ಡೀಸೆಲ್ ದರ ಏರಿಕೆ ಖಂಡಿಸಿ ರಾತ್ರಿಯಿಂದ ಲಾರಿ ಮುಷ್ಕರ
ವೀರಮಾರ್ಗ ನ್ಯೂಸ್ ಬೆಂಗಳೂರು : ರಾಜ್ಯದಲ್ಲಿ ಡೀಸೆಲ್ ಬೆಲೆ ಏರಿಕೆ ಹಾಗೂ ಟೋಲ್ ಶುಲ್ಕದ ಹೆಚ್ಚಳದ ವಿರುದ್ಧ ರಾಜ್ಯ ಲಾರಿ ಮಾಲೀಕರ ಸಂಘ ಏ.೧೪ರ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಆರಂಭಗೊಳ್ಳಲಿದ್ದು, ಸರಕು ಸಾಗಾಣೆಗೆ ತೊಂದರೆ ಎದುರಾಗಲಿದೆ.
ಕ್ಯಾಬ್ ಚಾಲಕರ ಯೂನಿಗಳಿಂದಲೂ ಲಾರಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿವೆ, ಇದರಿಂದ ಸರಕು ಸಾಗಾಣೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.
೨೦೨೪ರ ಜೂನ್‌ನಲ್ಲಿ ರಾಜ್ಯ ಸರ್ಕಾರ ಪ್ರತಿ ಲೀ. ಡೀಸೆಲ್ ಮೇಲೆ ೩ ರೂ. ಹೆಚ್ಚಿಸಿತ್ತು. ಇದೀಗ ಯಾವುದೇ ಮೂನ್ಸೂಚನೆ ನೀಡದೆ ಏ.೧ರಿಂದ ಏಕಾಏಕಿ ೨ ರೂ. ದರ ಏರಿಸಿ ಲಾರಿ ಉದ್ಯಮದ ಮೇಲೆ ಬರೆ ಎಳೆದಿರುವುದನ್ನು ವಿರೋಧಿಸಿ ಮುಷ್ಕರ ನಡೆಸಲಾಗಿದೆ.
ಗಡಿ ಭಾಗದ ರಾಜ್ಯಗಳಲ್ಲಿ ಡೀಸೆಲ್ ಬೆಲೆ ರಾಜ್ಯಕ್ಕಿಂತ ಹೆಚ್ಚು ಇದ್ದಾಗ, ಹೊರ ರಾಜ್ಯದ ಲಾರಿಗಳು ನಮ್ಮ ರಾಜ್ಯದಲ್ಲಿ ಲಾರಿಗಳು ಲೀಟರ್ ಡೀಸೆಲ್ ತುಂಬಿಸಿಕೊಳ್ಳುತ್ತಿದ್ದವು. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಯಥೇಚ್ಛವಾಗಿ ಆದಾಯ ಹರಿದು ಬರುತ್ತಿತ್ತು. ಇದೀಗ ಬೆಲೆ ಹೆಚ್ಚಳದಿಂದಾಗಿ ನೆರೆಯ ರಾಜ್ಯಗಳ ಲಾರಿಗಳು ಇಂಧನ ತುಂಬಿಸಿಕೊಳ್ಳುವದನ್ನು ನಿಲ್ಲಿಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದಾಯ ಕುಸಿತವಾಗಿದೆ. ಹೀಗಾಗಿ, ಡೀಸೆಲ್ ದರವನ್ನು ಕಡಿಮೆ ಮಾಡಬೇಕೆಂದು ಸಂಘಟನೆಗಳು ಒತ್ತಾಯಿಸಿವೆ.
ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ. ಆರ್. ಷಣ್ಮುಗಪ್ಪ ಅವರು ಇಂದು ಮಧ್ಯರಾತ್ರಿಯಿಂದ ಲಾರಿ ಮುಷ್ಕರ ಆರಂಭಗೊಳ್ಳಲಿದೆ. ಯಾವುದೇ ಕಾರಣಕ್ಕೂ ಮುಷ್ಕರ ಹಿಂಪಡೆಯುವುದಿಲ್ಲ, ಹೊರ ರಾಜ್ಯಗಳ ಲಾರಿ ಮಾಲೀಕರು ಸೇರಿದಂತೆ ರಾಜ್ಯವ್ಯಾಪಿ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ೬ ಲಕ್ಷಕ್ಕೂ ಹೆಚ್ಚು ಲಾರಿಗಳಿದ್ದು, ಮುಷ್ಕರ ಬೆಂಬಲಿಸುವ ಮೂಲಕ ಸಂಚಾರವನ್ನು ಸ್ಥಗಿತಗೊಳಿಸಲಿವೆ. ಜಲ್ಲಿಕಲ್ಲು, ಮರಳು ಲಾರಿ, ಗೂಡ್ಸ್ ವಾಹನಗಳು ಸೇರಿದಂತೆ ಎಲ್ಲಾ ಮಾದರಿಯ ಸರಕು ಸೇವೆಗಳು ಸ್ಥಗಿತಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.
ಡೀಸೆಲ್ ದರ ಏರಿಕೆ ಖಂಡಿಸಿ ರಾತ್ರಿಯಿಂದ ಲಾರಿ ಮುಷ್ಕರ
