ನ್ಯಾಯಕ್ಕೆ ಜಯ ಸಿಕ್ಕಿದೆ ಎಂದ ಅಧಿಕಾರಿಗಳು,,,!
ವೀರಮಾರ್ಗ ನ್ಯೂಸ್ : ಗದಗ : ಲಕ್ಷ್ಮೀಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದ 23 ಮಂದಿ ಆರೋಪಿಗಳಿಗೆ ಗದಗ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದೆ.
2017 ಫೆ.5ರಂದು ಲಕ್ಷ್ಮೀಶ್ವರ ಪೊಲೀಸ್ ಠಾಣೆಯಲ್ಲಿ ನಡೆದಿತ್ತು. ಅಕ್ರಮ ಮರಳು ಸಾಗಿಸುವ ವಾಹನ ತಡೆದು ಚಾಲಕ ಶಿವಪ್ಪ ಡೋಣಿ ಎಂಬಾತನಿಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಶಿವಪ್ಪ, ಲಕ್ಷ್ಮೀಶ್ವರ ತಾಲೂಕಿನ ಬಟ್ಟೂರು ಗ್ರಾಮದ ನಿವಾಸಿಯಾಗಿದ್ದ. ಶಿವಪ್ಪನಿಗೆ ಪೊಲೀಸರು ಹೊಡೆದು ಕಳುಹಿಸಿದ ನಂತರ ಆತನನ್ನು ಲಕ್ಷ್ಮೀಶ್ವರ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲು ಮಾಡಲಾಗಿತ್ತು..
ಶಿವಪ್ಪ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಮೃತನ ಕುಟುಂಬಸ್ಥರು ಪೊಲೀಸ್ ಠಾಣೆಯ ಮುಂದೆ ಮೃತದೇಹವನ್ನಿಟ್ಟು ಪ್ರತಿಭಟನೆ ಮಾಡಿದ್ದರು.
ಆ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ, ಪೊಲೀಸ್ ಠಾಣೆ ಹಾಗೂ ಕಚೇರಿಯಲ್ಲಿದ್ದ ಕಡತಗಳನ್ನು, ದಾಖಲೆಗಳನ್ನು, ಪೀಠೋಪಕರಣ, ಪೊಲೀಸ್ ಜೀಪ್ ಹಾಗೂ ಹತ್ತಾರು ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದರು.
ಅಲ್ಲದೇ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಠಾಣೆಯ ವಾಕಿಟಾಕಿ, ಕಂಪ್ಯೂಟರ್ ಸೇರಿದಂತೆ ಅನೇಕ ವಸ್ತುಗಳನ್ನು ದೋಚಿದ್ದರು.
ಈ ಪ್ರಕರಣದಲ್ಲಿ ಲಕ್ಷ್ಮೀಶ್ವರ ಪೊಲೀಸ್ ಠಾಣೆಯಲ್ಲಿ 112 ಜನರ ಮೇಲೆ ಕೇಸ್ ದಾಖಲು ಮಾಡಲಾಗಿತ್ತು. ಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿತ್ತು. 112 ಜನರ ಪೈಕಿ 8 ಜನ ಮೃತಪಟ್ಟಿದ್ದು, ಓರ್ವ ಬಾಲಪರಾಧಿಯಾಗಿದ್ದ. ಉಳಿದ 103 ಜನರ ಮೇಲೆ ತನಿಖೆ ಮುಂದುವರೆದಿತ್ತು.
ಇದೀಗ ಪ್ರಕರಣದಲ್ಲಿ 23 ಜನರಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಆರೋಪಿಗಳಿಗೆ ಯಾವೆಲ್ಲಾ ಶಿಕ್ಷೆ ವಿಧಿಸಿದೆ. ಶಿಕ್ಷೆ ಪ್ರಮಾಣ ಏಷ್ಟು ಎಂಬುದು ಮಾ. 24ರಂದು ಗೊತ್ತಾಗಲಿದೆ. ಇನ್ನುಳಿದ 80 ಜನರು ನಿರಪರಾಧಿಗಳೆಂದು ಕೋರ್ಟ್ ಘೋಷಿಸಿದೆ.
8 ವರ್ಷದ ನಂತರ ಪ್ರಕರಣದ ಆರೋಪಿಗಳಿಗೆ ಗದಗ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಅವರು ಶಿಕ್ಷೆ ಪ್ರಕಟಿಸಿದರು.
ಇನ್ನೊಂದು ಕಡೆ ಪೊಲೀಸ್ ಇಲಾಖೆ ವಿರುದ್ಧ ಜನಾಕ್ರೋಶ ಕೇಳಿಬರುತ್ತಿದ್ದು, ಇಂತಹ ದೊಡ್ಡ ಅಪರಾಧ ಕೃತ್ಯ ನಡೆದಿದೆ. 112 ಜನರಲ್ಲಿ ಕೇವಲ 23 ಜನರಿಗೆ ಮಾತ್ರ ಶಿಕ್ಷೆ ಪ್ರಕಟವಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇದರಲ್ಲಿ ಪ್ರಭಾವಿಗಳ ಕೈವಾಡ ಇದೆ ಎಂಬ ಆರೋಪದ ಮಾತುಗಳು ಕೇಳಿ ಬರುತ್ತಿವೆ.