ಜೀವನದ ನಿಜವಾದ ಸಂಪತ್ತು ಆಹಾರ ಆರೋಗ್ಯ ಆಧ್ಯಾತ್ಮ : ರಂಭಾಪುರಿಶ್ರೀ
ವೀರಮಾರ್ಗ ನ್ಯೂಸ್ ಹುಬ್ಬಳ್ಳಿ : ಅಧರ್ಮಕ್ಕೆ ಹಲವು ದಾರಿ. ಆದರೆ ನಿಜವಾದ ಧರ್ಮಕ್ಕೆ ಒಂದೇ ದಾರಿ. ಅಶಾಂತಿಯಿಂದ ಬಳಲುತ್ತಿರುವ ಮನುಷ್ಯನಿಗೆ ಧರ್ಮವೊಂದೇ ಆಶಾಕಿರಣ. ಆಹಾರ ಆರೋಗ್ಯ ಆಧ್ಯಾತ್ಮ ನಿಜವಾದ ಸಂಪತ್ತೆಂಬುದನ್ನು ಯಾರೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ಶ್ರೀ ರಂಭಾಪುರಿ ಜಗದ್ಗುರುಗಳ ಜನ್ಮ ಭೂಮಿ ಹಳ್ಳಿಯಾಳ ಗ್ರಾಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ರಥೋತ್ಸವ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ವಿಪತ್ತಿನ ಕಾಲದಲ್ಲೂ ಧರ್ಮವನ್ನು ಬಿಡದಿರುವವನೇ ನಿಜವಾದ ಧರ್ಮಾತ್ಮ. ಹುಟ್ಟು ಸಾವು ನಮ್ಮ ಕೈಯಲ್ಲಿಲ್ಲ. ಆದರೆ ಬದುಕು ನಮ್ಮ ಕೈಯಲ್ಲಿದೆ. ಜಾತಿ ಜಂಜಡಗಳ ಜಗದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಶ್ವ ಬಂಧುತ್ವದ ಸಂದೇಶವನ್ನು ಅನುಗ್ರಹಿಸಿ ಉದ್ಧರಿಸಿದವರು. ವೀರಶೈವ ಧರ್ಮ ಸಂಹಿತೆಯಲ್ಲಿ ಜೀವನ ದರ್ಶನದ ಆಧ್ಯಾತ್ಮ ಚಿಂತನಗಳನ್ನು ಬೋಧಿಸಿ ಹರಸಿ ಉದ್ಧರಿಸಿದ್ದಾರೆ. ನದಿಯ ನೀರು ಮನುಷ್ಯನ ದಾಹವನ್ನು ಹಿಂಗಿಸುತ್ತದೆ. ವೃಕ್ಷವು ನೆರಳು ಹೂ ಹಣ್ಣು ಕಟ್ಟಿಗೆಯನ್ನು ಕೊಡುತ್ತದೆ. ಆಚಾರ್ಯ ಶ್ರೇಷ್ಠರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ ಅದರೊಂದಿಗೆ ಧರ್ಮ ಪ್ರಜ್ಞೆ ಸದಾಚಾರ ಬೆಳೆದು ಬರಬೇಕೆಂದು ಬೋಧಿಸಿದ್ದಾರೆ. ಗ್ರಾಮದ ಎಲ್ಲಾ ಸದ್ಭಕ್ತರು ಒಗ್ಗಟ್ಟಿನಿಂದ ಮತ್ತು ಸೌಹಾರ್ದತೆಯಿಂದ ರಥೋತ್ಸವ ನೆರವೇರಿಸಿದ್ದು ತಮಗೆ ಸಂತೋಷ ತಂದಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶ್ರೀಗಳು ಮಾತನಾಡಿ ಅನುಭವದಿಂದ ಸಿಗುವ ಜ್ಞಾನ ಓದಿನಿಂದ ಸಿಗುವುದಿಲ್ಲ. ವೀರಶೈವ ಧರ್ಮದಲ್ಲಿ ಜ್ಞಾನ ಮತ್ತು ಕರ್ಮಕ್ಕೆ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಹಸನಾದ ಬದುಕಿಗೆ ಆಧ್ಯಾತ್ಮದ ಅರಿವು ಮುಖ್ಯವೆಂದರು. ಸೂಡಿ ಜುಕ್ತಿ ಹಿರೇಮಠದ ಡಾ|| ಕೊಟ್ಟೂರು ಬಸವೇಶ್ವರ ಶ್ರೀಗಳು ಮಾತನಾಡಿ ಮನುಷ್ಯ ಧರ್ಮಕ್ಕೆ ತಲೆಬಾಗಬೇಕೆ ಹೊರತು ಅವಿವೇಕಿಗಳಿಗಲ್ಲ. ಮನುಷ್ಯ ಸ್ವಾರ್ಥಕ್ಕಾಗಿ ಆದರ್ಶ ಮೌಲ್ಯಗಳನ್ನು ಬಲಿ ಕೊಡಬಾರದೆಂದರು. ಹಳೇಹುಬ್ಬಳ್ಳಿ ಶಿವಪ್ರಸಾದ ದೇವರು ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಶ್ರೀ ಜಗದ್ಗುರು ರೇಣುಕಾಚಾರ್ಯರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
