ನಿಶ್ಚಿತಾರ್ಥದ ದಿನವೇ ನಾಪತ್ತೆಯಾದ ಯುವತಿ! ಇಬ್ರಾಹಿಂ ವಿರುದ್ಧ ‘ಲವ್ ಜಿಹಾದ್’ ಆರೋಪ – ಪೋಷಕರು ಕಣ್ಣೀರು..,
ವೀರಮಾರ್ಗ ನ್ಯೂಸ್ : ಹಾವೇರಿ : ಹುಬ್ಬಳ್ಳಿಯ ಘಟನೆಗಳ ಬೆನ್ನಲ್ಲೇ ಇದೀಗ ಹಾವೇರಿಯಲ್ಲೂ ಲವ್ ಜಿಹಾದ್ ಸದ್ದು ಮಾಡುತ್ತಿದೆ. ಇಂದು ನಿಶ್ಚಿತಾರ್ಥ ನಡೆಯಬೇಕಿದ್ದ ಯುವತಿಯೊಬ್ಬಳು ರಾತ್ರೋರಾತ್ರಿ ನಾಪತ್ತೆಯಾಗಿದ್ದು, ಕುಟುಂಬಸ್ಥರು ಅಕ್ಷರಶಃ ಕಂಗಾಲಾಗಿದ್ದಾರೆ. ಮುಸ್ಲಿಂ ಯುವಕನೊಬ್ಬ ತನ್ನ ಮಗಳನ್ನು ಪುಸಲಾಯಿಸಿ ಕರೆದೊಯ್ದಿದ್ದಾನೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಹಸೆಮಣೆ ಏರಬೇಕಿದ್ದವಳು ರಾತ್ರೋರಾತ್ರಿ ಎಸ್ಕೇಪ್!
ಹಾವೇರಿ ಜಿಲ್ಲೆಯ ನರೇಗಲ್ ಗ್ರಾಮದ ಶಂಕ್ರಮ್ಮ ಎಂಬ ಯುವತಿಗೆ ಇಂದು (ಏಪ್ರಿಲ್ 26) ನಿಶ್ಚಿತಾರ್ಥ (Engagement) ನಿಗದಿಯಾಗಿತ್ತು. ಮೇ 11ಕ್ಕೆ ಮದುವೆ ದಿನಾಂಕ ಕೂಡ ಫಿಕ್ಸ್ ಆಗಿತ್ತು. ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಆದರೆ, ಎಂಗೇಜ್‌ಮೆಂಟ್‌ಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಯುವತಿ ಮಧ್ಯರಾತ್ರಿಯೇ ಮನೆಯಿಂದ ಮಾಯವಾಗುವ ಮೂಲಕ ಶಾಕ್ ಕೊಟ್ಟಿದ್ದಾಳೆ.
ಇಬ್ರಾಹಿಂ ವಿರುದ್ಧ ಲವ್ ಜಿಹಾದ್ ಆರೋಪ:
ಅದೇ ಗ್ರಾಮದ ಇಬ್ರಾಹಿಂ ನೆಗಳೂರು ಎಂಬ ಯುವಕನೇ ತಮ್ಮ ಮಗಳನ್ನು ಮತಾಂತರ ಮಾಡುವ ಉದ್ದೇಶದಿಂದ ಅಥವಾ ಲವ್ ಜಿಹಾದ್ ಸಂಚಿನಿಂದ ಕರೆದೊಯ್ದಿದ್ದಾನೆ ಎಂದು ಕುಟುಂಬಸ್ಥರು ದೂರಿದ್ದಾರೆ. “ನಮ್ಮ ಮಗಳನ್ನು ನಂಬಿಸಿ, ಪುಸಲಾಯಿಸಿ ಎಸ್ಕೇಪ್ ಮಾಡಿಸಿದ್ದಾನೆ, ಇದು ಪಕ್ಕಾ ಲವ್ ಜಿಹಾದ್” ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಹಿಂದೂಪರ ಸಂಘಟನೆಗಳ ಆಕ್ರೋಶ:
ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇದು ವ್ಯವಸ್ಥಿತವಾಗಿ ನಡೆಯುತ್ತಿರುವ ಜಾಲ ಎಂದು ಆರೋಪಿಸಿರುವ ಸಂಘಟನೆಗಳು, ಯುವತಿಯನ್ನು ಕೂಡಲೇ ಪತ್ತೆಹಚ್ಚಿ ಕುಟುಂಬಕ್ಕೆ ಒಪ್ಪಿಸಬೇಕೆಂದು ಒತ್ತಾಯಿಸಿವೆ.
ಬೆಂಗಳೂರು, ಹುಬ್ಬಳ್ಳಿಯ ಬಳಿಕ ಇದೀಗ ಹಾವೇರಿಯಲ್ಲೂ ಇಂತಹ ಪ್ರಕರಣ ಮುನ್ನೆಲೆಗೆ ಬಂದಿರುವುದು ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.