ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲೆಯ : ರಾಣೆಬೆನ್ನೂರಿನಲ್ಲಿ ಜೂನ್ 23ರಂದು ಗೋ ರಕ್ಷಣೆಗಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪದಡಿ ಸ್ವಾಮೀಜಿ ಹಾಗೂ ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕ್ರಿಷ್ಣಾಪೂರ ಮಠದ ಬಾಲ ತಪಸ್ವಿಕುಮಾರ ಮಹಾರಾಜ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಸಂಘಟನೆಗಳ ಆಯೋಜಕ ವಿನಯಗೌಡ ಬಾಳನಗೌಡ್ರು ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ರಾಣೆಬೆನ್ನೂರು ಶಹರ ಠಾಣೆ ಪೊಲೀಸರು ಹೇಳಿದರು.
‘ಗೋವು ರಕ್ಷಣೆ ವಿಚಾರವಾಗಿ ಪ್ರತಿಭಟನಾ ಮೆರವಣಿಗೆ ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಭಾಷಣ ಮಾಡಿದ್ದ ಸ್ವಾಮೀಜಿ, ಮುಸ್ಲಿಂ ಧರ್ಮ, ಮಜೀದ್ ಹಾಗೂ ಮಿನಾರ್‌ಳ ಬಗ್ಗೆ ಮಾತನಾಡಿದ್ದರು. ಮುಸ್ಲಿಂ ಸಮುದಾಯದವರು ಹಾಗೂ ಅವರ ಧಾರ್ಮಿಕ ಶ್ರದ್ದೆಯನ್ನು ಅವಮಾನಿಸುವ ರೀತಿಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದರು.
‘ಪ್ರಚೋದನಕಾರಿ ಭಾಷಣ ಮಾಡಿ ಸಮಾಜದ ಎರಡು ಗುಂಪುಗಳ ನಡುವೆ ದ್ವೇಷ, ಅಸೂಯೆ ಬೆಳೆಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದ್ದಾರೆ. ಕಾರ್ಯಕ್ರಮ ನಡೆಸುವ ಸಂದರ್ಭದಲ್ಲಿ ಪಡೆದಿದ್ದ ಅನುಮತಿಯ ಷರತ್ತುಗಳನ್ನು ಆಯೋಜಕರು ಉಲ್ಲಂಘಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.