ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಶಾಸಕ ಪ್ರಕಾಶ ಕೋಳಿವಾಡ…
ವೀರಮಾರ್ಗ ನ್ಯೂಸ್ : ಪರಿಸರ ಸಂರಕ್ಷಣೆ ಇಂದಿನ ದಿನದಲ್ಲಿ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಮರಗಳನ್ನು ಬೆಳೆಸಿ ಪ್ರಕೃತಿಯನ್ನು ಉಳಿಸುವ ಸಂಕಲ್ಪ ಮಾಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಕಂಬಳಿ ಬಡಾವಣೆಯ ಸಿದ್ದಿವಿನಾಯಕ ಉದ್ಯಾನವನದಲ್ಲಿ ಸೋಮವಾರ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಹಾರ ರಾಜ್ಯದಲ್ಲಿ ಉಷ್ಣಾಂಶ ಹೆಚ್ಚಳದಿಂದ ಶಾಲೆಗಳಿಗೆ ರಜೆ ನೀಡುವ ಪರಿಸ್ಥಿತಿ ನಿಮಾರ್ಣವಾಗಿದೆ. ಇಂತಹ ಪರಿಸ್ಥಿತಿ ನಮ್ಮ ರಾಜ್ಯದಲ್ಲೂ ಉಂಟಾಗಬಾರದು ಎಂದರೆ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಭೂಮಿ ಸೃಷ್ಟಿಯಾದಾಗ ಎಲ್ಲವೂ ಸಮತೋಲನದಲ್ಲಿತ್ತು. ಆದರೆ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ಹಾಳು ಮಾಡುತ್ತಿದ್ದಾನೆ. ಭೂಮಿಗೆ ಮನುಷ್ಯನ ಅಗತ್ಯವಿಲ್ಲ, ಮನುಷ್ಯನಿಗೆ ಭೂಮಿ ಅತ್ಯಗತ್ಯ. ಆದ್ದರಿಂದ ಮಾನವ ಕುಲದ ಉಳಿವಿಗಾಗಿ ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ನಗರದಲ್ಲಿ ಸುಮಾರು 600 ಉದ್ಯಾನವನಗಳಿದ್ದು, ಸ್ಥಳಿಯ ನಿವಾಸಿಗಳು ಸಮಿತಿಗಳನ್ನು ರಚಿಸಿ ಅವುಗಳ ಅಭಿವೃದ್ಧಿ ಹಾಗೂ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರಸಭೆ ಆಯುಕ್ತ ಫಕ್ಕೀರಪ್ಪ ಇಂಗಳಗಿ ಮಾತನಾಡಿ, ಜೀವನವನ್ನು ಸಂತೋಷದಿಂದ ಕಳೆಯಬೇಕಾದರೆ ನಿಸರ್ಗದೊಂದಿಗೆ ಬೆರೆಯಬೇಕು. ಪ್ರಕೃತಿ ಉಳಿದರೆ ಮಾತ್ರ ಮಳೆ, ಬೆಳೆ ಹಾಗೂ ಉತ್ತಮ ಬದುಕು ಸಾಧ್ಯ. ಪ್ರತಿಯೊಬ್ಬರೂ ಸಸಿ ನೆಟ್ಟು ಅದನ್ನು ಮರವಾಗಿ ಬೆಳೆಸಿದರೆ ಪರಿಸರ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ ಎಂದರು.
ಉದ್ಯಾನವನ ಸಮಿತಿ ಸದಸ್ಯ ಕರಬಸಪ್ಪ ಜಾಡರ ಮಾತನಾಡಿ, ಉದ್ಯಾನದ ಅಭಿವೃದ್ದಿಗೆ ನಾವು ಬದ್ಧರಾಗಿದ್ದೇವೆ. ಆದರೆ, ಈ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿದೆ. ಅದನ್ನು ಸರಿಪಡಿಸಬೇಕು. ಉದ್ಯಾನದ ಬಳಿ ಮೊಬೈಲ್ ಟವರ್ ಇದ್ದು ಕೂಡಲೇ ಅದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ನಗರಸಭೆ ಮಾಜಿ ಸದಸ್ಯ ಶೇಖಪ್ಪ ಹೊಸಗೌಡ್ರ, ಎಂ. ಕೆಂಪಳ್ಳೇರ, ಆರ್.ಜೆ. ಹಿರೇಮಠ, ರಾಜಾರಾಮ ಅಬ್ಬಿಗೇರಿ, ವಿ.ಎಚ್. ಕೊಪ್ಪದ, ದೇವರಾಜ ಚಿನ್ನಿಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.