ವೀರಮಾರ್ಗ ನ್ಯೂಸ್ : ಬೆಂಗಳೂರು : ಕೊಲೆ ಪ್ರಕರಣವೊಂದರ ಆರೋಪಿಗಳಾದ ಅಪ್ರಾಪ್ತ ಬಾಲಕರ ಮೇಲೆ ಅಮಾನವೀಯವಾಗಿ ವರ್ತಿಸಿ, ವಿಕೃತಿ ಮೆರೆದ ಆರೋಪದಡಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ (PSI) ಪ್ರವೀಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ, ಪಿ.ಎಸ್.ಐ ಪ್ರವೀಣ್ ಅವರು ಆರೋಪಿಗಳಾದ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದರು.
ಕಾನೂನುಬದ್ಧವಾಗಿ ಠಾಣೆಗೆ ಕರೆತರಬೇಕಿದ್ದ ಆರೋಪಿಗಳನ್ನು, ಪ್ರವೀಣ್ ಅವರು ರಹಸ್ಯ ಸ್ಥಳವೊಂದಕ್ಕೆ ಕರೆದೊಯ್ದು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ.
ಆರೋಪಿ ಬಾಲಕರನ್ನು ಖಾಸಗಿ ಸ್ಥಳದಲ್ಲಿ ಇರಿಸಿದ್ದ ಸಂದರ್ಭದಲ್ಲಿ, ಪಿ.ಎಸ್.ಐ ಪ್ರವೀಣ್ ಬೆಲ್ಟ್ನಿಂದ ಬಾಲಕರಿಗೆ ಹಲ್ಲೆ ನಡೆಸಿದ್ದಾರೆ.
ಅಷ್ಟೇ ಅಲ್ಲದೆ, ಅತೀ ಅಸಭ್ಯ ಮತ್ತು ವಿಕೃತ ಮನಸ್ಥಿತಿಯಿಂದ ವರ್ತಿಸಿದ್ದಾರೆ.
ಓರ್ವ ಆರೋಪಿಯ ಬಾಯಿಗೆ ಇನ್ನೊಬ್ಬ ಆರೋಪಿಯ ಜನನಾಂಗವನ್ನು ಬಲವಂತವಾಗಿ ಇರಿಸುವಂತೆ ಮಾಡಿ, ಆ ಅಮಾನವೀಯ ದೃಶ್ಯವನ್ನು ಸ್ವತಃ ತಾವೇ ತಮ್ಮ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಪಿ.ಎಸ್.ಐ ಪ್ರವೀಣ್ ರೆಕಾರ್ಡ್ ಮಾಡಿಕೊಂಡಿದ್ದ ಈ ವಿಕೃತ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯ ಗಂಭೀರತೆಯನ್ನು ಗಮನಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣವೇ ಕ್ರಮಕ್ಕೆ ಮುಂದಾಗಿದ್ದಾರೆ.
ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರವೀಣ್ ವಿರುದ್ಧ ಪ್ರಕರಣ ದಾಖಲಾಗಿದೆ. ಪೋಕ್ಸೋ (POCSO) ಕಾಯ್ದೆ ಮತ್ತು ಅಸಭ್ಯ ವರ್ತನೆಗೆ ಸಂಬಂಧಿಸಿದ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪಿ.ಎಸ್.ಐ ಪ್ರವೀಣ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಪ್ರಕರಣವು ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತಂದಿದ್ದು, ಆರೋಪಿಯ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವರದಿ: ಚನ್ನೇಶ್ ಕೆ ಎಂ,ಬೆಂಗಳೂರು.