ವೀರಮಾರ್ಗ ನ್ಯೂಸ್ : ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ದಿನಕ್ಕೊಂದು ಹಗರಣ ಬಹಿರಂಗವಾಗುತ್ತಿದೆ. ಜನರು ತಮ್ಮ ಮೂಲಭೂತ ಅವಶ್ಯಕತೆಗಳನ್ನು ಪಡೆದುಕೊಳ್ಳಲು ಕೂಡ ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ರಾಜ್ಯದಲ್ಲಿ ಭ್ರಷ್ಟಾಚಾರವನ್ನು ನಿಗ್ರಹಿಸುವ ಬಲಿಷ್ಠವಾದ ವ್ಯವಸ್ಥೆ ಇಲ್ಲದಿರುವುದು ಕಾರಣವಾಗಿದೆ. ಭ್ರಷ್ಟಾಚಾರವನ್ನು ನಿಗ್ರಹಿಸಬೇಕಾದ ಹಾಗೂ ದುರಾಡಳಿತವನ್ನು ಸರಿದಾರಿಗೆ ತರಲೆಂದೇ ಇರುವ ಲೋಕಾಯುಕ್ತ ಸಂಸ್ಥೆಯು ತನ್ನ ಘನತೆ, ಗೌರವವನ್ನು ಹಾಗೂ ಜನರ ವಿಶ್ವಾಸವನ್ನು ಕಳೆದುಕೊಂಡಿರುವುದು. ಲೋಕಾಯುಕ್ತವು ವಿಶ್ವಾಸ ಕಳೆದುಕೊಂಡಿರುವುದರಿಂದ ಜನರು ಭ್ರಷ್ಟಾಚಾರ ಹಾಗೂ ದುರಾಡಳಿತದ ಬಗ್ಗೆ ದೂರು ನೀಡಲು ಹಿಂಜರಿಯುತ್ತಿದ್ದಾರೆ. ಲಂಚ ನೀಡಿಯೇ ಕೆಲಸಗಳನ್ನು ಮಾಡಿಸಿಕೊಳ್ಳುವಂತಹ ಪರಿಸ್ಥಿತಿ ಬಂದಿದ್ದು, ಇದು ಸಹಜ ಎಂಬಂತಹ ಮನಸ್ಥಿತಿ ಮನೆ ಮಾಡುತ್ತಿದೆ. ಇದು ಆಘಾತಕಾರಿಯಾದ ವಿಚಾರ.
ಹಿಂದೆ ಕರ್ನಾಟಕ ಲೋಕಾಯುಕ್ತವು ಇಡೀ ದೇಶಕ್ಕೆ ಮಾದರಿಯಾಗಿತ್ತು, ಆದರೆ ನ್ಯಾಯಮೂರ್ತಿ ಸಂತೋಷ ಹೆಗಡೆಯವರ ನಂತರ ಆ ಸ್ಥಾನವನ್ನು ಅಲಂಕರಿಸಿದವರು, ಆ ಹುದ್ದೆಗೆ ತಕ್ಕನಾಗಿ ನಡೆದುಕೊಳ್ಳದೆ ಮಾಡಬಾರದ ಕೆಲಸಗಳನ್ನು ಮಾಡಿ ಲೋಕಾಯುಕ್ತವನ್ನು ಅಪವಿತ್ರಗೊಳಿಸಿದ್ದಾರೆ. ತದನಂತರ ಬಂದ ಯಾರೊಬ್ಬರೂ ಲೋಕಾಯುಕ್ತ ಸಂಸ್ಥೆಯ ಘನತೆಯನ್ನು ಮರುಸ್ಥಾಪಿಸುವ ಕಾರ್ಯವನ್ನು ಮಾಡಲು ಮುಂದಾಗಿಲ್ಲ. ಲೋಕಾಯುಕ್ತವೂ ಕೂಡ ಸರ್ಕಾರದ ಭಾಗವಾಗಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಇಂತಹ ಸಂದರ್ಭದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಬೇಕು, ಹೆಚ್ಚಿನ ಅಧಿಕಾರ ನೀಡಬೇಕು ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕೆಂದು ಕೆಆರ್‌ಎಸ್ ಪಕ್ಷವು ಹೋರಾಟ ಮಾಡುತ್ತಾ ಬಂದಿದೆ. ಹಾಗೆಯೇ ಲೋಕಾಯುಕ್ತ ಸಂಸ್ಥೆ ಮಾಡಬೇಕಾದ ಕೆಲಸವನ್ನು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಭ್ರಷ್ಟರನ್ನು ಪ್ರಶ್ನಿಸುವ ಮತ್ತು ಲಂಚ ನೀಡದೆ ಜನರ ಕೆಲಸಗಳನ್ನು ಮಾಡಿಸಿಕೊಡುವ ಮೂಲಕ ಜನರನ್ನು ಸಬಲಗೊಳಿಸುತ್ತಿದ್ದಾರೆ. ಈ ಕೆಲಸವನ್ನು ಮಾಡಬೇಕಾದಂತ ಲೋಕಾಯುಕ್ತ ಸಂಸ್ಥೆಯು ಇಂದು ಬಿಳಿಯಾನೆಯಾಗಿದೆ.
ಇಂತಹ ಸಂದರ್ಭದಲ್ಲಿ ಲೋಕಾಯುಕ್ತ ಸಂಸ್ಥೆಯು ಪಾರದರ್ಶಿಕವಾಗಿ ಕಾರ್ಯನಿರ್ವಹಿಸಿ ಮಾದರಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರು ತಮ್ಮ ಆಸ್ತಿ ವಿವರಗಳನ್ನು ಪ್ರತಿವರ್ಷ ಘೋಷಿಸಿ ಸಂಸ್ಥೆಯ ಜಾಲತಾಣಗಳಲ್ಲಿ ಪ್ರಕಟಿಸಬೇಕೆಂದು ಕೆಆರ್‌ಎಸ್ ಪಕ್ಷ ಆಗ್ರಹಿಸುತ್ತದೆ. ಸರ್ಕಾರಿ ನೌಕರರು ತಮ್ಮ ಆಸ್ತಿ ವಿವರಗಳನ್ನು ಪ್ರತಿವರ್ಷ ತಮ್ಮ ಇಲಾಖೆಗೆ ಸಲ್ಲಿಸಬೇಕಾಗಿರುವುದು ಕಡ್ಡಾಯವಾಗಿದೆ. ಹಾಗೆಯೇ ಜನಪ್ರತಿನಿಧಿಗಳು ಆಸ್ತಿ ವಿವರಗಳನ್ನು ಪ್ರತಿವರ್ಷ ಲೋಕಾಯುಕ್ತರಿಗೆ ಸಲ್ಲಿಸಬೇಕು. ಆದರೆ ಜನಪ್ರತಿನಿಧಿಗಳಿಂದ ಆಸ್ತಿ ವಿವರ ಕೇಳಿ ಪಡೆಯುವ ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರುಗಳು ತಮ್ಮ ಆಸ್ತಿ ವಿವರಗಳನ್ನು ಘೋಷಿಸಿಕೊಳ್ಳುವುದಿಲ್ಲ. ಕರ್ನಾಟಕ ಲೋಕಾಯುಕ್ತ ಕಾಯ್ದೆಯಲ್ಲಿ ಈ ಬಗ್ಗೆ ನಿಯಮಗಳಿಲ್ಲ ಎಂದು ನೆಪ ಹೇಳಲಾಗುತ್ತಿದೆ. ಇದು ಕಾಯ್ದೆ / ನಿಯಮಗಳಿಗೆ ಮಿಗಿಲಾದ ವಿಚಾರವಾಗಿದ್ದು, ಪಾರದರ್ಶಕತೆಯನ್ನು ಮರೆಯುವ ಮೂಲಕ ಮಾದರಿಯಾಗಿ ನಡೆದುಕೊಳ್ಳುವ ಹಾಗೂ ನೈತಿಕತೆಯನ್ನು ತೋರಿಸುವ ವಿಚಾರವಾಗಿದೆ. ಈ ಬಗ್ಗೆ ನಿಯಮವಿಲ್ಲದಿದ್ದರೂ ಕೂಡ ತಮ್ಮ ಆಸ್ತಿ ವಿವರಗಳನ್ನು ಘೋಷಿಸಿ ಮಾದರಿಯಾಗಲು ಯಾವುದೇ ರೀತಿಯ ಅಡೆತಡೆಗಳಿಲ್ಲ. ಹಾಗೆಯೇ ತಮ್ಮ ಆಸ್ತಿ ವಿವರಗಳನ್ನು ಘೋಷಿಸಿ, ಈ ಬಗ್ಗೆ ಕಾನೂನು ಬದಲಾವಣೆ ತರಬೇಕೆಂದು ಲೋಕಾಯುಕ್ತರು ಸರ್ಕಾರಕ್ಕೆ ಪತ್ರ ಬರೆಯಬೇಕೆಂದು ಆಗ್ರಹಿಸುತ್ತದೆ.
ದೇಶದ ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರಗಳನ್ನು ಸ್ವಯಂ ಘೋಷಣೆ ಮಾಡಿಕೊಳ್ಳುವ ಪದ್ಧತಿಯನ್ನು ಯಾವುದೇ ನಿಯಮಗಳು ಇಲ್ಲದಿದ್ದರೂ ಪಾಲಿಸಿಕೊಂಡು ಬರಲಾಗುತ್ತಿದೆ. ಇದೇ ಪದ್ಧತಿಯನ್ನು ಅನುಸರಿಸಿ ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರು ಮಾದರಿಯಾಗಬಹುದಾಗಿದೆ, ಇದರಿಂದ ಲೋಕಾಯುಕ್ತ ಸಂಸ್ಥೆಯ ಘನತೆ – ಗೌರವ ಹೆಚ್ಚುತ್ತದೆ. ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ರಘು ಜಾಣಗೆರೆ ಅವರ ನೇತೃತ್ವದಲ್ಲಿ ಇಂದು ಪಕ್ಷದ ಕಾರ್ಯಕರ್ತರು ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸರ್ಕಾರವು ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತಂದು ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರು ಕಡ್ಡಾಯವಾಗಿ ಆಸ್ತಿ ಘೋಷಣೆ ಮಾಡುವಂತೆ ಬದಲಾವಣೆ ಮಾಡಬೇಕೆಂದು ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಸಂಘಟನಾ ಕಾರ್ಯದರ್ಶಿಗಳಾದ ಎಲ್. ಜೀವನ್ ರಘುನಂದನ್ ಜೆ. ಪಿ., ಯುವ ಘಟಕದ ರಾಜ್ಯಾಧ್ಯಕ್ಷರಾದ ಜನನಿ ವತ್ಸಲ ಹಾಗೂ ಇದರ ಮುಖಂಡರುಗಳು ಉಪಸ್ಥಿತರಿದ್ದರು.