ವೀರಮಾರ್ಗ ನ್ಯೂಸ್ ಬೆಂಗಳೂರು : ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 4 ರೂಪಾಯಿ ಏರಿಕೆ ಮಾಡಲು ಸಚಿವ ಸಂಪುಟ ಸಮ್ಮತಿಸಿದ್ದು, ಇನ್ನು ಮುಂದೆ ಗ್ರಾಹಕರಿಗೆ ಹಾಲು ದುಬಾರಿಯಾಗಲಿದೆ.
ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರೂಪಾಯಿ ಏರಿಕೆ ಮಾಡುವಂತೆ ಕರ್ನಾಟಕ ಮಹಾಮಂಡಲ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಲು ಒಕ್ಕೂಟದ ಅಧ್ಯಕ್ಷ ಭೀಮನಾಯಕ್ ಸೇರಿದಂತೆ ಅಧಿಕಾರಿಗಳ ಜತೆ ಚರ್ಚಿಸಿ ಸಚಿವ ಸಂಪುಟದಲ್ಲಿ ಹಾಲು ದರ ಏರಿಕೆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದರು.
ಹಾಲಿನ ದರ ಏರಿಕೆಗೆ ಒಪ್ಪಿಗೆ ನೀಡಿದರೂ ಏರಿಕೆಯಾಗುವ ಸಂಪೂರ್ಣ ದರ ಹಾಲು ಉತ್ಪಾದಕರಿಗೆ ತಲುಪಬೇಕು ಎಂದು ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಹೇಳಿದ್ದರು.
ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಪ್ರತಿ ಲೀಟರ್‌ಗೆ 4 ರೂಪಾಯಿ ಏರಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ.
ಈಗಾಗಲೇ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ, ಮೆಟ್ರೋ ಪ್ರಯಾಣ ದರ, ವಿದ್ಯುತ್ ದರಗಳನ್ನು ಏರಿಕೆ ಮಾಡಿದ್ದು, ಗಾಯದ ಮೇಲೆ ಬರೆ ಎಳೆದಂತೆ ಹಾಲಿನ ದರವೂ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ದರ ಏರಿಕೆಯ ಬಿಸಿ ತಟ್ಟಲಿದೆ.

ರಾಜ್ಯದಲ್ಲಿ ಹಾಲಿನ ದರೆ ಏರಿಕೆ ಮಾಡುತ್ತಿರುವುದು 1 ವರ್ಷದಲ್ಲಿ ಇದು 2ನೇ ಬಾರಿಯಾಗಿದೆ. ಈಗಾಗಲೇ ಬಸ್ ದರ, ಮೆಟ್ರೊ, ವಿದ್ಯುತ್ ದರದಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬಿದ್ದಿದೆ. ಇದರ ಬೆನ್ನಲ್ಲೇ ನಂದಿನಿ ಹಾಲಿನ ದರವನ್ನು ಸರ್ಕಾರ ಏರಿಕೆ ಮಾಡಿದೆ. ಯುಗಾದಿ ಹಬ್ಬದ ಸಂದರ್ಭದಲ್ಲೇ ದರ ಏರಿಕೆ ಮಾಡಿ ಗ್ರಾಹಕರಿಗೆ ಸರ್ಕಾರ ಬರೆ ಎಳೆದಿದೆ.
ಹಾಲಿನ ದರ ಏರಿಕೆ ಕಾಫಿ ಪ್ರಿಯರಿಗೂ ತಟ್ಟಲಿದೆ. ಹೋಟೆಲ್‌ಗಳಲ್ಲಿ ಕಾಫಿ ದರ ಈಗಾಗಲೇ ದುಬಾರಿಯಾಗಿದ್ದು, ಈಗ ಸರ್ಕಾರ ನಂದಿನಿ ಹಾಲಿನ ದರವನ್ನು 4 ರೂ.ಗಳಿಗೆ ಹೆಚ್ಚಳ ಮಾಡಿರುವುದರಿಂದ ಕಾಫಿ-ಟೀ ದರ ಇನ್ನಷ್ಟು ದುಬಾರಿಯಾಗಲಿದೆ. ಹಾಲು ದರ ಏರಿಕೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಗ್ರಾಹಕರ ಜೇಬಿಗೆ ಕತ್ತರಿ
ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 4 ರೂ. ಏರಿಕೆ
ಸಚಿವ ಸಂಪುಟ ಅನುಮೋದನೆ
ಹೋಟೆಲ್‌ಗಳಲ್ಲಿ ಕಾಫಿ-ಟೀ ದುಬಾರಿ ಸಾಧ್ಯತೆ
ವಿದ್ಯುತ್ ಶಾಕ್ ಬೆನ್ನಲ್ಲೇ ಹಾಲಿನ ದರವೂ ಏರಿಕೆ