ಗೊಬ್ಬರದರ ನಿಯಂತ್ರಣಕ್ಕೆ KRSಪಕ್ಷದ ಜೋಗನಹಳ್ಳಿ ಗುರುಮೂರ್ತಿ ಒತ್ತಾಯ.

ಗೊಬ್ಬರ ದರ ನಿಯಂತ್ರಣಕ್ಕೆ ಕೆ ಆರ್ ಎಸ್ ಪಕ್ಷದ ಜೋಗನಹಳ್ಳಿ ಗುರುಮೂರ್ತಿ ಒತ್ತಾಯ.

ವೀರಮಾರ್ಗ ನ್ಯೂಸ್ : ಕೊಪ್ಪಳ ಜಿಲ್ಲಾ : ರಾಜ್ಯದಲ್ಲಿ ರಸಗೊಬ್ಬರ ಮಾರಾಟಗಾರರು ಯೂರಿಯಾ, ಡಿಎಪಿ ಹಾಗೂ ಕಾಂಪ್ಲೆಕ್ಸ್ ರಸಗೊಬ್ಬರವನ್ನು ನಿಗದಿತ ಎಂಆರ್‌ಪಿ ಬೆಲೆಗೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ರೈತರಿಗೆ ಆರ್ಥಿಕ ಹೊರೆ ಉಂಟು ಮಾಡುತ್ತಿದ್ದಾರೆ.ಕೃಷಿ ಇಲಾಖೆ ಅಧಿಕಾರಿಗಳು ಇಂತಹ ಡೀಲರ್ಸ್ ಗಳ ಪರವಾನಿಗೆ ರದ್ದುಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೆಆರ್‌ಎಸ್ ಪಕ್ಷದ ರಾಜ್ಯ ರೈತ ಘಟಕದ ರಾಜ್ಯಾಧ್ಯಕ್ಷರಾದ ಜೋಗನಹಳ್ಳಿ ಗುರುಮೂರ್ತಿಯವರು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಗುರುಮೂರ್ತಿಯವರು ಕೆಲವು ರಾಸಾಯನಿಕ ಗೊಬ್ಬರ ಮಾರಾಟಗಾರರು ರಾಜ್ಯಾದ್ಯಂತ ಗೊಬ್ಬರ ಪೂರೈಕೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ರೈತರಿಗೆ ನಿರಂತರವಾಗಿ ಮೋಸ ಮಾಡುತ್ತಿದ್ದಾರೆ. ಸಬ್ಸಿಡಿ ವ್ಯಾಪ್ತಿಗೆ ಬರುವ ಯೂರಿಯ ಡಿಎಪಿ ರಸಗೊಬ್ಬರವನ್ನು ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೂ ಸಹ ರಾಜ್ಯ ಸರ್ಕಾರವಾಗಲಿ, ಕೃಷಿ ಇಲಾಖೆ ಅಧಿಕಾರಿಗಳು ಆಗಲಿ ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿ ಕುಳಿತಿದ್ದಾರೆ.ಅಕ್ರಮ ನಡೆಸುತ್ತಿರುವ ಡೀಲರ್ಗಳಿಗೆ ಪರೋಕ್ಷವಾಗಿ ಬೆಂಬಲವನ್ನ ನೀಡುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ರಸಗೊಬ್ಬರ ವಿತರಕರು 45 ಕೆಜಿ ತೂಕದ ಒಂದು ಚೀಲ ಯೂರಿಯಾಗೆ ಸಬ್ಸಿಡಿ 266 ರೂಪಾಯಿ ಇದ್ದು 320ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. 50 ಕೆಜಿ ತೂಕದ ಡಿಎಪಿ ಗೆ 1350 ಇದ್ದರೆ 1,450ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರ ನಡುವೆ ಅನಾವಶ್ಯಕ ಲಿಂಕ್ ಪ್ರಾಡಕ್ಟ್ ಗಳನ್ನ ಖರೀದಿಸುವಂತೆ ರೈತರಿಗೆ ಒತ್ತಡ ಹಾಕಿ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯಾದ್ಯಂತ ರೈತರಿಗೆ ಅನುಕೂಲವಾಗುವಂತೆ ಕೃಷಿ ಇಲಾಖೆ ಮತ್ತು ಜಿಲ್ಲಾಡಳಿತಗಳು,ತಾಲೂಕಡಳಿತಗಳು ಅಗತ್ಯ ಗೊಬ್ಬರ ಪೂರೈಸಬೇಕು.ರಸಗೊಬ್ಬರ ಮಾರಾಟಗಾರರು ಅಂಗಡಿಗಳಲ್ಲಿ ಗೊಬ್ಬರದ ದರಪಟ್ಟಿ,ದಾಸ್ತಾನು ವಿವರದ ಫಲಕ ಕಡ್ಡಾಯವಾಗಿ ಅಳವಡಿಸಬೇಕು. ಸಾರ್ವಜನಿಕರಿಗೆ ಮತ್ತು ರೈತರಿಗೆ ರಸಗೊಬ್ಬರ ಅಕ್ರಮಗಳ ಬಗ್ಗೆ ದೂರು ನೀಡಲು ಸಂಬಂಧಪಟ್ಟ ತಾಲೂಕು ಮತ್ತು ಜಿಲ್ಲಾ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳನ್ನ ಸೂಚನಾ ಫಲಕದಲ್ಲಿ ನಮೂದಿಸಬೇಕು. ರಸಗೊಬ್ಬರ ಮಾರಾಟ ಕಂಪನಿಗಳು ಅಂಗಡಿಗಳ ಬಾಗಿಲಿಗೆ ತಲುಪುತ್ತೇವೆ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ರಸಗೊಬ್ಬರ ಜೊತೆಗೆ ಲಿಂಕ್ ಖರೀದಿಸಲು ಒತ್ತಡ ಇರುವ ಪ್ರಕ್ರಿಯೆ ನಿಲ್ಲಬೇಕು ನಿಯಮ ಮೀರಿ ಮಾರಾಟ ಮಾಡುವವರ ಲೈಸೆನ್ಸ್ ರದ್ದುಪಡಿಸಬೇಕೆಂದು ಆಗ್ರಹಿಸಿದರು.

ರೈತರಿಗಾಗಿ ಕೆ ಆರ್ ಎಸ್ ಸಹಾಯವಾಣಿ.
ದೇಶದ ಬೆನ್ನೆಲುಬು ಆಗಿರುವ ರೈತರ ಸಹಾಯಕ್ಕೆ ಕೆಆರ್‌ಎಸ್ ಪಕ್ಷ ನಿಂತಿದ್ದು ರೈತರಿಗೆ ರಸಗೊಬ್ಬರ ಪೂರೈಕೆಯಲ್ಲಿ ಆಗುವ ಮೋಸ ಮತ್ತು ಅಕ್ರಮಗಳನ್ನು ನಿಲ್ಲಿಸಲು ನಿರಂತರ ಹೋರಾಡುತ್ತಿದೆ ಆಸಕ್ತ ರೈತರು ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಅಕ್ರಮ ಕಂಡು ಬಂದರೆ ಪಕ್ಷದ ಸಹಾಯವಾಣಿ ಸಂಖ್ಯೆ 7676791041 ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.