ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಕೊಂದ ಗಂಡ : ಹತ್ಯೆ ಬಳಿಕ ಮಾವನಿಗೆ ಕರೆ…!!!
ವೀರಮಾರ್ಗ ನ್ಯೂಸ್ : ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ದಾಂಪತ್ಯ ಕಲಹ ಭೀಕರ ಅಂತ್ಯ ಕಂಡಿದೆ. ಪತ್ನಿಯ ಮೊಬೈಲ್ಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದ ವಿಚಾರವನ್ನು ಮನಸ್ಸಿಗೆ ಹಾಕಿಕೊಂಡ ಪತಿಯೊಬ್ಬ, ಅನುಮಾನದಿಂದ ಕೋಪಗೊಂಡು ಹೆಂಡತಿಯ ಜೀವವನ್ನೇ ಕಸಿದುಕೊಂಡಿದ್ದಾನೆ ಎನ್ನಲಾಗಿದೆ.
23 ವರ್ಷದ ಯೋಗಿಣಿ ಮೃತಪಟ್ಟ ಮಹಿಳೆ. ಹಲವು ವರ್ಷಗಳ ಪ್ರೀತಿಯ ಬಳಿಕ ಮದುವೆಯಾಗಿದ್ದ ಈ ಜೋಡಿಯ ಜೀವನದಲ್ಲಿ ಅನುಮಾನವೇ ದೊಡ್ಡ ಬಿರುಕು ಮೂಡಿಸಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಘಟನೆಯ ದಿನ ಮೊಬೈಲ್ ಕರೆ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿದೆ. ಕೋಪದ ಭರದಲ್ಲಿ ಪತಿ ಗಣೇಶ್ ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಇನ್ನಷ್ಟು ಆಘಾತಕಾರಿ ಸಂಗತಿಯೆಂದರೆ, ಕೃತ್ಯ ಎಸಗಿದ ಬಳಿಕ ಯೋಗಿಣಿಯ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ ಎನ್ನಲಾಗಿದೆ. ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಈ ಘಟನೆ ಕೈವಾರ ಪ್ರದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪ್ರೀತಿಯಿಂದ ಆರಂಭವಾದ ಸಂಬಂಧ ಅನುಮಾನದ ಕಾರಣಕ್ಕೆ ದುರಂತ ಅಂತ್ಯ ಕಂಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ವರದಿ: ಚನ್ನೇಶ್ ಕೆ ಎಂ
ಬೆಂಗಳೂರು