ಹಿರಿಯ ನಟ ಬ್ಯಾಂಕ್ ಜನಾರ್ದನ್ ವಿಧಿವಶ ಗಣ್ಯರ ಕಂಬನಿ

ಹಿರಿಯ ನಟ ಬ್ಯಾಂಕ್ ಜನಾರ್ದನ್ ವಿಧಿವಶ ಗಣ್ಯರ ಕಂಬನಿ
ವೀರಮಾರ್ಗ ನ್ಯೂಸ್ ಬೆಂಗಳೂರು :
ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ಧನ್ (೭೬) ವಿಧಿವಶರಾಗಿದ್ದಾರೆ. ಮಧ್ಯರಾತ್ರಿ ೨.೩೦ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು ,ಚಿತ್ರರಂಗದ ಆನೇಕ ಗಣ್ಯರು ನಟನ ಅಂತಿಮ ದರ್ಶನ ಪಡೆದರು.
ಹಲವು ವರ್ಷಗಳಿಂದಲೂ ಹಾಸಿಗೆ ಹಿಡಿದಿದ್ದ ಬ್ಯಾಂಕ್ ಜನಾದನ್ , ಇತ್ತೀಚಿನ ದಿನಗಳಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಅವರನ್ನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬ್ಯಾಂಕ್ ಜನಾದನ್ ಸಾವನ್ನಪ್ಪಿದ್ದಾರೆ.ಈ ಹಿಂದೆ ಅವರಿಗೆ ಮೂರು ಬಾರಿ ಅವರಿಗೆ ಹೃದಯಾಘಾತ ಸಂಭವಿಸಿತ್ತು.
ನಟ ಬ್ಯಾಂಕ್ ಜನಾರ್ದನ್ ಮೂಲತಃ ಚಿತ್ರದುರ್ಗ ಮೂಲದವರು. ೧೯೪೮ರಲ್ಲಿ ಹೊಳಲ್ಕೆರೆಯಲ್ಲಿ ಜನಿಸಿದವರು ಬ್ಯಾಂಕ್ ಜನಾರ್ದನ್. ಶಾಲಾ ಶಿಕ್ಷಣವನ್ನ ಹುಟ್ಟೂರಲ್ಲೇ ಪಡೆದರು. ಶಾಲಾ, ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಲ್ಲೇ ಜನಾರ್ದನ್ ಅವರಿಗೆ ನಾಟಕದ ಗೀಳು ಅಂಟಿತ್ತು. ಹಲವು ನಾಟಕಗಳಲ್ಲಿ ಅಭಿನಯಿಸಿದ ನಂತರ, ಹಿರಿಯ ನಟ ಧೀರೇಂದ್ರ ಗೋಪಲ್ ಅವರ ಮಾರ್ಗದರ್ಶನದಂತೆ ಚಿತ್ರರಂಗ ಪ್ರವೇಶಿಸಿದರು. ಬ್ಯಾಂಕ್ ಜನಾರ್ದನ್ ೧೯೮೫ರಲ್ಲಿ ‘ಪಿತಾಮಹ’ ಚಿತ್ರದ ಮೂಲಕ ಚಲನಚಿತ್ರ ಅಭಿನಯ ಆರಂಭಿಸಿದ್ದರು.
ಬ್ಯಾಂಕ್ ಜನಾರ್ದನ್ ನಾಮಾಂಕಿತವಾದದ್ದು ಹೀಗೆ :
ತಮ್ಮ ಹುಟ್ಟೂರಾದ ಹೊಳಲ್ಕೆರೆಯ ವಿಜಯಾ ಬ್ಯಾಂಕ್‌ನಲ್ಲಿ ಜನಾರ್ದನ್ ಕೆಲಸ ಮಾಡುತ್ತಿದ್ದರು. ಬ್ಯಾಂಕ್ ಕೆಲಸದ ಜೊತೆ ಜೊತೆಗೆ ನಟನೆಯನ್ನೂ ಮಾಡುತ್ತಿದ್ದರು. ಹೀಗಾಗಿ, ಅವರು ಚಿತ್ರರಂಗದಲ್ಲಿ ‘ಬ್ಯಾಂಕ್ ಜನಾರ್ದನ್’ ಎಂದೇ ಗುರುತಿಸಿಕೊಂಡರು.
೮೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯ:
ಪಿತಾಮಹ’ ಚಿತ್ರದಿಂದ ಬ್ಯಾಂಕ್ ಜನಾರ್ದನ್ ಚಿತ್ರರಂಗದಲ್ಲಿ ನಟನೆ ಆರಂಭಿಸಿ. ಹಾಸ್ಯ ಪಾತ್ರಗಳಿಂದಲೇ ಜನಪ್ರಿಯತೆ ಪಡೆದ ಬ್ಯಾಂಕ್ ಜನಾರ್ದನ್ ’ಬೆಟ್ಟದ ತಾಯಿ’, ’ಪೊಲೀಸ್ ಹೆಂಡತಿ’, ’ಶ್’ ’ತರ್ಲೆ ನನ್ಮಗ’, ’ಸೂಪರ್ ನನ್ ಮಗ’, ’ಭಂಡ ನನ್ ಗಂಡ’, ಜೀಬೂಂಬ, ಸೇಮುಂತಾದ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಹಾಸ್ಯದ ಹೊನಲು ಹರಿಸಿದ್ದಾರೆ. ೮೫೦ಕ್ಕೂ ಅಧಿಕ ಸಿನಿಮಾಗಳಲ್ಲಿ ಬ್ಯಾಂಕ್ ಜನಾರ್ದನ್ ನಟಿಸಿದ್ದಾರೆ. ೨೦೨೩ರಲ್ಲಿ ತೆರೆಕಂಡ ‘ಉಂಡೇನಾಮ’ ಬ್ಯಾಂಕ್ ಜನಾರ್ದನ್ ನಟಿಸಿದ ಕೊನೆಯ ಚಿತ್ರವಾಗಿದೆ. ಕರಾಟೆ ಕಿಂಗ್ ಶಂಕರ್ ನಾಗ್, ಅನಂತ್ ನಾಗ್, ಕ್ರೇಜಿ ಸ್ಟಾರ್ ರವಿಚಂದ್ರನ್, ಜಗ್ಗೇಶ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಕಾಶಿನಾಥ್ ಮುಂತಾದ ಕನ್ನಡದ ನಟರ ಸಿನಿಮಾಗಳಲ್ಲಿ ಬ್ಯಾಂಕ್ ಜನಾರ್ದನ್ ಹಾಸ್ಯ ನಟರಾಗಿ ಹೆಸರುವಾಸಿಯಾಗಿದ್ದರು.
ಕಿರುತೆರೆಯಲ್ಲೂ ನಗೆಯ ಕಮಾಲ್:
ಧಾರಾವಾಹಿಗಳಲ್ಲೂ ತಮ್ಮ ಛಾಪು ಮೂಡಿಸಿದ್ದ ಬ್ಯಾಂಕ್ ಜನಾರ್ದನ್ ಕಿರುತೆರೆ ಮೂಲಕವೂ ವೀಕ್ಷಕರಿಗೆ ಹಾಸದ ಮೂಲಕ ನಗೆಗಡಲಲ್ಲಿ ತೇಲಿಸುತ್ತಿದ್ದರು. ‘ಪಾಪಾ ಪಾಂಡು’, ‘ಮಾಂಗಲ್ಯ’ ’ರೋಬೋ ಫ್ಯಾಮಿಲಿ, ’ಜೋಕಾಲಿ’ ಮುಂತಾದ ಸೀರಿಯಲ್‌ಗಳಲ್ಲಿ ಬ್ಯಾಂಕ್ ಜನಾರ್ದನ್ ನಟಿಸಿದ್ದರು. ಬ್ಯಾಂಕ್ ಜನಾದನ್ ನಿಧನಕ್ಕೆ ಆಪ್ತ ಗೆಳೆಯರಾದ ಡಿಂಗ್ರಿನಾಗರಾಜ್, ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ, ಬೀರಾದಾರ್ ಸೇರಿದಂತೆ ಕನ್ನಡ ತಾರೆಯರು ಸಂತಾಪ ಸೂಚಿಸಿದ್ದಾರೆ.
ಬೆಂಗಳೂರಿನ ಸುಲ್ತಾನ್ ಪಾಳ್ಯದ ನಿವಾಸದಲ್ಲಿ ಬ್ಯಾಂಕ್ ಜನಾರ್ದನ್ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಮಧ್ಯಾಹ್ನ ೩ರಿಂದ ೪ ವೇಳೆಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಚಿತ್ರರಂಗದ ಅನೇಕ ಗಣ್ಯರು ನಟನ ಅಂತಿಮ ದರ್ಶನ ಪಡೆದರು.

Leave a Reply

Your email address will not be published. Required fields are marked *