ಬಿಗಿ ಕ್ರಮಗಳ ನಡುವೆ ಸಿಇಟಿ ಆರಂಭ

ಬಿಗಿ ಕ್ರಮಗಳ ನಡುವೆ ಸಿಇಟಿ ಆರಂಭ
ವೀರಮಾರ್ಗ ನ್ಯೂಸ್ ಬೆಂಗಳೂರು :
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ೨೦೨೫ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಇಂದು ಮತ್ತು ನಾಳೆ ಬಿಗಿ ಕ್ರಮಗಳ ನಡುವೆ ನಡೆಯಲಿದೆ.ನ್ನು ಕೈಗೊಳ್ಳಲಾಗಿದೆ.
ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ನಿನ್ನೆ ಕನ್ನಡ ಭಾಷಾ ಪರೀಕ್ಷೆ ಬೆಂಗಳೂರು, ಮಂಗಳೂರು, ವಿಜಯಪುರ ಮತ್ತು ಬೆಳಗಾವಿ ನಗರಗಳ ಒಟ್ಟು ಐದು ಕೇಂದ್ರಗಳಲ್ಲಿ ನಡೆಯಿತು.
ಇಂದು ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ಹಾಗೂ ನಾಳೆ ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ಪರೀಕ್ಷೆಗಳು ನಡೆಯಲಿದ್ದು, ಹಿಂದೆಂದಿಗಿಂತ ಹೆಚ್ಚು ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಸ್ಪರ್ಧಾತ್ಮಕ ನೇಮಕಾತಿ ಪರೀಕ್ಷೆ ಮಾದರಿಯಲ್ಲೇ ಸಿಇಟಿಗೂ ಕ್ಯಾಮರಾ ಕಣ್ಣಾವಲು ಇಡಲಾಗಿದೆ. ವೆಬ್ ಕಾಸ್ಟಿಂಗ್ ಮೂಲಕ ಎಲ್ಲ ೭೭೫ ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮೇಲುಸ್ತುವಾರಿ ನಡೆಸಲಿದ್ದಾರೆ ಎಂದು ವಿವರಿಸಿದ್ದಾರೆ.
ಪೊಲೀಸ್ / ಗೃಹ ರಕ್ಷಕ ದಳದ ಸಿಬ್ಬಂದಿ ಅಭ್ಯರ್ಥಿಗಳನ್ನು ತೀವ್ರ ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರದೊಳಗೆ ಬಿಡಲಿದ್ದಾರೆ. ಹೀಗಾಗಿ ಕನಿಷ್ಠ ಒಂದೂವರೆ ಗಂಟೆ ಮುಂಚೆಯೇ ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಬಂದು ತಪಾಸಣೆಗೆ ಒಳಗಾಗಬೇಕು. ಅಭ್ಯರ್ಥಿಯ ಮುಖ ಚಹರೆ ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆ ಮೂಲಕ ಅಭ್ಯರ್ಥಿಯ ನೈಜತೆ ಪರಿಶೀಲನೆ ಮಾಡಲಾಗುತ್ತದೆ. ಯಾರದೋ ಪರೀಕ್ಷೆಯನ್ನು ಇನ್ಯಾರೊ ಬರೆಯುವುದನ್ನು ತಡೆಯುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿ ಮಾಡಲಾಗಿದೆ.
ಸೀಟು ಹಂಚಿಕೆಯಾಗಿ ಕಾಲೇಜುಗಳಿಗೆ ಪ್ರವೇಶ ಆಗುವ ಸಂದರ್ಭದಲ್ಲಿ ಕೂಡ ಅಭ್ಯರ್ಥಿಯ ಭಾವಚಿತ್ರವನ್ನು ಹೋಲಿಕೆ ಮಾಡಿಯೇ ಪ್ರವೇಶ ನೀಡುವ ವ್ಯವಸ್ಥೆ ಮಾಡಿದ್ದು, ನಕಲಿ ಅಭ್ಯರ್ಥಿಗಳಿಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.
ಕಷ್ಟಪಟ್ಟು ಓದಿದ ಅಭ್ಯರ್ಥಿಗಳಿಗೆ ಯಾವುದೇ ರೀತಿ ಮೋಸ ಆಗಲು ಬಿಡುವುದಿಲ್ಲ. ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ನಿಶ್ಚಿತೆಯಿಂದ ಪರೀಕ್ಷೆ ಬರೆಯಬಹುದು ಎಂದು ಅವರು ಅಭಯ ನೀಡಿದ್ದಾರೆ.
ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಅಥವಾ ಅನುತ್ತೀರ್ಣರಾಗಿರುವವರಿಗೆ ಇನ್ನೂ ಫಲಿತಾಂಶವನ್ನು ಉತ್ತಮ ಮಾಡಿಕೊಳ್ಳಲು ಅವಕಾಶ ಇರುವ ಕಾರಣ ಯಾರೂ ಸಿಇಟಿ ಬರೆಯುವುದನ್ನು ತಪ್ಪಿಸಿಕೊಳ್ಳಬಾರದು. ಯಾರೆಲ್ಲ ಶುಲ್ಕ ಪಾವತಿಸಿದ್ದಾರೋ ಅವರೆಲ್ಲರೂ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡು ಪರೀಕ್ಷೆ ಬರೆಯಬೇಕು. ದ್ವಿತೀಯ ಪಿಯುಸಿಯ ೩ನೇ ಪರೀಕ್ಷೆಯ ಅಂಕಗಳನ್ನು ಪಡೆದು ಶ್ರೇಣಿ ನಿಗದಿ ಮಾಡುವ ವ್ಯವಸ್ಥೆ ಇದ್ದು. ಯಾರೂ ಇದರಿಂದ ಅವಕಾಶ ವಂಚಿತರಾಗಬಾರದು ಎಂದು ಅವರು ಸಲಹೆ ನೀಡಿದ್ದಾರೆ.
ವಸ್ತ್ರ ಸಂಹಿತೆ:
ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ವಸ್ತ್ರ ಸಂಹಿತೆ ಮಾಡಿದ್ದು, ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು. ಪುರುಷ, ಮಹಿಳಾ ಅಭ್ಯರ್ಥಿಗಳು ಅರ್ಧ ತೋಳಿನ ಬಟ್ಟೆ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ಇಲ್ಲದಿರುವುದನ್ನು ಹಾಕಿಕೊಂಡು ಬಂದರೆ ಉತ್ತಮ. ಪುರುಷರು, ಜೇಬು ಇಲ್ಲದ, ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು. ಕುರ್ತಾ ಪೈಜಾಮ/ಜೀನ್ಸ್ ಪ್ಯಾಂಟ್‌ಗೆ ಅವಕಾಶ ಇರುವುದಿಲ್ಲ. ಶೂ ಕೂಡ ನಿಷೇಧಿಸಲಾಗಿದೆ.
ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋ ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಒಮ್ಮೆ ಕೆಇಎ ವೆಬ್ ಸೈಟ್ ನಲ್ಲಿ ಇರುವ ವಸ್ತ್ರ ಸಂಹಿತೆಯ ವಿವರಗಳನ್ನು ಓದಿಕೊಂಡು, ಆ ಪ್ರಕಾರ ಪರೀಕ್ಷೆಗೆ ಬರಬೇಕು ಎಂದು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *