ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ: ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಸಮಾಜದಿಂದ ಸಂಭ್ರಮಾಚರಣೆ
ವೀರಮಾರ್ಗ ನ್ಯೂಸ್ : ಹುಬ್ಬಳ್ಳಿ : ಹುನಗುಂದ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಉಣಕಲ್‌ನ ಶ್ರೀ ಚನ್ನಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಆನಂತರ ಹುಬ್ಬಳ್ಳಿಯ ಉಣಕಲ್ ಶ್ರೀನಗರ ಕ್ರಾಸ್‌ನಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಬಳಿಕ ಸಚಿವ ವಿಜಯಾನಂದ ಕಾಶಪ್ಪನವರು ಜನಸೇವೆಯಲ್ಲಿ ಮತ್ತಷ್ಟು ಯಶಸ್ಸು ಸಾಧಿಸಲಿ, ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಹೆಚ್ಚಿನ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಪ್ರಮುಖ ಮುಖಂಡ ಸಂಗನಗೌಡ ಹೂವನ್ನವರ ಮಾತನಾಡಿ, ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ಲಭಿಸಿರುವುದು ಪಂಚಮಸಾಲಿ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ. ಅವರ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದ್ದು, ಸಮಾಜದ ಆಶೋತ್ತರಗಳನ್ನು ಅವರು ಈಡೇರಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜು ಕೊಟಗಿ ಮಾತನಾಡಿ, ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ದೊರೆತಿರುವುದು ಜನಸಾಮಾನ್ಯರ ಹಾಗೂ ಪಂಚಮಸಾಲಿ ಸಮಾಜದ ಹೋರಾಟಕ್ಕೆ ಸಂದ ಗೌರವವಾಗಿದೆ. ಅವರು ತಮ್ಮ ಇಲಾಖೆಯ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ, ಜನರ ನಿರೀಕ್ಷೆಗಳನ್ನು ಈಡೇರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿ ಸಚಿವರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಂಕರ ಮಲ್ಕನ್ನವರ್, ಕಾಂಗ್ರೆಸ್ ಮುಖಂಡ ರಾಜಾಭಕ್ಷ ಗರಗದ, ಪ್ರಕಾಶ್ ಮಾಯಕಾರ, ಸೋಮು ಸುಣಗಾರ, ಉಮೇಶ್ ಕುಲಕರ್ಣಿ, ದಾವಲ್ ಗೋಕುಲ್, ಪುಂಡಲೀಕ್ ಅಮ್ಮಿನಬಾವಿ, ರಾಜಸಾಬ್ ದಾದನ್ನವರ ಹಾಗೂ ಪಂಚಮಸಾಲಿ ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಮತ್ತು ಪಕ್ಷದ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.