ಸಂಸ್ಕೃತಿ, ಸಂಸ್ಕಾರ ಉಳಿಯಲು ವೀರಶೈವ ಲಿಂಗಾಯತ ಮಠಗಳ ಪಾತ್ರ ದೊಡ್ಡದು: ಬಸವರಾಜ ಬೊಮ್ಮಾಯಿ.
ವೀರಮಾರ್ಗ ನ್ಯೂಸ್ : ಗದಗ : ವೈಚಾರಿಕ ಕ್ರಾಂತಿಯ ಜೊತೆಗೆ ಸಾಮಾಜಿಕ ಕ್ರಾಂತಿ ಮಾಡಿದವರು ಗದಗಿನ ಲಿಂಗೈಕ್ಕೆ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು, ಸಮಾಜದಲ್ಲಿ ಸಂಸ್ಕೃತಿ, ಸಂಸ್ಕಾರ ಉಳಿಯಲು ವೀರಶೈವ ಲಿಂಗಾಯತ ಮಠಗಳ ಪಾತ್ರ ದೊಡ್ಡದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗ ತೋಂಟದಾರ್ಯ ಮಠದ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 76 ನೇ ಜಯಂತಿ ಹಾಗೂ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಗದಗಿನ ಇತಿಹಾಸದಲ್ಲಿ ಒಂದು ವಿನೂತನವಾದ ಅಧ್ಯಾಯವನ್ನು ಬರೆದಿಟ್ಟು ನಮ್ಮೆಲ್ಲರಿಗೂ ಸದಾಕಾಲ ಮಾರ್ಗದರ್ಶನ ಮಾಡುತ್ತಿರುವ ಲಿಂ. ತೋಂಟದ ಸಿದ್ದಲಿಂಗ ಮಹಾಸ್ವಾಮಿಯನ್ನು ಭಕ್ತಿ ಭಾವದಿಂದ ಪುಣ್ಯಸ್ಮರಣೆ ಮಾಡಬೇಕು ಎಂದರು.
ಗಾಂಧೀಜಿ ನನ್ನ ಜೀವನವೇ ಒಂದು ಸಂದೇಶ ಅಂತ ಹೇಳಿದ್ದರು. ಅದೇ ರೀತಿ ನಮ್ಮ ಹಿರಿಯ ಗುರುಗಳ ಜೀವನವೇ ಒಂದು ಸಂದೇಶ. ಬಹಳ ಅರ್ಥ ಪೂರ್ಣ ಜೀವನ ನಡೆಸಿದರು. ಇತ್ತೀಚಿನ ದಿನಗಳಲ್ಲಿ ಆದರ್ಶ, ಆದ್ಯಾತ್ಮಿಕ ಜೀವನ ನಡೆಸಿದವರು ಗದಗಿನ ಸಿದ್ದಲಿಂಗ ಮಹಾಸ್ವಾಮಿಗಳು, ಅವರ ಸಾಮಿಪ್ಯಕ್ಕೆ ಹೋದರೆ ಅವರ ಚಿಂತನೆ, ಅವರ ವಿಚಾರ, ತಾಯಿಯ ಹೃದಯ, ಪ್ರೀತಿ, ವಿಶ್ವಾಸ ಅನುಭವಕ್ಕೆ ಬರುತ್ತದೆ. ಸರಳವಾಗಿ ಸ್ಥಾನಿಕ ಭಾಷೆಯಲ್ಲಿ ಎಲ್ಲ ವಿಚಾರ ಹೇಳುತ್ತಿದ್ದರು. ಅವರ ಜನಪರ ಚಿಂತನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಭಾಗದಲ್ಲಿ ವೈಚಾರಿಕ ಕಾಂತಿಯ ಜೊತೆಗೆ ಸಾಮಾಜಿಕ ಕ್ರಾಂತಿ ಮಾಡಿದವರು ಗದಗಿನ ಸ್ವಾಮೀಜಿಗಳು. ಸಮಾಜದಲ್ಲಿ ಅನಿಷ್ಠ ಪದ್ಧತಿಗಳ ವಿರುದ್ಧ ಸಿದ್ದಲಿಂಗ ಸ್ವಾಮೀಜಿ ಹೋರಾಟ ಮಾಡಿದ್ದರಿಂದ ಈ ಭಾಗದಲ್ಲಿ ಸಂಸ್ಕೃತಿ ಸಂಸ್ಕಾರ ಉಳಿದಿದೆ ಎಂದರು.
ಬಸವ ತತ್ವ ಆಧಾರದಲ್ಲಿ ಶ್ರೀಮಠ ನೂರಾರು ವರ್ಷಗಳಿಂದ ನಡೆಯುತ್ತ ಬಂದಿದೆ. ಕಾಯಕ ಮತ್ತು ದಾಸೋಹದ ಮೂಲಕ ರಾಜ್ಯದಲ್ಲಿ ಮಠ ಮಾನ್ಯಗಳು ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ಸಂಸ್ಕೃತಿ, ಸಂಸ್ಕಾರ ಇದ್ದರೆ ಅದಕ್ಕೆ ವೀರಶೈವ ಲಿಂಗಾಯತ ಮಠಗಳ ಪಾತ್ರ ಬಹಳ ದೊಡ್ಡದು. ಒಬ್ಬ ರಾಜಕಾರಣಿಗಳು ಮಠಗಳಿಗೆ ಅಷ್ಟೊಂದು ಮಹತ್ವ ಏಕೆ ಎಂದು ಪ್ರಶ್ನಿಸಿದರು. ನಾನು ಅವರಿಗೆ ನಿಮಗೆ ಸಂಸ್ಕೃತಿಯ ದರ್ಶನವಾಗಿಲ್ಲ. ಎಲ್ಲಿ ಮಠಗಳಿವೆಯೋ ಅಲ್ಲಿ ಜ್ಞಾನ ಇದೆ. ವಿಜ್ಞಾನ ಇದೆ. ಸಂಸ್ಕೃತಿ ಇದೆ. ನಮ್ಮ ಸರ್ಕಾರಗಳು ಮಾಡದ ಕೆಲಸವನ್ನು ಮಠಗಳು ಮಾಡುತ್ತಿವೆ. ಬ್ರಿಟೀಷರ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವನ್ನು ಮಠಗಳು ಮಾಡಿವೆ. ಸಮಾನತೆ ಕೇವಲ ಮಾತಿನಲ್ಲಿ ಅಲ್ಲ. ಆಚರಣೆಯಲ್ಲಿ ತಂದಿರುವುದು ಮಠಗಳು. ಅಂತಹ ಶ್ರೇಷ್ಠ ಮಠಗಳ ಸಾಲಿನಲ್ಲಿ ಗದಗ ತೋಂಟದಾರ್ಯ ಮಠ ಇದೆ ಎಂದರು.ಸಮಾಜದಲ್ಲಿ ಎರಡು ರೀತಿಯ ಸ್ವಾಮೀಜಿಗಳು ಇರುತ್ತಾರೆ. ಬದುಕಿನಿಂದ ದೂರವಾಗಿ ಹಿಮಾಲಯದಲ್ಲಿ ತಪಸ್ಸು ಮಾಡಿ ಜ್ಞಾನೋದಯ ಆಗಿದೆ ಎಂದು ಹೇಳುವ ಸ್ವಾಮಿಗಳು ಒಂದು ವರ್ಗ.
ಇನ್ನೊಂದು ವರ್ಗದ ಸ್ವಾಮೀಜಿಗಳು ಇದೇ ಸಂಸ್ಕಾರ, ಇದೇ ಸಮಾಜ, ಸಂಸಾರದಲ್ಲಿ ಇದ್ದು, ಬದುಕಿನ ಎಲ್ಲ ಸವಾಲುಗಳನ್ನು ಎದುರಿಸಿ ಆದರ್ಶ ಬದುಕು ನಡೆಸಿ. ಮಾರ್ಗದರ್ಶನ ಮಾಡಿ, ಇಡೀ ಜಗತ್ತಿಗೆ ಬೆಳಕು ಕೊಡುವ ಬಸವ ತತ್ವ ಪಸರಿಸುವ ಸ್ವಾಮೀಜಿಗಳು ಇದ್ದಾರೆ. ಇವರಲ್ಲಿ ಯಾರು ಶ್ರೇಷ್ಠರು ಎನ್ನುವುದಕ್ಕೆ ಸ್ವಾಮೀ ವಿವೇಕಾನಂದರ ಜೀವನದಲ್ಲಿ ನಡೆದ ಘಟನೆ ಉತ್ತರ ನೀಡುತ್ತದೆ. ಸ್ವಾಮೀ ವಿವೇಕಾನಂದರು ಅಗಾಧವಾದ ಜ್ಞಾನ ಪಡೆದು ರಾಮಕೃಷ್ಣ ಪರಮಹಂಸರ ಬಳಿ ಹೋಗಿ ನನಗೆ ಸಾಕ್ಷಾತ್ಕಾರವಾಗಿದೆ.
ನಾನು ಮುಕ್ತಿ ಹೊಂದಲು ಇಚ್ಛೆ ಪಡುತ್ತೇನೆ ನನಗೆ ಆಶೀರ್ವಾದ ಮಾಡಿ ಎಂದು ಹೇಳಿದರು. ಅದಕ್ಕೆ ಪರಮಹಂಸರು ನಿನಗೆ ಸಾಕ್ಷಾತ್ಕಾರವಾದರೆ ಮುಖ್ಯವಲ್ಲ. ನಿನ್ನ ಜ್ಞಾನದ ಶಕ್ತಿಯನ್ನು ಸಮಾಜಕ್ಕೆ ಪ್ರಸಾರ ಮಾಡಿದಾಗ ಅದು ಸಾರ್ಥಕವಾಗುತ್ತದೆ ಎಂದು ಹೇಳಿದರು. ಅಂದಿನಿಂದ ವಿವೇಕಾನಂದರ ಬದುಕಿನಲ್ಲಿ ಬಹಳ ದೊಡ್ಡ ಬದಲಾವಣೆ ಆಯಿತು. ದೇಶ, ಮಾನವೀತೆಯ ಬಗ್ಗೆ ಸಾಕಷ್ಟು ಬದಲಾವಣೆಯಾಯಿತು. ಹೀಗಾಗಿ ಸಣ್ಣ ವಯಸಿನಲ್ಲಿಯೇ ಸ್ವಾಮಿ ವಿವೇಕಾನಂದರು ಇಡೀ ಜಗತಿಗೆ ಬೆಳಕಾದರು ಎಂದರು.
ಸ್ವಾಮೀಜಿ ಪ್ರೇರಣೆ ರಾಜ್ಯದಲ್ಲಿ ಮಠಗಳು ಮಾಡುತ್ತಿರುವ ಸಂಸ್ಕೃತಿ ಮತ್ತು ಸಂಸ್ಕಾರದ ಕೆಲಸ ಹಿಮಾಲಯದಲ್ಲಿ ತಪಸ್ಸು ಮಾಡಿದ ಸ್ವಾಮೀಜಿಗಳಿಗಿಂತ ಶ್ರೇಷ್ಠ ತೋಂಟದ ಸಿದ್ದಲಿಂಗ ಸ್ವಾಮೀಜಿಗಳು ರೊಟ್ಟಿ ಮಾಡುವುದಕ್ಕೂ ಒಂದು ತತ್ವ ಹೇಳುತ್ತಿದ್ದರು. ಒಂದು ಬಾರಿ ನನಗೆ ಕರೆ ಮಾಡಿ ಸವಣೂರು ಕರೆ ದಂಡೆಯ ಮೇಲಿದ್ದೇನೆ. ಈ ಕೆರೆ ಯಾವಾಗ ತುಂಬುತ್ತ ಅಂತ ಅಂದುಕೊಂಡಿದ್ದೆ, ಈ ಕೆರೆಯನ್ನು ನೀವು ತುಂಬಿಸಿದ್ದೀರಿ ಅದಕ್ಕೆ ಕರೆ ಮಾಡಿದ್ದೇನೆ.
ನೀನು ತಾಲಾಬ್ ತುಂಬಿಸಿದ ನವಾಬ ಎಂದು ಹೇಳಿದ್ದರು. ಅವರ ಒಂದು ಮಾತು ಆ ಕ್ಷೇತ್ರದ 110 ಕೆರೆಗಳನ್ನು ತುಂಬಿಸಲು ಪ್ರೇರಣೆ ಆಯಿತು. ಕೆರೆ ತುಂಬಿಸುವ ಯೋಜನೆಯನ್ನು ನಾನೇ ಆರಂಭಿಸಿದ್ದೆ. ಈಗ ರಾಜ್ಯದಲ್ಲಿ ಸಾವಿರಾರು ಕೆರೆ ತುಂಬಿಸುವ ಕೆಲಸ ಆಗಿದೆ. ಅದಕ್ಕೆ ತೋಂಟದ ಶ್ರೀಗಳು ಪೇರಣೆ ಎಂದರು.ಪರಮಪೂಜ್ಯರು ಭಾವೈಕ್ಯತೆಯಲ್ಲಿ ಮುಂದು ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ. ಹುಟ್ಟಿನ ಮೂಲ ಮುಖ್ಯವಲ್ಲ. ಯಾರಿಗಾಗಿ ಹುಟ್ಟಿದ್ದೇವೆ ಎನ್ನುವುದು ಮುಖ್ಯವಲ್ಲ.
ಯಾರಿಗಾಗಿ ಬದುಕುತ್ತಿದ್ದೇವೆ ಎನ್ನುವುದು ಮುಖ್ಯ ಎಲ್ಲರಿಗಾಗಿ ಬದುಕುವುದು ಮುಖ್ಯ ಎಂದು ಪೂಜ್ಯರು ಹೇಳುತ್ತಿದ್ದರು. ಅವರ ಬಳಿ ಹೋದಾಗ ಹೊಸ ವಿಚಾರ ಕಲಿಯಲು ಅವಕಾಶ ಇತ್ತು. ಕಾಯಕ ಬಗ್ಗೆ ಅವರ ಮಾತು, ಕೃಷಿ ಬೆಳೆದಿದೆ. ರೈತ ಬೆಳೆದಿಲ್ಲ ಎಂದು ಚಿಂತಿಸುತ್ತಿದ್ದರು. ರಾಜಕಾರಣಿಗಳು ಮಾಡಬೇಕಾದ ಚಿಂತನೆಯನ್ನು ಸ್ವಾಮೀಜಿ ಮಾಡುತ್ತಿದ್ದರು. ರೈತನ ಬದುಕು ಹಸನು ಮಾಡಬೇಕು ಎನ್ನುವುದು ಪೂಜ್ಯರ ಬಯಕೆ ಆಗಿತ್ತು. ಸಮಾಜದ ಕಟ್ಟ ಕಡೆಯ ಜನರಿಗೆ ಸ್ವಾಭಿಮಾನದ ಬದುಕು ಕೊಟ್ಟವರು ಸ್ವಾಮೀಜಿ, ಪರಿಸರದ ಬಗ್ಗೆ ಸ್ವಾಮೀಜಿಗೆ ಅಪಾರವಾದ ಕಾಳಜಿ. ಗದಗಿನ ಕಪ್ಪತಗುಡ್ಡ ಉಳಿದಿದ್ದರೆ ಅದಕ್ಕೆ ತೋಂಟದ ಶ್ರೀಗಳು ಕಾರಣ.
ಇಂತಹ ಸಚ್ಚಾರಿತ್ರ್ಯ ಹೊಂದಿದ್ದ ಗುರುಗಳು ನಮ್ಮ ಜೊತೆ ಇನ್ನಷ್ಟು ದಿನ ಇರಬೇಕಿತ್ತು. ಅವರು ಮಾಡಿದ ಕೆಲಸಗಳು ನಮಗೆ ಪ್ರೇರಣೆಯಾಗಿವೆ. ಅವರ ಪುಣ್ಯಾರಾಧನೆ ನಿರಂತರ ನಡೆಯಲಿ ಎಂದರು.ಇತ್ತೀಚಿನ ದಿನಗಳಲ್ಲಿ ನಾಗರೀಕತೆ ಮತ್ತು ಸಂಸ್ಕೃತಿ ನಡುವಿನ ವ್ಯತ್ಯಾಸ ಗೊತ್ತಿಲ್ಲ. ನಮ್ಮ ಹತ್ತಿರ ಏನಿದೆಯೋ ಅದು ನಾಗರಿಕತೆ, ನಾವೇನಾಗಿದ್ದೇವೆಯೋ ಅದು ಸಂಸ್ಕೃತಿ. ಈಗಿನ ಪರಪೂಜ್ಯರು ನಾಗನೂರು ಭಾಗದಲ್ಲಿ ಬಸವ ತತ್ವ ಪಚಾರ ಮಾಡಿ ಕಾಂತಿ ಮಾಡಿದ್ದಾರೆ. ಅವರ ನೇತೃತ್ತದಲ್ಲಿ ತೋಂಟದಾರ್ಯ ಮಠದ ಪರಂಪರೆ ಮುಂದುವರೆಯುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತೋಂಟದಾರ್ಯ ಮಠದ ಪೀಠಾಧ್ಯಕ್ಷರಾದ ಡಾ ತೋಂಟದ ಸಿದ್ದರಾಮ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ನಿಜಗುಣ ಪಭು ತೋಂಟದಾರ್ಯಮಠ, ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ಶೀ ಪೂರ್ಣೇಶ್ವರ ಮಹಾಸ್ವಾಮಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಚಿವರಾದ ಸಿ.ಸಿ. ಪಾಟೀಲ, ಶಾಸಕ ಜೆ.ಎಸ್. ಪಾಟೀಲ್, ಮಾಜಿ ಸಂಸದ ಐ.ಜಿ. ಸನದಿ, ಪದ್ಮಶ್ರೀ ಭೀಮವ್ವ ಶಿಳ್ಳೇಕ್ಯಾತರ ಸೇರಿದಂತೆ ಅನೇಕ ಗಣ್ಯರು ಹಾಜರಾಗಿದ್ದರು.