ವೀರಮಾರ್ಗ ನ್ಯೂಸ್ : CHITRADURGA JILLA : ಮೈಕ್ರೋ ಫೈನಾನ್ಸ್, ಲೇವಾದೇವಿ, ಗಿರವಿ ಹಣಕಾಸು ಸಂಸ್ಥೆಗಳು ಕಡ್ಡಾಯವಾಗಿ ಆರ್.ಬಿ.ಐ (ಭಾರತೀಯ ರಿಸರ್ವ್ ಬ್ಯಾಂಕ್) ಮಾರ್ಗಸೂಚಿ ಪಾಲನೆ ಮಾಡಬೇಕು. ಸಾಲ ಮಂಜೂರಾತಿ ಹಾಗೂ ವಸೂಲಾತಿ ನಿಯಮ ಬದ್ಧವಾಗಿರಬೇಕು. ಯಾವುದೇ ಕಾರಣಕ್ಕೂ ನಿಯಮಬಾಹಿರ ಮಾರ್ಗ ಅನುಸರಿಸಬಾರದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.ಸಾಲ ವಸೂಲಾತಿ ಸಮಯದಲ್ಲಿ ಸಾರ್ವಜನಿಕರಿಗೆ ನೀಡುತ್ತಿರುವ ಕಿರುಕುಳ ಹಾಗೂ ಅತಿಯಾದ ಬಡ್ಡಿ ವಿಧಿಸುತ್ತಿರುವ ಕುರಿತಂತೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮೈಕ್ರೋ ಫೈನಾನ್ಸ್, ಲೇವಾದೇವಿ, ಗಿರವಿ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಒಬ್ಬರ ಹೆಸರಿನಲ್ಲಿ ಮತ್ತೊಬ್ಬರಿಗೆ ಸಾಲ ನೀಡುವುದಾಗಲಿ, ವಸೂಲಿ ಮಾಡುವುದಾಗಲಿ ಮಾಡಬಾರದು.
ಸಾಲ ಮಂಜೂರಾತಿ ಸಂದರ್ಭದಲ್ಲಿ ನೇರವಾಗಿ ಸಾಲ ಪಡೆದವರೊಂದಿಗೇ ವ್ಯವಹರಿಸಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು. ಸಾಲ ಮಂಜೂರಾತಿ ನಿಯಮಗಳು, ಸಾಲದ ಮೊತ್ತ, ಅವಧಿ, ಬಡ್ಡಿ ದರ, ಹಿಂಪಾವತಿ ಅವಧಿ ಸೇರಿದಂತೆ ಅಗತ್ಯ ಮಾಹಿತಿಗಳನ್ನೊಳಗೊಂಡ ಸತ್ಯಾಂಶ ಮಾಹಿತಿಯನ್ನು (ಫ್ಯಾಕ್ಟ್ ಶೀಟ್) ಸಾಲ ಪಡೆಯುವವರಿಗೆ ಕಡ್ಡಾಯವಾಗಿ ನೀಡಬೇಕು ಎಂದು ಸೂಚಿಸಿದರು.ಸಾಲ ಮಂಜೂರಾತಿ ಸಂದರ್ಭದಲ್ಲಿಯೇ ಸಂಸ್ಥೆಯ ಎಲ್ಲಾ ಷರತ್ತು ಹಾಗೂ ನಿಬಂಧನೆಗಳನ್ನು ಸಾಲ ಪಡೆಯುವವರಿಗೆ ಮನವರಿಕೆ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಮಾನವೀಯತೆ ಹಾಗೂ ಮಾನವೀಯ ಮೌಲ್ಯಗಳನ್ನು ಮೀರಿ ಸಾಲ ವಸೂಲಾತಿ ಮಾಡಬಾರದು.
ನಿಯಮಬದ್ಧವಾಗಿಯೇ ಸಾಲ ವಸೂಲಾತಿ ಮಾಡಬೇಕು. ಯಾವುದೇ ತರಹದ ಒತ್ತಡವನ್ನು ಸಾಲಗಾರರ ಮೇಲೆ ಹೇರಬಾರದು. ಅಪರಾಧ ಹಿನ್ನಲೆ ಹೊಂದಿರುವರನ್ನು ಸಾಲ ವಸೂಲಾತಿಗೆ ನೇಮಿಸಿಕೊಳ್ಳಬಾರದು ಎಂದು ಹೇಳಿದರು.ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿ ಕಿರುಕುಳ ತಡೆಯುವ ನಿಟ್ಟಿನಲ್ಲಿ ಮಾರ್ಗಸೂಚಿಗಳ ರೂಪಿಸಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಹೊಸ ಕಾಯ್ದೆ ಜಾರಿ ಮಾಡಲಿದೆ. ಇದರ ಅನುಸಾರ ಉಪವಿಭಾಗಾಧಿಕಾರಿಗಳು ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ರಚಿಸಲಾಗುವುದು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಘಟಕ ತೆರೆಯಲಾಗುವುದು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ತಮ್ಮ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಹಣಕಾಸು ಸಂಸ್ಥೆಗಳು ಸಾಲ ನೀಡುವಾಗ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಸಾಲ ನೀಡುವಾಗ ಎಲ್ಲಾ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮನಿ ಲೆಂಡರ್ ಆಕ್ಟ್, ಪಾನ್ ಬ್ರೋಕರ್ ಆಕ್ಟ್ ಹಾಗೂ ಆರ್.ಬಿ.ಐ. ಮಾರ್ಗಸೂಚಿಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು.
ಯಾವುದೇ ಕಾರಣಕ್ಕೂ ಸಾಲ ವಸೂಲಾತಿಗೆ ಕಾನೂನುಬಾಹಿರ ಕ್ರಮಗಳನ್ನು ಕೈಗೊಳ್ಳಬಾರದು. ಮನೆಗೆ ತೆರಳಿ ಗಲಾಟೆ, ಸಂಬಂಧಿಕರಿಗೆ ಕಿರುಕುಳ, ರಾತ್ರಿ ಸಮಯದಲ್ಲಿ ಸಾಲ ವಸೂಲಾತಿಯಂತಹ ಮಾರ್ಗಗಳನ್ನು ಅನುಸರಿಸಬಾರದು. ರಾಜ್ಯ ಸರ್ಕಾರ ಇಂತಹ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿದೆ. ಕಾಯ್ದೆಗಳನ್ನು ಮೀರಿ ಸಾಲ ವಸೂಲಾತಿ ಮಾಡುತ್ತಿರುವ ಬಗ್ಗೆ ದೂರು ಕೇಳಿಬಂದರೆ, ತಕ್ಷಣವೇ ಸಾಲ ವಸೂಲಿಗೆ ಬಂದವರ ಮೇಲೆ ಅಪರಾಧಿಕ ಅತಿಕ್ರಮಣ, ದೌರ್ಜನ್ಯ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧಗಳ ಅಡಿ ಬಂಧಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿ.ಪಂ ಸಿಇಓ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಕುಮಾರ್ ಬಾಬು, ಡಿವೈಎಸ್‍ಪಿಗಳಾದ ದಿನಕರ್, ರಾಜಣ್ಣ, ಶಿವಕುಮಾರ್ ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.
ವರದಿ : ಕುಮಾರ. ಚಿತ್ರದುರ್ಗ.