ಹಾವೇರಿ ವಿವಿ ವಿಲೀನ ಪ್ರಕ್ರಿಯೇ ರದ್ದತಿಗೆ ಆಗ್ರಹಶಾಂತಿಯುತ ಪ್ರತಿಭಟನೆಗೆ ಸರಕಾರ ಸ್ಪಂದಿಸದಿದ್ದರೇ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ತೀವ್ರ ಹೋರಾಟ : ಸದಾಶಿವಶ್ರೀ

ಹಾವೇರಿ ವಿವಿ ವಿಲೀನ ಪ್ರಕ್ರಿಯೇ ರದ್ದತಿಗೆ ಆಗ್ರಹ
ಶಾಂತಿಯುತ ಪ್ರತಿಭಟನೆಗೆ ಸರಕಾರ ಸ್ಪಂದಿಸದಿದ್ದರೇ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ತೀವ್ರ ಹೋರಾಟ : ಸದಾಶಿವಶ್ರೀ

ವೀರಮಾರ್ಗ ನ್ಯೂಸ್ ಹಾವೇರಿ : ರಾಜ್ಯ ಸರಕಾರ ಹಾವೇರಿ ವಿಶ್ವ ವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯನ್ನು ರದ್ದುಪಡಿಸಬೇಕು. ನಮ್ಮ ಶಾಂತಿಯುತವಾದ ಈ ಪ್ರತಿಭಟನೆಗೆ ಸರಕಾರ ಸ್ಪಂದಿಸದಿದ್ದರೆ ಜಿಲ್ಲೆಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಹೋರಾಟವನ್ನು ತೀವ್ರಗೊಳಸಬೇಕಾಗುತ್ತದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಬುಧವಾರ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಪಾಲ್ಗೊಂಡು ಮಾತನಾಡಿ, ಹಾವೇರಿ ಜಿಲ್ಲೆಯಾಗಿ ಇಪ್ಪತೈದು ವರ್ಷಗಳಾಗಿದ್ದರೂ ಅಭಿವೃದ್ಧಿಯಲ್ಲಿ ಹಿಂದೆಯೇ ಇದ್ದೇವೆ ಎಂದರು.
ಶೈಕ್ಷಣಿಕವಾಗಿಯಾದರೂ ಮುಂದುವರೆದಿದ್ದೇವೆ ಎಂದು ಹೇಳಿಕೊಳ್ಳಲಾಗುತ್ತಿಲ್ಲ ಈ ಕಾರಣದಿಂದಾಗಿ ಜಿಲ್ಲೆಯ ಬಡತನ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯಬೇಕು. ಶಿಕ್ಷಣಕ್ಕಾಗಿ ದಾವಣಗೆರೆ, ಧಾರವಾಡದಂತಹ ದೂರದ ನಗರಗಳಿಗೆ ಬಡ ಮಕ್ಕಳು ಅಲೆದಾಡುವಂತಾಗಬಾರದು. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸುಲಭವಾಗಿ ಸಿಗುವಂತಾಗಲು ಸರಕಾರ ನಮ್ಮ ಮನವಿಗೆ ಕಣ್ತೆರೆದು ಸ್ಪಂದಿಸಬೇಕು. ಹಾವೇರಿ ವಿಶ್ವವಿದ್ಯಾಲಯವನ್ನು ವಿಲೀನ ಅಥವಾ ವಿಸರ್ಜನೆ ಮಾಡದೇ ಅಗತ್ಯ ಅನುದಾನ ನೀಡಿ ಬೆಳೆಸುವ ಮೂಲಕ ಜಿಲ್ಲೆಗೆ ಶೈಕ್ಷಣಿಕ ಕೊಡುಗೆ ಕೊಡಬೇಕು ಎಂದು ಒತ್ತಾಯಿಸಿದರು.

ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿಯವರು ಮಾತನಾಡಿ, ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಅದರಲ್ಲೂ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಿರುವ ಹಾವೇರಿ ವಿಶ್ವ ವಿದ್ಯಾಲಯವನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯಿಂದ ಸರಕಾರ ಹಿಂದೆ ಸರಿಯಬೇಕು. ಇದಕ್ಕಾಗಿ ಜಿಲ್ಲೆಯ ಜನತೆ ಶಾಂತಿಯುತವಾಗಿ ಧ್ವನಿ ಎತ್ತಿರುವುದನ್ನು ಸರಕಾರ ಪರಿಗಣಿಸಬೇಕು. ಇಲ್ಲವಾದರೆ ಹೋರಾಟ ಬೇರೆಯೆ ತಿರುವು ಪಡೆಯುತ್ತದೆ, ಆದ್ದರಿಂದ ಸರಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ವಿಶ್ವ ವಿದ್ಯಾಲಯದ ಬೆಳವಣಿಗೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಎಂದರು.
ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಮಹಾಸ್ವಾಮೀಗಳು ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನು ಇಟ್ಟಿದ್ದೇವೆ. ಒಂದು ಸಾರಿ ನಮಗೆ ಸಿಕ್ಕ ಈ ವಿಶ್ವವಿದ್ಯಾಲಯದ ಅವಕಾಶವನ್ನು ನಾವು ಕಳೆದುಕೊಂಡರೆ ಮತ್ತೆ ನಾವು ಪಡೆದುಕೊಳ್ಳಲು ಸಾಧ್ಯವಿಲ್ಲ. ದೇಶ ಬೆಳೆಯಬೇಕಾದರೆ ಕೃಷಿ ಮತ್ತು ಶಿಕ್ಷಣ ಅಭಿವೃದ್ಧಿಗೊಂಡಾಗ ಮಾತ್ರ ದೇಶ ಸಮೃದ್ಧಿಗೊಳ್ಳಲು ಸಾಧ್ಯ. ಸರಕಾರ ಇದನ್ನು ಮನಗಾಣಬೇಕು. ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ನಿರಂತರವಾಗಿ ವಂಚನೆಗೊಳಗಾಗುತ್ತಿದೆ. ಹಾಗಾಗಿ ಸರಕಾರ ವಿಶ್ವ ವಿದ್ಯಾಲಯ ಮುಚ್ಚಲು ಅಥವಾ ವಿಲೀನಗೊಳಿಸಲು ಮುಂದಾಗಬಾರದು ಹಾಗೇನಾದರೂ ವಿಲೀನಗೊಳಿಸಲು ಮುಂದಾದರೆ ಎಲ್ಲ ಮಠಾಧೀಶರು ಹಾಗೂ ಜಿಲ್ಲೆಯ ಜನತೆ ಈಗಾಗಲೇ ವಿ.ವಿ ಉಲಕಿಸಲು ಕಂಕಣ ಬದ್ದರಾಗಿದ್ದೇವೆ, ಮುಂದೆ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.
ನಗರಸಭೆಯ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಾತೇನಹಳ್ಳಿ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಮಾತನಾಡಿದರು. ಜಿಲ್ಲಾಧಿಕಾರಿಗಳಾದ ಡಾ. ವಿಜಯ ಮಹಾಂತೇಶ ದಾನಮ್ಮನವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯ್ತು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸದರಿ ಮನವಿಯನ್ನು ಸರಕಾರಕ್ಕೆ ಕಳುಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಹಾವೇರಿ ಬಣ್ಣದ ಮಠದ ಶ್ರೀ ಅಭಿನರುದ್ರ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮೌಲ್ವಿಗಳಾದ ಜನಾಬ್ ಮುಕ್ತಿಯಾರ್ ಅಹಮದ್ ಭಾವಿಕಟ್ಟಿ, ವಿಶ್ವ ವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರಾದ ಸತೀಶ ಕುಲಕರ್ಣಿ, ಬಸವರಾಜ ಪೂಜಾರ, ಎಂ. ಆಂಜನೇಯ, ಏಳುಕೋಟೆಪ್ಪ ಪಾಟೀಲ, ಹನುಮಂತ ಹಲಗೇರಿ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಹಿರಿಯ ನಾಗರೀಕರ ವೇದಿಕೆ ಮುಖಂಡರಾದ ಎಸ್.ಎನ್ ತಿಪ್ಪನಗೌಡ್ರ, ಕರವೇ ಜಿಲ್ಲಾಧ್ಯಕ್ಷರಾದ ಗಿರೀಶ ಬಾರ್ಕಿ, ಡಿ.ಎಸ್.ಎಸ್ ರಾಜ್ಯ ಮುಖಂಡರಾದ ಉಡಚಪ್ಪ ಮಾಳಗಿ, ವಕೀಲರ ಸಂಘಟನೆಯ ಮುಖಂಡರಾದ ನಾರಾಯಣ ಕಾಳೆ, ಅಲೆಮಾರಿ ಸಮುದಾಯ ಸಂಘಟನೆ ಜಿಲ್ಲಾಧ್ಯಕ್ಷರಾದ ಶೆಟ್ಟಿ ವಿಭೂತಿ ನಾಯಕ, ಜಯ ಕರ್ನಾಟಕ ಸಂಘಟನೆಯ ರಮೇಶ ಆನವಟ್ಟಿ, ಡಿವೈಎಫ್‌ಐ ಜಿಲ್ಲಾ ಮುಖಂಡ ನೀಲಪ್ಪ ಹರಿಜನ, ಅಂಜುಮನ್ ಸಂಸ್ಥೆಯ ರಫಿಕ್ ಸಾಬ್ ಅತ್ತಾರ, ಸಾಹಿತಿ ಕಲಾವಿದರ ಬಳಗದ ಸಿ.ಆರ್ ಮಾಳಗಿ, ಪರಿಮಳ ಜೈನ, ಸಿ.ಎಸ್ ಮರಳಿಹಳ್ಳಿ, ಜುಬೇದಾ ನಾಯ್ಕ್, ರಾಜೇಂದ್ರ ಹೆಗಡೆ, ಪೃಥ್ವಿರಾಜ ಬೆಟಗೇರಿ, ಸತೀಶ ಎಂ.ಬಿ, ವಿರೂಪಾಕ್ಷ ಹಾವನೂರ, ಅನಿತಾ ಮಂಜುನಾಥ, ನೇತ್ರಾ ಅಂಗಡಿ, ಕರ್ನಾಟಕ ರಾಜ್ಯ ರೈತ ಸಂಘಟನೆ ಜಿಲ್ಲಾ ಮುಖಂಡರಾದ ಆನಂದ ಕೆಳಗಿನಮನಿ, ಮಂಜಪ್ಪ ಕಂಕನವಾಡ, ಎಸ್.ಆರ್ ಹಿರೇಮಠ, ಈರಣ್ಣ ಬೆಳವಡಿ, ಮಂಜುನಾಥ ಸಣ್ಣಿಂಗಣ್ಣನವರ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *