ಶಾಸಕ ಯತ್ನಾಳ್‌ಗೆ ರೇಣುಕಾಚಾರ್ಯ ಸವಾಲು
ವೀರಮಾರ್ಗ ನ್ಯೂಸ್ ದಾವಣಗೆರೆ : ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯತ್ನಾಳ್ ಹಿಂದೂ ಹುಲಿಯಲ್ಲ, ನಕಲಿ ಹಿಂದೂ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಪಕ್ಷ ಸ್ಥಾಪಿಸಿ ಗೆದ್ದರೆ, ನಾವೇ ಹಿಂದೂ ಹುಲಿ ಎಂದು ಒಪ್ಪಿ ಗೌರವಿಸುತ್ತೇವೆ ಎಂದು ಶಾಸಕ ಯತ್ನಾಳ್ ಹೊಸ ಪಕ್ಷ ರಚಿಸುವ ಕುರಿತು ಪ್ರತಿಕ್ರಿಯಿಸಿದ್ದಾರೆ.

ಯತ್ನಾಳ್ ಒಂದು ಪಕ್ಷವನ್ನು ರಚಿಸಿದರೆ, ಅದು ಸಂತೋಷದ ಮತ್ತು ಸ್ವಾಗತಾರ್ಹ ವಿಷಯ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಟೀಕಿಸಿ ಅವರು ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದಾರೆ ಎಂದರ್ಥ. ಸರ್ವಾಧಿಕಾರಿ ಧೋರಣೆ ಕೈಬಿಡಬೇಕು. ನಾವು ಸ್ವಯಂ ಘೋಷಿತ ನಾಯಕರಾಗಬಾರದು, ಸಾರ್ವಜನಿಕರು ಮೆಚ್ಚುವ ನಾಯಕರಾಗಬೇಕು. ನೀವು ಭಾರತೀಯ ಜನತಾ ಪಕ್ಷದ ಚುನಾವಣಾ ಚಿಹ್ನೆಯ ಮೇಲೆ ನಿಂತು ಗೆದ್ದಿದ್ದೀರಿ. ನಿಮಗೆ ನಿಜವಾಗಿಯೂ ವರ್ಚಸ್ಸು ಇದ್ದರೆ, ನೀವು ನಿಜವಾಗಿಯೂ ಹಿಂದುತ್ವವಾದಿಯಾಗಿದ್ದರೆ ಮೊದಲು ನಿಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ ಗೆದ್ದರೆ, ನಾವು ನಿಮ್ಮನ್ನು ಅಭಿನಂದಿಸುತ್ತೇವೆ. ನಾವು ನಿಮ್ಮನ್ನು ಗೌರವಿಸುತ್ತೇವೆ ಎಂದು ಅವರು ಸವಾಲು ಹಾಕಿದ್ದಾರೆ.

ಯತ್ನಾಳ್ ಠೇವಣಿ ಇಟ್ಟ ಮೊತ್ತವನ್ನು ಪಡೆಯಲು ಸಹ ಸಾಧ್ಯವಾಗುವುದಿಲ್ಲ. ಇನ್ನು ಹೊಸ ಪಕ್ಷ ಕಟ್ಟಿ ೨೨೪ ಕ್ಷೇತ್ರಗಳಿಗೆ ಅಭ್ಯರ್ಥಿಗಳ ದೊರೆಯುವುದು ದೂರದ ಮಾತು.ಯತ್ನಾಳ್ ಅವರಿಗೆ ಯಾವುದೇ ಅಭ್ಯರ್ಥಿ ಸಿಗುದಿಲ್ಲ ಅವರು ಹಿಂದೂ ಪಕ್ಷವನ್ನು ರಚಿಸುವುದಾಗಿ ಹೇಳಿದ್ದಾರೆ. ಅವರು ತಮ್ಮನ್ನು ಹಿಂದೂ ಹುಲಿಗಳೆಂದು ಬಿಂಬಿಸಿಕೊಂಡಿದ್ದಾರೆ. ಸಮಯ ಬಂದಾಗ ಎಲ್ಲವೂ ಬಹಿರಂಗಗೊಳ್ಳುತ್ತದೆ ಎಂದು ಟೀಕಿಸಿದ್ದಾರೆ.