ನಕಲಿ ಬ್ಯಾಂಕ್ ಹೆಸರಲ್ಲಿ ₹7.5 ಕೋಟಿ ವಂಚನೆ..!!

ಸ್ಟಾರ್ಟಪ್ ಕಂಪನಿಗಳೇ ಟಾರ್ಗೆಟ್ – ನಕಲಿ ಬ್ಯಾಂಕ್ ಹೆಸರಲ್ಲಿ ₹7.5 ಕೋಟಿ ವಂಚನೆ – ಸೈಬರ್ ಪೊಲೀಸರಿಂದ ಆರೋಪಿ ಬಂಧನ..!!

ವೀರಮಾರ್ಗ ನ್ಯೂಸ್ : ಬೆಂಗಳೂರು : ಸ್ಟಾರ್ಟಪ್ ಕಂಪನಿಗಳಿಗೆ ಸಾಲ ಮತ್ತು ಹೂಡಿಕೆ (Investment) ಕೊಡಿಸುವುದಾಗಿ ನಂಬಿಸಿ ನಕಲಿ ಬ್ಯಾಂಕ್ ಹೆಸರಿನಲ್ಲಿ ಸುಮಾರು ₹7.5 ಕೋಟಿ ವಂಚನೆ ನಡೆಸಿದ ಜಾಲವನ್ನು ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ.

ಆರೋಪಿಗಳು ಅಸ್ತಿತ್ವದಲ್ಲೇ ಇಲ್ಲದ ಬ್ಯಾಂಕ್ ಹೆಸರನ್ನು ಬಳಸಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಸ್ಟಾರ್ಟಪ್ ಕಂಪನಿ ಮಾಲೀಕರನ್ನು ಸಂಪರ್ಕಿಸುತ್ತಿದ್ದರು. ಸಾಲ ಅಥವಾ ಹೂಡಿಕೆ ಬೇಕಿದ್ದರೆ ಸಂಪರ್ಕಿಸುವಂತೆ ಹೇಳಿ, ಮೊದಲು 20% ಹಣವನ್ನು ಡೆಪಾಸಿಟ್ ಮಾಡುವಂತೆ ಸೂಚಿಸಿ ಬಳಿಕ ವಂಚಿಸುತ್ತಿದ್ದರು ಎನ್ನಲಾಗಿದೆ.

ಈ ವಂಚನೆಗೆ ‘ಬುದ್ಧ ಕೋ-ಆಪರೇಟಿವ್ ಸೊಸೈಟಿ’ ಹೆಸರನ್ನು ಬಳಸಲಾಗಿದ್ದು, ಚಂದ್ರಕಾಂತ್ ಎಂಬುವವರ ಹೆಸರಲ್ಲಿ ಸೊಸೈಟಿ ನೋಂದಣಿಯಾಗಿದೆ ಎಂದು ನಂಬಿಸಲಾಗುತ್ತಿತ್ತು. ಈ ಕೃತ್ಯದಲ್ಲಿ ಜೀತ್ ಸಿಂಗ್ ಮತ್ತು ಸಾದಿಕ್ ಪಾಷಾ ಸಹ ಭಾಗಿಯಾಗಿರುವ ಆರೋಪ ಕೇಳಿಬಂದಿದೆ.

ಪ್ರಕರಣ ಸಂಬಂಧ ಸಾದಿಕ್ ಪಾಷಾನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಚಂದ್ರಕಾಂತ್ಗಾಗಿ ಶೋಧ ಕಾರ್ಯ ಮುಂದುವರಿದಿದೆ. ತನಿಖೆ ವೇಳೆ ಸಂಬಂಧಪಟ್ಟ ಬ್ಯಾಂಕ್ ಕುರಿತು ಪರಿಶೀಲನೆ ನಡೆಸಿದಾಗ, ಅಂತಹ ಯಾವುದೇ ಬ್ಯಾಂಕ್ ಅಸ್ತಿತ್ವದಲ್ಲೇ ಇಲ್ಲ ಎಂಬುದು ಬೆಳಕಿಗೆ ಬಂದಿದೆ.

ವರದಿ: ಚನ್ನೇಶ್ ಕೆ ಎಂ
ಬೆಂಗಳೂರು