ಮಾನವ ಜೀವನದ ಶ್ರೇಯಸ್ಸಿಗೆ ಪ್ರಗತಿಪರ ಚಿಂತನೆಗಳು ದಾರಿದೀಪ : ರಂಭಾಪುರಿಶ್ರೀ

ಮಾನವ ಜೀವನದ ಶ್ರೇಯಸ್ಸಿಗೆ ಪ್ರಗತಿಪರ ಚಿಂತನೆಗಳು ದಾರಿದೀಪ : ರಂಭಾಪುರಿಶ್ರೀ
ವೀರಮಾರ್ಗ ನ್ಯೂಸ್ ಸೊರಬ :
ಧರ್ಮ ಮತ್ತು ಆಧ್ಯಾತ್ಮಿಕತೆ ಬದುಕಿಗೆ ಆಶಾಕಿರಣ. ಮಾನವತೆಯಿಂದ ದೈವತ್ವದ ಕಡೆಗೆ ಒಯ್ಯುವ ಮಾರ್ಗವೇ ಸಂಸ್ಕೃತಿ. ಪ್ರಗತಿಪರ ಧ್ಯೇಯೋದ್ದೇಶಗಳು ಮಾನವ ಜೀವನದ ಶ್ರೇಯಸ್ಸಿಗೆ ದಾರಿದೀಪ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಭಾನುವಾರ ತಾಲೂಕಿನ ದುಗ್ಲಿ ಕ್ಷೇತ್ರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ರಥೋತ್ಸವ, ಲಿಂ.ಶ್ರೀ ಮುರುಘೇಂದ್ರ ಶ್ರೀಗಳ ೬ನೇ ವರ್ಷದ ಪುಣ್ಯಾರಾಧನೆ, ಶ್ರೀ ಗುರು ರೇವಣಸಿದ್ದೇಶ್ವರ ಮಠದ ಸುವರ್ಣ ಮಹೋತ್ಸವ, ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳವರ ಪಟ್ಟಾಧಿಕಾರದ ದ್ವಾದಶ ವರ್ಧಂತಿ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಅಸತ್ಯದಿಂದ ಸತ್ಯದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಮೃತ್ಯುವಿನಿಂದ ಅಮೃತ್ವದೆಡೆಗೆ ಕರೆದೊಯ್ಯುವುದೇ ಗುರುವಿನ ಪರಮ ಧರ್ಮ. ಆತ್ಮ ಶಕ್ತಿ ಇರುವವರನ್ನು ಯಾವ ದುಷ್ಟ ಶಕ್ತಿ ಏನನ್ನೂ ಮಾಡಲಾರದು. ಆತ್ಮ ವಿಶ್ವಾಸ, ನಿಶ್ಚಿತ ಗುರಿ ಮತ್ತು ಸಂಯಮ ಇವು ಮೂರು ಯಶದ ಹಾದಿಗೆ ಕರೆದೊಯ್ಯುವ ಅಂಶಗಳು. ಕಾಯಿಸಿದ ಚಿನ್ನ ಒಡವೆಯಾಗುತ್ತದೆ. ಬಡಿದ ತಾಮ್ರ ತಂತಿಯಾಗುತ್ತದೆ. ಕೆತ್ತಿದ ಕಲ್ಲು ಮೂರ್ತಿಯಾಗುತ್ತದೆ. ಸಂಸ್ಕಾರ ಸಚ್ಚಾರಿತ್ರ್ಯದಿಂದ ಮನುಷ್ಯನ ಜೀವನ ಮೌಲ್ಯ ಸಂವರ್ಧಿಸುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳನ್ನರಿತು ಭಕ್ತರ ಬಾಳಿನಲ್ಲಿ ಬೆಳಕು ಮೂಡಿಸಿದ ಶ್ರೇಯಸ್ಸು ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ಸಲ್ಲುತ್ತದೆ. ಕೇವಲ ೧೨ ವರುಷದ ಅವಧಿಯಲ್ಲಿ ದುಗ್ಲಿ ಶ್ರೀ ಗುರು ರೇವಣಸಿದ್ಧೇಶ್ವರ ಮಠದ ಪರಿಸರದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಕಡೇನಂದಿಹಳ್ಳಿ ತಪೋಕ್ಷೇತ್ರದಲ್ಲಿ ಹಲವಾರು ರಚನಾತ್ಮಕ ಕಾರ್ಯ ಮಾಡಿದ್ದು ತಮಗೆ ಅತ್ಯಂತ ಸಂತೋಷ ತಂದಿದೆ. ಈ ಶುಭ ಪ್ರಸಂಗದಲ್ಲಿ ಶ್ರೀಗಳವರಿಗೆ ರೇಶ್ಮೆ ಮಡಿ ಸ್ಮರಣಿಕೆ ಫಲ ಪುಷ್ಪದೊಂದಿಗೆ “ಶಿವತತ್ವ ಪ್ರಬೋಧಕ” ಎಂಬ ಪ್ರಶಸ್ತಿಯನ್ನಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.
ಸಮಾರಂಭ ಉದ್ಘಾಟಿಸಿದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಮಾತನಾಡಿ ಕೆಡಕುಗಳನ್ನು ಮೆಟ್ಟಿ ನಿಂತು ಒಳಿತಿನತ್ತ ಹೆಜ್ಜೆ ಹಾಕುವುದೇ ಮಾನವನ ಗುರಿಯಾಗಬೇಕು. ದುಗ್ಲಿ ಶ್ರೀಗಳವರ ಶ್ರಮ ಸಾಧನೆಗೆ ಬೆಲೆ ಕಟ್ಟಲಾಗದೆಂದು ಹರುಷ ವ್ಯಕ್ತಪಡಿಸಿದರು.

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡಿ ಮುನ್ನಡೆಸುವುದೇ ಮಹಾನುಭಾವರ ಕರ್ತವ್ಯ. ಧಾಮಿಕ ಮತ್ತು ಸಾಮಾಜಿಕ ಮೌಲ್ಯಗಳು ಕಣ್ಮರೆಯಾದರೆ ಧರ್ಮ ಸಂಸ್ಕೃತಿ ಉಳಿಯಲಾರದು. ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ. ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶ್ರೀಗಳವರ ನಿರಂತರ ಸಾಧನೆ ಪರಿಶ್ರಮ ಮತ್ತು ಪ್ರಗತಿ ಅವರ ಕ್ರಿಯಾಶೀಲ ಸತ್ಕಾರ್ಯಗಳಿಗೆ ಸಾಕ್ಷಿಯಾಗಿವೆ. ಈ ಕಾರ್ಯಕ್ರಮಕ್ಕೆ ಕಡೆನಂದಿಳ್ಳಿಯಿಂದ ದುಗ್ಲಿ ಕ್ಷೇತ್ರದ ವರೆಗೆ ೬೦ ಕಿ.ಮೀ.ಪಾದಯಾತ್ರೆ ಮಾಡಿರುವುದು ಭಕ್ತರಿಗಾಗಿ ಎಂಬುದನ್ನು ನಾವು ತಿಳಿಯಬೇಕು ಎಂದರು.
ನೇತೃತ್ವ ವಹಿಸಿದ ದುಗ್ಲಿ-ಕಡೇನಂದಿಹಳ್ಳಿ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮನುಷ್ಯ ತಿಳಿದಿರುವುದಕ್ಕಿಂತ ತಿಳಿಯಬೇಕಾದುದು ಬಹಳಷ್ಟಿದೆ. ಮಾನವನಿಗೆ ಮನಸ್ಸು, ಬುದ್ಧಿ ಮತ್ತು ಸದ್ವಿಚಾರಗಳು ಹುಲುಸಾಗಿ ಬೆಳೆದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ದೇಹ ದುಡಿಮೆಗೆ ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಜೀವನ ಸಾರ್ಥಕಗೊಳ್ಳುತ್ತದೆ. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿ ಇರಬೇಕು. ಗುರಿ ತಲುಪಿಸಲು ಗುರು ಬೋಧಾಮೃತ ಅವಶ್ಯಕ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಮತ್ತು ಭಕ್ತರ ಸಹಕಾರದಿಂದ ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳು ನಡೆದಿರುವುದು ನಮಗೆ ಆತ್ಮ ತೃಪ್ತಿ ತಂದಿದೆ ಎಂದರು. ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯರು, ಕನ್ನೂರು ಸೋಮನಾಥ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಗೋವಿನಕೋವಿ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗಸ್ವಾಮಿಗಳು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು.
ಮುಖ್ಯ ಅತಿಥಿಗಳಾಗಿ ಪ್ರಕಾಶ ಅಗಸನಹಳ್ಳಿ, ಶರಣ ಲಿಂಗಪ್ಪಗೌಡ್ರು, ದೇವೇಂದ್ರಪ್ಪ ಪಿ.ಎಸ್., ಶಿವಲಿಂಗಯ್ಯ ಅಲ್ಲಯ್ಯನವರಮಠ, ಮಲ್ಲಮ್ಮ ಕಬ್ಬೂರ, ಆನಂದಪ್ಪ ಪಾಲ್ಗೊಂಡಿದ್ದರು..
ಶ್ರೀ ಮಠದ ಪ್ರಗತಿಗೆ ಸಹಕರಿಸಿದ ಭಕ್ತ ಸಂಕುಲಕ್ಕೆ ಹಾಗೂ ಪುರೋಹಿತ ವರ್ಗದವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆಯನ್ನಿತ್ತರು. ಪುರೋಹಿತ ಬಳಗದಿಂದ ವೇದಘೋಷ, ರೋಣ ಶೇಖರಯ್ಯ ಶಾಸ್ತ್ರಿಗಳಿಂದ ಪ್ರಾಸ್ತಾವಿಕ ನುಡಿ, ವಿನಯಕುಮಾರ ಎನ್. ಗೌಡ್ರು ಅವರಿಂದ ಸ್ವಾಗತ ಜರುಗಿತು. ಸವಣೂರಿನ ಡಾ|| ಗುರುಪಾದಯ್ಯ ಸಾಲಿಮಠ ನಿರೂಪಣೆ ಮಾಡಿದರು.. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

Leave a Reply

Your email address will not be published. Required fields are marked *