗಳಲ್ಲಿ ಕ್ಷೀಣಿಸುತ್ತಿರುವದು, ಹೆಚ್ಚಾಗಲು ಪ್ರಾಚಾರ್ಯರ ಸಂಕಲ್ಪ.

ಹಳ್ಳಿ ಕಾಲೇಜುಗಳಲ್ಲಿ ಕ್ಷೀಣಿಸುತ್ತಿರುವ ದಾಖಲಾತಿ, ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಳಕ್ಕೆ ಪ್ರಾಚಾರ್ಯರ ಸಂಕಲ್ಪ.

ವರದಿ : ಚಂದ್ರಶೇಖರ ಅಕ್ಕಿ, ಕುಣಿಮೆಳ್ಳಿಹಳ್ಳಿ.


ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಮಳೆ, ಗಾಳಿ, ಬಿರು ಬಿಸಿಲಿನ ಬೇಗೆಯನ್ನ ಲೆಕ್ಕಿಸದೇ ಸರಕಾರಿ ಕಾಲೇಜಿನ ಪ್ರಾಚಾರ್ಯರು ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಪ್ರತಿದಿನ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಪ್ರೌಢ ಶಾಲೆ ಹಾಗೂ ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡುವ ಮೂಲಕ ಕಾಲೇಜಿನ ಪ್ರವೇಶಾತಿ ಹೆಚ್ಚಿಸಲು ಮತ್ತು ಕಾಲೇಜು ಉಳಿವಿಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಕುಣಿಮೆಳ್ಳಿಹಳ್ಳಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅರವಿಂದ ಐರಣಿ ಹಾಗೂ ಸಿಬ್ಬಂದಿ ವರ್ಗದವರು ಕಾಲೇಜಿನ ಉಳಿವು ಹಾಗೂ ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಿಸಲು ದೃಢ ಸಂಕಲ್ಪ ಮಾಡಿದ್ದಾರೆ. ಪ್ರಸ್ತುತ ಎಸ್ಸೆಸ್ಸೆಲ್ಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಮನೆಗಳಿಗೆ ಹಾಗೂ ಶಾಲೆಗಳಿಗೆ ಪ್ರಾಚಾರ್ಯರು ತಮ್ಮ ತಂಡದೊಂದಿಗೆ ಪ್ರತಿದಿನ ತೆರಳಿ ಕುಣಿಮೆಳ್ಳಿಹಳ್ಳಿ ಸರಕಾರಿ ಪ. ಪೂ ಕಾಲೇಜಿನಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ, ನುರಿತ ಉಪನ್ಯಾಸಕರಿಂದ ಪಾಠ ಪ್ರವಚನ, ಗ್ರಂಥಾಲಯ, ಕ್ರೀಡೆ, ಮನರಂಜನೆ, ಆಟದ ಮೈದಾನ, ಕುಡಿಯುವ ನೀರು, ಸಾರಿಗೆ ವ್ಯವಸ್ಥೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ, ವಿದ್ಯಾರ್ಥಿ ಸ್ಕಾಲರ್ಷಿಪ್ , ವೃತ್ತಿ ಮಾರ್ಗದರ್ಶನ, ವ್ಯಕ್ತಿತ್ವದ ವಿಕಾಸದ ಸಲಹಾ ಘಟಕ ಹೀಗೆ ಅನೇಕ ಬಗೆಯ ಸೌಲಭ್ಯಗಳನ್ನು ನೀಡುವುದರಲ್ಲಿ ಉನ್ನತ ಸ್ಥಾನದಲ್ಲಿದೆ. ಹೀಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಲೇಜಿಗೆ ಪ್ರವೇಶಾತಿ ಪಡೆಯುವ ಮೂಲಕ ಕಾಲೇಜಿನಲ್ಲಿ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ.

ಸ್ಮಾರ್ಟ್ ಕ್ಲಾಸ್ ಬೋಧನೆ ಸವಣೂರು ತಾಲ್ಲೂಕಿನಲ್ಲಿಯೇ ಕುಣಿಮೆಳ್ಳಿಹಳ್ಳಿ ಸರ್ಕಾರಿ ಪಿಯು ಕಾಲೇಜು ಸ್ಮಾರ್ಟ್ ಕ್ಲಾಸ್ ಹೊಂದಿರುವ ಏಕೈಕ ಕಾಲೇಜು ಆಗಿದ್ದು ಇಲ್ಲಿ ಕಂಪ್ಯೂಟರ್ ಆಧಾರಿತ ಡಿಜಿಟಲ್ ಶಿಕ್ಷಣದ ಸೌಲಭ್ಯವನ್ನು ಪಡೆಯಬಹುದು.

ನಮ್ಮ ಊರು ನಮ್ಮ ಹೆಮ್ಮೆ ಕುಣಿಮೆಳ್ಳಿಹಳ್ಳಿ ಮನ್ನಂಗಿ, , ತೆವರಮೆಳ್ಳಿಹಳ್ಳಿ, ಚಲ್ಲಾಳ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರೌಢ ಶಾಲೆಗಳು ಇದ್ದು, ಪಿಯು ಕಾಲೇಜು ಇರುವ ಕುಣಿಮೆಳ್ಳಿಹಳ್ಳಿ ಗ್ರಾಮ ಈ ಊರುಗಳಿಗೆ ಮೂರ್ನಾಲ್ಕು ಕಿಮೀ ಆಸುಪಾಸು ದೂರದಲ್ಲಿ ಇದೆ. ವಿದ್ಯಾರ್ಥಿಗಳು ಸಮೀಪದಲ್ಲಿರುವ ಕಾಲೇಜು ಬಿಟ್ಟು, 12-15 ಕಿಮೀ ಇರುವ ಹಾವೇರಿ, ಸವಣೂರು, ಶಿಗ್ಗಾವಿ ಹೋಗುವುದನ್ನು ಬಿಟ್ಟು ಗ್ರಾಮಿಣ ಮಟ್ಟದ ಕಾಲೇಜಿಗೆ ಪ್ರವೇಶ ಪಡೆದು ಉಳಿಸಿ ಬೆಳೆಸಬೇಕಾಗಿದೆ.

ಶಿಕ್ಷಣ ಅಷ್ಟಕ್ಕಷ್ಟೇ: ನಗರ ಪ್ರದೇಶದಲ್ಲಿ ಇರುವ ಕಾಲೇಜುಗಳಲ್ಲಿ ನೂರಾರು ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಕೂಡಿ ಹಾಕಿ ಅಭ್ಯಾಸ ಮಾಡುವುದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಅಭ್ಯಾಸಕ್ಕೆ, ಶಾಂತತೆಗೆ ಧಕ್ಕೆ ಬರುವ ಸಾಧ್ಯತೆ ಇರುತ್ತದೆ. ಆದರೆ ಹಳ್ಳಿಗಳಲ್ಲಿ ಇರುವ ಕಾಲೇಜಿನಲ್ಲಿ ಉತ್ತಮ ಉಪನ್ಯಾಸಕರು, ಮೂಲಭೂತ ಸೌಕರ್ಯ ದ ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಪ್ರತಿ ವಿದ್ಯಾರ್ಥಿಯ ಕಲಿಕೆಗೆ ವೈಯುಕ್ತಿಕ ಮತ್ತು ಸಮರ್ಪಕ ಮಾರ್ಗದರ್ಶನ ಸಿಗುತ್ತದೆ. ಆದರೆ ಈ ಸೌಲಭ್ಯಗಳು ನಗರ ಪ್ರದೇಶದ ಕಾಲೇಜುಗಳಲ್ಲಿ ಸಿಗುವುದು ತುಂಬಾ ಅಪರೂಪ.

ಕೋಟ್:
ನಾನು ಸರಕಾರಿ ನೌಕರ ಈ ಕಾಲೇಜು ಇಲ್ಲವಾದರೆ ಬೇರೆ ಕಾಲೇಜಿಗೆ ಹೋಗಬಹುದು. ಹಳ್ಳಿಯ ಸಂಸ್ಕಾರ ಇತ್ತಿಚೆಗೆ ಪಟ್ಟಣದಲ್ಲಿ ಕಡಿಮೆಯಾಗುತ್ತಿದೆ ವಿದ್ಯಾರ್ಥಿಗಳು ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿ ಕಾಲೇಜು ಮುಚ್ಚುವ ಸಾಧ್ಯತೆ ಇದೆ ಮಕ್ಕಳು ಗ್ರಾಮಿಣ ಕಾಲೇಜಿನಲ್ಲಿ ಓದಿ ಕಾಲೇಜು ಉಳಿಸಬೇಕೆಂಬ ಎಂಬ ಉದ್ದೇಶದಿಂದ ದಾಖಲಾತಿ ಹೆಚ್ಚಿಸಲು ಈ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರ ಬೆಂಬಲ ಮತ್ತು ಸಹಕಾರವೂ ಕೂಡ ಸಿಕ್ಕಿದೆ. ಗುಣಾತ್ಮಕ ಶಿಕ್ಷಣ, ಮತ್ತು ಗ್ರಾಮೀಣ ಸಂಸ್ಕೃತಿ ಮತ್ತು ಸಂಸ್ಕಾರ ಮುಂದಿನ ಪೀಳಿಗೆಗೆ ವರ್ಗಾವಣೆಗೊಳ್ಳಬೇಕು. ಗ್ರಾಮ ಮಟ್ಟದ ಕಾಲೇಜಿನಲ್ಲಿ ಓದಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ರೂಪಿಸಿಕೊಂಡವರ ಅಸಂಖ್ಯಾತ ಯಶೋಗಾಥೆಗಳು ಈಗಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕಾಗಿದೆ.

ಅರವಿಂದ ಐರಣಿ, ಪ್ರಾಚಾರ್ಯರು, ಪಿಯು ಕಾಲೇಜು, ಕುಣಿಮೆಳ್ಳಿಹಳ್ಳಿ .