ಹಾವೇರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಆದೇಶಿಸಿದ ರೈಲ್ವೆ ಸಚಿವರಿಗೆ ಬೊಮ್ಮಾಯಿ ಅಭಿನಂದನೆ

ಹಾವೇರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಆದೇಶಿಸಿದ ರೈಲ್ವೆ ಸಚಿವರಿಗೆ ಬೊಮ್ಮಾಯಿ ಅಭಿನಂದನೆ
ವೀರಮಾರ್ಗ ನ್ಯೂಸ್ ಹಾವೇರಿ :
ಬೆಂಗಳೂರು-ಧಾರವಾಡ ಮಧ್ಯ ಸಂಚರಿಸುವ ವಂದೇ ಭಾರತ ರೈಲು ಹಾವೇರಿಯಲ್ಲಿ ನಿಲುಗಡೆಗೆ ಆದೇಶ ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮಾಜಿ ಸಿಎಂ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕೆ ಪ್ರಕಟಣೆ ಹೊರಡಿಸಿರುವ ಅವರು, ಭಾರತ ದೇಶದಲ್ಲಿ ಕಳೆದ ಹತ್ತು ವರ್ಷ ಎಲ್ಲ ರಂಗದಲ್ಲಿ ಬಹಳ ದೊಡ್ಡ ಕ್ರಾಂತಿಯಾಗಿದೆ. ವಿಶೇಷವಾಗಿ ರೈಲ್ವೆ ಸಂಕರ್ಕ, ಡಿಜಿಟಲ್, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಜಗತ್ತಿನಲ್ಲಿಯೇ ಅತಿ ದೊಡ್ಡ ರೈಲ್ವೆ ಜಾಲ ಹೊಂದಿರುವ ದೇಶ ಭಾರತ-ಕರ್ನಾಟಕದಲ್ಲಿ ಅತಿ ಹೆಚ್ಚು ರೈಲ್ವೆ ಲೈನು ಆಗಿರುವುದದು ಕಳೆದ ಹತ್ತು ವರ್ಷದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ.
ಕೇಂದ್ರ ಸರ್ಕಾರ ಕರ್ನಾಟಕದ ರೈಲ್ವೆ ಯೋಜನೆಗಳ ಅಭಿವೃದ್ದಿಗೆ ಕಳೆದ ವರ್ಷ 7 ಸಾವಿರ ಕೋಟಿ ರೂ. ಹಾಗೂ ಈ ವರ್ಷ 7 ಸಾವಿರ ಕೋಟಿ ರೂ. ಅನುದಾನ ನೀಡಿದೆ. ವಿಶೇಷವಾಗಿ ರೈಲ್ವೆ ಲೈನುಗಳ ವಿದ್ಯುದೀಕರಣ ಆಗಿದೆ. ಇದರ ಪರಿಣಾಮ ಅತಿವೇಗವಾಗಿ ಹೋಗುವ ವಂದೇ ಭಾರತ ರೈಲು ಕರ್ನಾಟಕದಲ್ಲಿ ಆರಂಭವಾಗಿದೆ. ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಕಾರಣ ಎಂದು ತಿಳಿಸಿದ್ದಾರೆ.

ಬೆಂಗಳೂರ ಧಾರವಾಡ ಮಧ್ಯ ಸಂಚರಿಸುವ ವಂದೇ ಭಾರತ ರೈಲು ಕೇವಲ ಐದು ಗಂಟೆಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ ಧಾರವಾಡಕ್ಕೆ ಬರುತ್ತದೆ. ಇದು ಕೇವಲ ತುಮಕೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡದಲ್ಲಿ ನಿಲ್ಲುಗಡೆ ಮಾಡಲಾಗುತ್ತಿತ್ತು. ಈ ರೈಲು ಹಾವೇರಿಯಲ್ಲಿಯೂ ನಿಲುಗಡೆಯಾಗಬೇಕೆಂದು ಹಾವೇರಿ ಜಿಲ್ಲೆಯ ಜನರ ಒತ್ತಾಸೆಯಾಗಿತ್ತು.
ಹಾವೇರಿ ಈ ಕಡೆ ಶಿರಸಿ, ಕಾರವಾರ ಕಡಲು ಕರ್ನಾಟಕ ಹಾಗೂ ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದ ನಡುವೆ ಸಂಪರ್ಕ ಕೇಂದ್ರವಾಗಿದೆ. ಹೀಗಾಗಿ ವಂದೇ ಭಾರತ್ ರೈಲು ಹಾವೇರಿಯಲ್ಲಿ ನಿಲುಗಡೆ ಆಗಬೇಕೆಂದು ಹಾವೇರಿ ಮಹಾಜನತೆ, ಚೇಂಬರ್ ಆಫ್ ಕಾಮರ್ಸ್ ಬೇಡಿಕೆ ಇತ್ತು.
ಜಿಲ್ಲೆಯ ಜನರ ಬೇಡಿಕೆಯನ್ನು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಮೇಲೆ ಒತ್ತಡ ಹೇರಿ ಹಾಗೂ ನಮ್ಮ ರಾಜ್ಯದವರೇ ಆದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದ್ದೆ, ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಹಾವೇರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಆದೇಶ ನೀಡಿದ್ದಾರೆ ಎಂದು ಹೇಳಿದ್ದಾರೆ.

ಸದ್ಯ ಇದು ಟ್ರಯಲ್ ಬೇಸಿಸ್ ಆಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದರೆ ಕಾಯಂ ಮಾಡುತ್ತಾರೆ. ಈ ರೈಲು ನಿಲುಗಡೆಯ ಉದ್ಘಾಟನೆ ದಿನಾಂಕವನ್ನು ಶೀಘ್ರವೇ ನಿಗದಿ ಮಾಡುತ್ತಾರೆ. ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆಯಾಗಿಸುವಲ್ಲಿ ಯಶಸ್ವಿಯಾದ ಹಾವೇರಿ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾವೇರಿಯ ಜನತೆ ವಂದೇ ಭಾರತ್ ರೈಲನ್ನು ಹೆಚ್ಚು ಹೆಚ್ಚು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *