ಅರಿವು ಆಚರಣೆಯಿಂದ ಬಾಳು ಸಾರ್ಥಕ : ರಂಭಾಪುರಿಶ್ರೀ
ವೀರಮಾರ್ಗ ನ್ಯೂಸ್ ಕಾಳಗಿ : ಅರಿವುಳ್ಳ ಮಾನವ ಜನ್ಮದಲ್ಲಿ ಅರಿತು ಬಾಳಿದರೆ ಬಾಳು ಬಂಗಾರ. ಮರೆತು ಮಲಗಿದರೆ ಬಾಳು ಬಂಧನಕಾರಿ. ಮಹಾತ್ಮರ ಸಂದೇಶಗಳು ಎಲ್ಲರಿಗೂ ದಾರಿದೀಪ. ಅರಿವು ಮತ್ತು ಆಚರಣೆಯಿಂದ ಬಾಳು ಸಾರ್ಥಕಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ತಾಲೂಕಿನ ಹದನೂರು ಹಿರೇಮಠದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಶ್ರೀ ಜಗದ್ಗುರು ರೇವಣಸಿದ್ಧೇಶ್ವರರ 10ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮಾನವನ ಉಸಿರಾಟಕ್ಕೆ ಗಾಳಿ ಎಷ್ಟು ಮುಖ್ಯವೋ ಅಷ್ಟೇ ಜೀವನದ ಉಜ್ವಲ ಭವಿಷ್ಯಕ್ಕೆ ಆಚಾರ್ಯರ ಮತ್ತು ಸತ್ಪುರುಷರ ಮಾರ್ಗದರ್ಶನದ ಅವಶ್ಯಕತೆಯಿದೆ. ಧರ್ಮದಿಂದ ಮನುಷ್ಯ ವಿಮುಖನಾದರೆ ಅವನತಿ ಶತಸಿದ್ಧ. ಮೂಲ ನಂಬಿಕೆಗಳನ್ನು ಉಳಿಸಿ ಬೆಳೆಸಿಕೊಂಡು ಬರುವುದರಿಂದ ಬಾಳಿನಲ್ಲಿ ಶಾಂತಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ. ಶ್ರೀ ಜಗದ್ಗುರು ರೇವಣಸಿದ್ಧೇಶ್ವರರು ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳ ಗಂಗೋತ್ರಿಯಾಗಿದ್ದಾರೆ. ಮಹಾತ್ಮರು ತೋರಿದ ದಾರಿ ಕೊಟ್ಟ ಸಂದೇಶ ಎಲ್ಲರಿಗೂ ಆಶಾಕಿರಣ ಎಂದರು.

ನೇತೃತ್ವ ವಹಿಸಿದ ಶ್ರೀನಿವಾಸ ಸರಡಗಿಯ ಡಾ|| ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಶುದ್ಧವಾದ ಬುದ್ಧಿ ಸಂಪತ್ತಿನ ಆಗರ. ತನಗಾಗಿ ಬಯಸುವುದು ಜೀವಗುಣ. ಎಲ್ಲರಿಗಾಗಿ ಬಯಸುವುದು ದೇವಗುಣ. ಅಧಿಕಾರದ ಅಂತಸ್ತು ಏರಿದಂತೆ ನೀತಿಯ ಅಂತಸ್ತು ಮೇಲೇರಬೇಕು. ಬದುಕಿ ಬಾಳುವ ಜನಾಂಗಕ್ಕೆ ವೀರಶೈವ ಧರ್ಮದ ಕೊಡುಗೆ ಅಪಾರವೆಂದರು.
ಈ ಪವಿತ್ರ ಸಮಾರಂಭದಲ್ಲಿ ಮುಗಳನಾಗಾಂವ ಅಭಿನವ ಸಿದ್ಧಲಿಂಗ ಶ್ರೀಗಳು, ಕಡಕೋಳ ರುದ್ರಮುನಿ ಶ್ರೀಗಳು, ತೋನಸನಳ್ಳಿ ರೇವಣಸಿದ್ಧ ಚರಂತೇಶ್ವರ ಶ್ರೀಗಳು, ಅವರಾದ ಮರುಳಸಿದ್ಧ ಶ್ರೀಗಳು, ಸೊಂತಮರ ಹಾಗೂ ನರನಾಳ ಶಿವಕುಮಾರ ಶ್ರೀಗಳು,ಶ್ರೀನಿವಾಸ ಸರಡಗಿ ವೀರಭದ್ರಯ್ಯ ಶ್ರೀಗಳು, ಹದನೂರು ತಾಂಡಾದ ಶಾಂತದೇವಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಹದನೂರು ಹಿರೇಮಠದ ಧರ್ಮದರ್ಶಿ ವೀರಭದ್ರಯ್ಯ ಹಿರೇಮಠ ಡಾ.ಶಿವಶಂಕರ್ ಬಿರಾದಾರ್ ಉಪಸ್ಥಿತರಿದ್ದರು. ನಗನೂರ ಜಗದೀಶ್ ಶರಣರ ಸಂಗೀತಕ್ಕೆ ಸಿದ್ಧಯ್ಯಸ್ವಾಮಿ ಸಾಲಿ ತಬಲಾ ಸಾಥ ನೀಡಿದರು.
ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ನಂತರ ಶ್ರೀ ಹಿರೇಮಠದ ನೂತನ ಕಟ್ಟಡದ ಉದ್ಘಾಟನೆ ನಡೆಯಿತು. ಸಂಜೆ 6 ಗಂಟೆಗೆ ಶ್ರೀ ರೇವಣಸಿದ್ಧೇಶ್ವರ ರಥೋತ್ಸವ ಜರುಗಿತು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.