ಮನುಷ್ಯನಲ್ಲಿ ದೇವತ್ವದ ಭಾವಮೂಡಿ ನಡೆನುಡಿ ಶುದ್ಧವಾಗಿಟ್ಟಾಗ ಜೀವನ ಪಾವನ : ಶಿವಯೋಗಿಶ್ರೀ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ಮನುಷ್ಯರಲ್ಲಿ ದೇವತ್ವದ ಭಾವಮೂಡಿ, ಪರೋಪಕಾರ ಮೈಗೂಡಿಸಿಕೊಂಡು, ನಡೆ, ನುಡಿ ಶುದ್ಧವಾಗಿಟ್ಟುಕೊಂಡು ನಡೆಯುವಾತನ ಜೀವನ ಪಾವನವಾಗಲು ಸಾಧ್ಯವಿದೆ ಎಂದು ಹತ್ತಿಮತ್ತೂರಿನ ವೀರಕ್ತಮಠದ ಶ್ರೀ ನಿಜಗುಣ ಶಿವಯೋಗಿ ಮಹಾ ಸ್ವಾಮಿಗಳು ನುಡಿದರು.
ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ದುರ್ಗಾದೇವಿ ಜಾತ್ರಾಮಹೋತ್ಸವ ಅಂಗವಾಗಿ ನಡೆದ ೨ ನೇ ದಿನದ ಧರ್ಮಸಭೆಯನ್ನುದ್ದೇಸಿಸಿ ಮಾತನಾಡಿದರು. ಭಾರತ ನಿಜವಾಗಲೂ ಸರ್ವಜನಾಂಗದವರಿಗೆ ಆಶ್ರಯನೀಡುವ ಶಾಂತಿಯ ಹೂದೊಟವಾಗಿದೆ. ಭಾರತದಲ್ಲಿ ವಾಸಿಸುವ ಹಿಂದು, ಮುಸ್ಲೀಂ, ಕ್ರೈಸ್ತ, ಸಿಖ್, ಬೌದ್ಧ ಯಾವುದೇ ಧರ್ಮಿಯರಿರಲಿ, ಅವರಲ್ಲಿ ಭಾರತೀಯರೆಂಬ ಹೆಮ್ಮೆ ಮೂಡಿದಾಗ ಭಾರತಾಂಬೆ ಸರ್ವರನ್ನು ಮಕ್ಕಳಂತೆ ರಕ್ಷಿಸುವಳು ಎಂದು ಹೇಳಿದರು.

ಸಿಂಧಗಿ ಶ್ರೀ ಶಿವಾನಂದ ಶಿವಾಚಾರ್ಯರು ಮಾತನಾಡಿ, ನಮ್ಮ ಸಂಸ್ಕೃತಿ, ಸಂಸ್ಕಾರಗಳು ಉಳಿಯಬೇಕು ಎಂದರೆ, ಇಂತಹ ಧರ್ಮಕಾರ್ಯಗಳು ಮೆಲಿಂದ ಮೇಲೆ ನಡೆಯಬೇಕು. ಇಂದಿನ ಯುವಸಮೂಹ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಇಂತಹ ಸಂದರ್ಬದಲ್ಲಿ ಹೊಂಡದ ದುರ್ಗಾದೇವಿ ಜಾತ್ರಾಮಹೋತ್ಸವ ಹಳ್ಳಿಗಾಡಿನ ಜನಪದ ಸಿರಿಯನ್ನು, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ, ನಮ್ಮೂರ ಜಾತ್ರೆಯಾಗಿ ಹೊರಹೊಮ್ಮಿರುವುದು ಸಂತಸ ತಂದಿದೆ ಎಂದು ಹೇಳಿದರು.
ಡಾ.ಆರ್.ಎಸ್.ಅರಳೆಲೆಮಠ ಮಾತನಾಡಿ, ಈ ಒಂದು ಜಾತ್ರೋತ್ಸವದಲ್ಲಿ ಧರ್ಮದಾಸೋಹ, ಅನ್ನದಾಸೋಹದ ಜೋತೆಗೆ, ಜನಪದ ಕಲೆ ಸಾಹಿತ್ಯ, ಸಂಸ್ಕೃತಿ ದಾಸೋಹ, ನಾಟಕ ಕಲೆ, ಕಲಾವಿದರ ಪ್ರೋತ್ಸಾಹದ ದಾಸೋಹ, ಭರತ ನಾಟ್ಯ ಕಲೆ, ನೃತ್ಯ ಪ್ರದರ್ಶನದ ದಾಸೋಹದ ಜಾತ್ರೆ ಇದಾಗಿದ್ದು, ಪಟ್ಟಣ, ಕಲೆ, ಕಲಾವಿದರಿಗೆ ತವರು ಮನೆ ಯಾದಂತಾಗಿದೆ. ಜಾನಪದ ಸಿರಿ, ಸಂಪತ್ತನ್ನು ಜನರಿಗೆ ಉಣಬಡಿಸುವಮೂಲಕ ಜಾತ್ರೋತ್ಸವವನ್ನು ಅಚ್ಚುಕಟ್ಟಾಗಿ, ಶಿಸ್ತು ಬದ್ದಾಗಿ ಆಯೋಜಿಸಿರುವ ಜಾತ್ರೋತ್ಸವದ ಸರ್ವ ಸದಸ್ಯರಿಗೆ ಅಭಿನಂದನೆಗಳನ್ನು ತಿಳಿಸುವುದಾಗಿ ಹೇಳಿದರು.

ದೇಸಾಯಿಮಠದ ಶ್ರೀ ಮಹಾಂತಸ್ವಾಮಿಗಳು ಸಭೆಯ ಧಿವ್ಯ ಸಾನಿದ್ಯವಹಿಸಿ ಆಶೀರ್ವಚನ ನೀಡಿದರು.
ಧರ್ಮಸಭೆಯ ನಂತರ ಶ್ರೀ ಕುಮಾರ ವಿಜಯ ನಾಟಕ ಸಂಘ ಚಿತ್ತರಗಿ ಇವರಿಂದ ಸಂದಿಮನಿ ಸಂಗವ್ವ ನಾಟಕ ಪ್ರದರ್ಶನಗೊಂಡು ಜನಮನ ಸೂರಗೋಂಡಿತು.
ಪು.ಸ.ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರ, ಪಿ.ಎಸ್.ಐ. ನಿಂಗರಾಜ ಕೆ, ಗುಪ್ತಚರ ಇಲಾಖೆಯ ಡಿ.ಎನ್.ಕುಡಲ, ಶಿವಪ್ಪ ಬಸರೀಕಟ್ಟಿ, ಸಮಾಜ ಸೇವಕ ಶ್ರೀಕಾಂತ ದುಂಡಿಗೌಡ್ರ, ಗುರು ಛಲವಾದಿ, ಡಾ. ಆರ್.ಬಿ. ಮುಗದೂರ, ಡಾ.ಪೀರಜಾದೆ, ಮೊಹನ ಮೇಲಗಿರಿ, ನಿಂಗನಗೌಡ್ರ ಪಾಟೀಲ, ಮಹಮ್ಮದ ಹುಸೇನ ಖತೀಬ, ಶಿವಾನಂದ ಈರಪ್ಪನವರ, ತಹಮೀದ ಖಾಜಿ ಸೇರಿದಂತೆ ಇತರರು ಇದ್ದರು.