ಗದಗ ಜಿಲ್ಲಾಡಳಿತದಲ್ಲಿ ಭಗವಾನ ಶ್ರೀ ಮಹಾವೀರ ಜಯಂತಿ
ಅಹಿಂಸಾ ಪರಮೋ ಧರ್ಮ ಎಂದು ಸಾರಿದವರು ಮಹಾವೀರರು : ಡಿಸಿ ಶ್ರೀಧರ
ವೀರಮಾರ್ಗ ನ್ಯೂಸ್ ಗದಗ : ಪ್ರಾಣಿ ಹಿಂಸೆ ಮಹಾಪಾಪ, ಅಹಿಂಸಾ ಪರಮೋ ಧರ್ಮ ಎಂದು ಸಾರಿದವರು ಭಗವಾನ ಶ್ರೀ ಮಹಾವೀರರು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಹೇಳಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರುಗಳ ಸಹಯೋಗದಲ್ಲಿ ಗದಗ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ ಗುರುವಾರ ಏರ್ಪಡಿಸಲಾದ ಭಗವಾನ್ ಶ್ರೀ ಮಹಾವೀರರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಭಗವಾನ್ ಮಹಾವೀರರು ಮನುಕುಲವನ್ನು ಉದ್ಧಾರ ಮಾಡಿದ ಮಹಾನ್ ಚೇತನ. ಮಹಾವೀರರ ವಿಚಾರಧಾರೆಗಳು ಸರ್ವರಿಗೂ ಸಮಬಾಳು, ಸಮಪಾಲು ನೀಡುವ ಸರ್ವೋದಯದ ಧರ್ಮತೀರ್ಥದಂತಿತ್ತು ಎಂದರು.

ಮಹಾವೀರ್ ಮಹಾರಾಜರು ಪ್ರಾಣಿ ಒದೆ, ಪ್ರಾಣಿ ಹಿಂಸೆ ಮಾಡಬಾರದು ಮತ್ತು ನಾವು ಕೂಡ ಪ್ರಕೃತಿಯ ಒಂದು ಭಾಗವಾಗಿರುವುದರಿಂದ ಯಾರನ್ನು ಹಿಂಸಿಸಬಾರದು ಎಂದು ಹೇಳಿದರು. ಪ್ರಾಣಿ ಹಿಂಸೆ ಮಹಾಪಾಪವೆಂದು, ಅಹಿಂಸಾ ಪರಮೋ ಧರ್ಮ ಎಂದು ಸಾರಿದರು ಎಂದರು.
ಅತ್ಯಂತ ಸೂಕ್ಷ್ಮ ಪ್ರಾಣಿ ಕೂಡ ಪ್ರಕೃತಿಯ ಒಂದು ಭಾಗವಾಗಿರುವುದರಿಂದ ಪ್ರಾಣಿ ಹಿಂಸೆ ಮಹಾ ಪಾಪವೆಂದು ಬದುಕು ಮತ್ತು ಬದುಕಲಿಕ್ಕೆ ಬಿಡು ಎಂಬ ಮಾತು ಎಲ್ಲ ಕಾಲಕ್ಕೂ ಸಲ್ಲುತ್ತದೆ ಎಂದು ಸಿ ಎನ್ ಶ್ರೀಧರ ತಿಳಿಸಿದರು.
ಶಾಂತಿ, ಸಹನೆ, ತಾಳ್ಮೆ ಜೀವನದ ಮಂತ್ರಗಳಾಗಬೇಕು. ಆ ಮೂಲಕ ಪರೋಪಕಾರ ಜೀವನ ಸಾಗಿಸಬೇಕೆಂಬ ಸಂದೇಶವನ್ನು ಭಗವಾನ್ ಮಹಾವೀರರು ನೀಡಿದ್ದಾರೆ. ಎಲ್ಲರೂ ಅವರ ಬದುಕಿನ ಆದರ್ಶಗಳನ್ನು ಪಾಲಿಸೋಣ ಎಂದರು.
ಈ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಸೇರಿದಂತೆ ಗಣ್ಯರು ಸಮಾಜದ ಮುಖಂಡರು ಹಾಜರಿದ್ದರು.