ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೆಲಸ ಮಾಡುತ್ತಿದೆ. ಮಹಿಳೆಯರು ಮೌಡ್ಯಗಳಿಂದ ಹೊರ ಬಂದು ಪ್ರಗತಿಯ ದಿಕ್ಕಿನತ್ತ ಸಾಗಬೇಕು ಎಂದು ಸಮಾಜ ಸೇವಕ, ಜಿಲ್ಲಾ ಜನ ಜಾಗೃತಿ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಹೇಳಿದರು

ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿ ಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಗ್ರಾಮಗಳ ಸಮಗ್ರವಾದ ಅಭಿವೃದ್ಧಿಯಲ್ಲಿ ದೇಶದ ಪ್ರಗತಿ ನಿಂತಿದೆ ಎಂಬ ಸತ್ಯ ಅರಿತಿರುವ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮಭಿವೃದ್ಧಿ ಯೋಜನೆಯ ಮೂಲಕ ಒಂದು ಸರ್ಕಾರವು ಮಾಡಲಾಗದ ಜನಪರವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಬಡವರ ಪಾಲಿನ ಕಾಮಧೇನು ವಾಗಿದ್ದಾರೆ.

ಮಹಿಳಾ ಸಬಲೀಕರಣಕ್ಕಾಗಿ ಬ್ಯಾoಕುಗಳ ಮೂಲಕ ಸಾಲ ಸೌಲಭ್ಯವನ್ನು ಕೊಡಿಸಿ ಗುಡಿ ಕೈಗಾರಿಕೆಗಳ ಸ್ಥಾಪನೆಗೆ ಸಹಾಯ ಹಸ್ತ ಚಾಚಿದ್ದಾರೆ. ಹೆಣ್ಣು ಮಕ್ಕಳು ಅಜ್ಞಾನದಿಂದ ಹೊರಬಂದು ಸ್ವಾಭಿಮಾನದಿಂದ ಮುನ್ನಡೆದು ಸಾಧಕರಾಗಬೇಕು ಎಂದು ಮಲ್ಲಿಕಾರ್ಜುನ ಕಿವಿ ಮಾತು ಹೇಳಿದರು.ಟೌನ್ ಪೊಲೀಸ್ ಠಾಣೆಯ ಮುಖ್ಯ ಪೇದೆ ಶೈಲಜಾ ಸಾಮಾಜಿಕ ಜಾಲ ತಾಣ, ಕ್ರೈಂ ಕುರಿತು ಜಾಗೃತಿ ಮೂಡಿಸಿ, ಮೊಬೈಲ್ ಫೋನ್ ವಂಚನೆಯಿಂದ ದೂರವಿರಬೇಕು.

ವಂಚಕರು ಬೀಸುವ ಮೋಸದ ಬಲೆಗೆ ಬೀಳದೇ, ಓಟಿಪಿ ನಂಬರ್ ಅನ್ನು ವಂಚಕರಿಗೆ ನೀಡಿ ಮೋಸ ಹೋಗದೆ ಎಚ್ಚರವಾಗಿರಬೇಕು ಎಂದು ಅರಿವು ಮೂಡಿಸಿದರು.ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ ಹೆಣ್ಣು ಮಕ್ಕಳು ಅನ್ಯಾಯ ಅಕ್ರಮಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು.

ತಮ್ಮಲ್ಲಿನ ವೃತ್ತಿ ಕೌಶಲ್ಯವನ್ನು ಸದ್ಭಳಕೆ ಮಾಡಿಕೊಂಡು ಸ್ವ ಉದ್ಯೋಗಿಗಳಾಗಿ ಸಾಧನೆ ಮಾಡಬೇಕು ಎಂದು ಹೇಳಿದರು.ಪುರಸಭೆ ಅಧ್ಯಕ್ಷೆ ಪಂಕಜಾ, ಶ್ರೀನಿವಾಸ ಕಲ್ಯಾಣ ಮಂಟಪದ ಮಾಲೀಕ ರವಿಕುಮಾರ್, ಪತ್ರಕರ್ತರಾದ ವಿ. ಲೋಕೇಶ್, ಕೆ.ಆರ್. ನೀಲಕಂಠ, ಟೈಲರಿಂಗ್ ತರಬೇತುದಾರರಾದ ಶ್ರೀಲಕ್ಷ್ಮೀ, ಮೇಲ್ವಿಚಾರಕರಾದ ಯೋಗೇಶ್ವರಿ, ಪ್ರಕಾಶ್, ಗಣಪತಿ, ಗೋಪಿನಾಥ್, ಗಂಗಾಧರ್, ಮಂಜುನಾಥ್, ಸುಧಾಕರ್, ಲಕ್ಷ್ಮಿ, ತಾಲೂಕು ಜ್ಞಾನ ವಿಕಾಸ ಅಧಿಕಾರಿ ಅನಿತಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಗತಿ ಬಂಧು ಸ್ತ್ರಿ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಿದವು.*ವರದಿ.ಎಂ.ಕೆ. ಹರಿಚರಣತಿಲಕ್ * , *ಕೃಷ್ಣರಾಜಪೇಟೆ* , *ಮಂಡ್ಯ* .

Leave a Reply

Your email address will not be published. Required fields are marked *