ವೀರಮಾರ್ಗ ನ್ಯೂಸ್ : ವಿಷಯ : ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ-2008 ಟ್ರಸ್ಟ್(ರಿ) ಹರಿಹರ ಇದರ ಪದಾಧಿಕಾರಿಗಳ ಉಚ್ಛಾಟನೆ ಮತ್ತು ಟ್ರಸ್ಟಿನ ಮೇಲೆ ಇರುವ ಸಂಘದ ಅಧಿಕಾರದ ಬಗ್ಗೆ.
ದಿನಾಂಕ :08.08.1994ರಲ್ಲಿ ಈಗಿನ ಕೊಪ್ಪಳ ಜಿಲ್ಲಾ ಯಲಬುರ್ಗಾದಲ್ಲಿ ದಿವಂಗತ ಬಿ.ಎಂ.ಹನುಮನಾಳ ಗುರುಗಳು ಮತ್ತು ಅನೇಕ ಸಮಾಜದ ಮುಖಂಡರು ಸೇರಿ ಪ್ರಪ್ರಥಮ ಬಾರಿಗೆ ಪಂಚಮಸಾಲಿ ಸಮಾಜದ ಸಮಾವೇಶವನ್ನು ಮಾಡಿ ಅನಂತರ ದಿನಾಂಕ:02.09.1994 ರಂದು ರಿ.ನಂ.432/94-95ರಡಿಯಲ್ಲಿ ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಪಂಚಮಸಾಲಿ ಸಂಘವನ್ನು ಅವರ ಅಧ್ಯಕ್ಷತೆಯಲ್ಲಿ ನೊಂದಣಿ ಮಾಡಿಸಿ ಸಂಘವನ್ನು ಅಸ್ತಿತ್ವಕ್ಕೆ ತಂದರು.
ಆನಂತರದಲ್ಲಿ ಸಮಾಜ ಸಂಘಟನೆ ಸಲುವಾಗಿ ಕಾಲ ಕಾಲಕ್ಕೆ ಅನೇಕ ಅಧ್ಯಕ್ಷರು ಸದರಿ ಸಂಘವನ್ನು ಮುನ್ನೆಡಿಸಿಕೊಂಡು ಬಂದರು.ಈಗ ನಾನು ಸಂಘದ ರಾಜ್ಯಾಧ್ಯಕ್ಷನಾಗಿ ಸದರಿ ಸಂಘವನ್ನು ಮುನ್ನೆಡಿಸುತ್ತಿದ್ದೇನೆ.
ಸಮಾಜಕ್ಕೆ ತನ್ನದೇ ಆದ ಧಾರ್ಮಿಕ ಆಚರಣೆಗಾಗಿ ಒಂದು ಪೀಠವನ್ನು ಸ್ಥಾಪನೆ ಮಾಡಬೇಕೆಂದು 2005ರಲ್ಲಿ ಸಮಾಜ ಬಾಂಧವರು ಸಂಘದ ಮೇಲೆ ಒತ್ತಡ ತಂದಿದ್ದರಿಂದ ಸಮಾಜವು ಸಂಘದ ಜೊತೆಗೂಡಿ ದಿನಾಂಕ:18.02.2008ರಂದು ಹರಿಹರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠವನ್ನು ಸ್ಥಾಪಿಸಿ ಚರ ಮತ್ತು ಸ್ಥಿರ ಪೀಠಾಧಿಪತಿಗಳನ್ನು ಪೀಠಕ್ಕೆ ನೇಮಕ ಮಾಡಿ ಸಮಾಜಕ್ಕೆ ಜಗದ್ಗುರುಗಳನ್ನು ನೇಮಿಸಲಾಯಿತು.
ಆನಂತರದಲ್ಲಿ 10.04.2008ರಲ್ಲಿ ಸಮಾಜ ಮತ್ತು ಸಂಘವನ್ನು ಹೊರತುಪಡಿಸಿ ಸ್ವತಃ ಬಾವಿ ಬೆಟ್ಟಪ್ಪನವರು ವೈಯಕ್ತಿಕವಾಗಿ ಒಂದು ಟ್ರಸ್ಟನ್ನು ರಚಿಸಿಕೊಂಡು ಅದರಲ್ಲಿ ಅವರಿಗೆ ಬೇಕಾದ ಸಂಬಂಧಿಕರನ್ನು ಬಂಧುಗಳನ್ನು ಸೇರಿಸಿಕೊಂಡು ಟ್ಟಸ್ಟನ್ನು ನೊಂದಾಯಿಸಿಕೊಂಡಿರುತ್ತಾರೆ.ಸದರಿ ಟ್ರಸ್ಟ ರಚನೆಯಾದ ನಂತರ ರಾಜ್ಯದ ಮೂಲೆ ಮೂಲೆಗಳಿಂದ ಸಮಾಜ ಬಾಂಧವರು,ಭಕ್ತರು ಹಾಗೂ ಎಲ್ಲಾ ಧರ್ಮದವರು ಶ್ರೀಪೀಠದ ಅಭಿವೃದ್ಧಿಗಾಗಿ ಟ್ರಸ್ಟಿನ ಹಣಕಾಸಿನ ಹಾಗೂ ದವಸ ದಾನ್ಯ ಮತ್ತು ಬಂಗಾರ ಬೆಳ್ಳಿಯ ಮೂಲಕ ದಾನದ ರೂಪದಲ್ಲಿ ಸಾಕಷ್ಟು ಸಹಾಯ ಮಾಡಿರುತ್ತಾರೆ.ಅದೇ ರೀತಿ ಸರ್ಕಾರವು ಕೂಡ ಅಭಿವೃದ್ಧಿ ಹೊಂದುತ್ತಿರುವ ಮಠಗಳಿಗಾಗಿ ನೀಡುವ ಪ್ರಕಾರ ಟ್ರಸ್ಟಿಗೂ ಸಹ ಸಾಕಷ್ಟು ಬಾರಿ ಆರ್ಥಿಕ ಸಹಾಯ ನೀಡಿದ್ದು ಇರುತ್ತದೆ.ಈ ಎಲ್ಲಾ ಆರ್ಥಿಕ ಸಹಾಯವನ್ನು ಟ್ರಸ್ಟಿನ ಪ್ರಧಾನ ಧರ್ಮದರ್ಶಿಯಾದ ಬಿ.ಸಿ.ಉಮಾಪತಿಯವರು ಮತ್ತು ಇತರೆ ಟ್ರಸ್ಟಿಗಳು ನಿರ್ವಹಿಸಿಕೊಂಡು ಬಂದಿರುತ್ತಾರೆ.
ಸಮಾಜ ಟ್ರಸ್ಟಿಗಳ ಮೇಲೆ ಅತ್ಯಂತ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ ಬಂದಿದ್ದು,ಆದರೆ ಸನ್ಮಾನ್ಯ ಜಿ.ಪಿ.ಪಾಟೀಲ ಅವರು ಸಂಘದ ರಾಜ್ಯ ಅಧ್ಯಕ್ಷರಾದ ಮೇಲೆ ಸನ್ಮಾನ್ಯ ಬಿ.ಲೋಕೇಶರವರು ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಮೇಲೆ ಈಗ್ಗೆ ಮೂರು ವರ್ಷಗಳ ಹಿಂದೆ ರಾಣೆಬೆನ್ನೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಬಿ.ಸಿ.ಉಮಾಪತಿ ಮತ್ತು ಟ್ರಸ್ಟಿ ಚಂದ್ರಶೇಖರ ಪೂಜಾರ ಇವರ ಮೇಲೆ ಹಣಕಾಸಿನ ಮತ್ತು ಸಮಾಜಕ್ಕೆ ಮಾಡಿದ ನಂಬಿಕೆ ದ್ರೋಹದ ಕುರಿತು ಟ್ರಸ್ಟನವರ ಹಾಗೂ ಅಧಿಕಾರಿಗಳ ಪೊರ್ಜರಿ ಸಹಿಯನ್ನು ಮಾಡಿರುತ್ತಾರೆಂದು ಹೇಳಿ ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಲು ಮತ್ತು ಅವರನ್ನು ಟ್ರಸ್ಟಿನಿಂದ ಹೊರಹಾಕಲು ತೀರ್ಮಾನ ಮಾಡಬೇಕೆಂದು ನಿರ್ಧಾರ ತಗೆದುಕೊಂಡಿದ್ದರು.ಆ ಸಂಧರ್ಭದಲ್ಲಿ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿಯವರು ರಾಜಿ ಸಂಧಾನದ ಮೂಲಕ ಹೊನ್ನಾಳಿಯ ಡಾ.ರಾಜಕುಮಾರ ಅವರ ಮುಂದಾಳತ್ವದಲ್ಲಿ ಹೊನ್ನಾಳಿಯಲ್ಲಿಯೇ ಒಂದು ಸಭೆಯನ್ನು ಆಯೋಜನೆ ಮಾಡಿದ್ದು ನಂತರ ಸಮಾಜದವರು ಸಂಘ ಮತ್ತು ಟ್ರಸ್ಟಿಗಳ ನಡುವೆ ಸಂಧಾನ ಮಾಡಿ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದನ್ನು ತಡೆಹಿಡಿದಿದ್ದರು.
ನಂತರ ಹೊನ್ನಾಳಿಯಲ್ಲಿ ಜರುಗಿದ ಸಮಾಜದ ರಾಜ್ಯ ಸಂಘದ ಸಾಮಾನ್ಯ ಸಭೆಯಲ್ಲಿ ಪೀಠ,ಟ್ರಸ್ಟ್ ಮತ್ತು ಸಂಘಕ್ಕೆ ಆಡಳಿತಾಧಿಕಾರಿಗಳನ್ನಾಗಿ ಡಾ.ರಾಜಕುಮಾರ ಹೆಚ್.ಪಿ ಹೊನ್ನಾಳಿ ಇವರನ್ನು ನೇಮಿಸಿ ತೀರ್ಮಾನಿಸಲಾಯಿತು.
ನಂತರ ಡಾ.ರಾಜಕುಮಾರ ಆಡಳಿತಾಧಿಕಾರಿಗಳ ನಂತರ ಟ್ರಸ್ಟಿನ ಲೆಕ್ಕಪತ್ರ ಮತ್ತು ಹಣಕಾಸಿನ ಅಧಿಕಾರವನ್ನು ಅವರಿಗೆ ವಹಿಸದೇ ಬಿ.ಸಿ.ಉಮಾಪತಿಯವರೇ ನೋಡಿಕೊಳ್ಳುತ್ತಿದ್ದರಿಂದ ಈ ಬಗ್ಗೆ ಹಲವಾರು ಬಾರಿ ರಾಜ್ಯ ಕಾರ್ಯಕಾರಿಣಿಯಲ್ಲಿ ಮತ್ತು ಟ್ರಸ್ಟಿನ ಸಭೆಗಳಲ್ಲಿ ಸಾಕಷ್ಟು ಬಾರಿ ಚರ್ಚೆ ಅಲ್ಲದೇ ಗಲಾಟೆಗಳು ಸಹ ಉಂಟಾಗಿದ್ದವು.
ನಾನೂ ಕೂಡ ಅನೇಕ ಬಾರಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಅವ್ಯವಹಾರದ ಬಗ್ಗೆ ತಿಳುವಳಿಕೆ ನೀಡಿದರೂ ಲೆಕ್ಕಪತ್ರ ಸರಿಯಾಗಿ ನೀಡದೆ ಹಾಗೆ ಮುಂದುವರೆಸಿಕೊಂಡು ಬಂದಿದ್ದು,ಅಂತಿಮವಾಗಿ ಕೊಪ್ಪಳದಲ್ಲಿ ನಡೆದ ರಾಜ್ಯ ಸಂಘದ ಕಾರ್ಯಕಾರಿಣಿ ಸಭೆ ಮತ್ತು ಜಿಲ್ಲಾ ಮತ್ತು ತಾಲ್ಲೂಕು ಸಂಘದ ಪದಾಧಿಕಾರಿಗಳ ನಡುವೆ ನಡೆದ ಮಹತ್ವದ ಸಭೆಯಲ್ಲಿ ಅವ್ಯವಹಾರ ಮಾಡಿರುವ ಟ್ರಸ್ಟಿಗಳನ್ನು ಮತ್ತು ಅದಕ್ಕೆ ಸಹಕರಿಸಿದ ಟ್ರಸ್ಟಿಗಳನ್ನು ತಗೆದುಹಾಕಬೇಕೆಂದು ತೀರ್ಮಾನಿಸಿದ್ದು,ಅದರಂತೆ ದಿನಾಂಕ:13.04.2026ರಂದು ಶ್ರೀಪೀಠದಲ್ಲಿ ಸಮಾಜದ ಮುಖಂಡರಾದ ಶ್ರೀ ಎಂ.ಜಿ.ಪರಮೇಶಗೌಡ್ರು,ಹೊಳೆಸಿರಿಗೆರೆ,ಹರಿಹರ ತಾಲ್ಲೂಕು ಇವರ ಅಧ್ಯಕ್ಷತೆಯಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸೀನಿಧ್ಯದಲ್ಲಿ ಧರ್ಮದರ್ಶಿಗಳಾದ ಶ್ರೀ ಹೆಚ್.ಪಿ .ಬಸವರಾಜಪ್ಪ ಮತ್ತು ಆಡಳಿತಾಧಿಕಾರಿಗಳಾದ ಡಾ.ರಾಜಕುಮಾರ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಪಂಚಮಸಾಲಿ ಸಮಾಜದ ಮುಖಂಡರುಗಳು,ಶ್ರೀಪೀಠದ ಸಮಸ್ತ ಭಕ್ತರು,ರಾಜ್ಯ ಸಂಘದ ಪದಾಧಿಕಾರಿಗಳು ಇವರ ಸಮ್ಮುಖದಲ್ಲಿ ಬಿ.ಸಿ.ಉಮಾಪತಿ,ಚಂದ್ರಶೇಖರ ಪೂಜಾರ,ಜ್ಯೋತಿಪ್ರಕಾಶ ಇವರನ್ನು ಮತ್ತು ಇವರೊಂದಿಗೆ ಸಹಕಾರ ನೀಡಿದ ಇತರೆ ಟ್ರಸ್ಟಿಗಳನ್ನು ತಗೆದು ಹಾಕಿ ಸದರಿ ಸ್ಥಾನಕ್ಕೆ ನೂತನ ಟ್ರಸ್ಟಿಗಳನ್ನು ನೇಮಕ ಮಾಡಲು ತೀರ್ಮಾನಿಸಲಾಯಿತು.
ಈ ರೀತಿ ವಿದ್ಯಮಾನಗಳ ನಂತರ ದುರುದ್ದೇಶದಿಂದ ಅದೇ ದಿನದ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಯವರನ್ನು ಉಚ್ಛಾಟನೆ ಮಾಡಿದ್ದೇವೆಂದು ಮೇಲ್ಕಂಡ ಟ್ರಸ್ಟಿಗಳು ಪತ್ರಿಕಾ ಪ್ರಕಟಣೆ ನಡೆಸಿದ್ದು,ಈ ರೀತಿ ಸ್ವಾಮೀಜಿಗಳನ್ನು ಉಚ್ಛಾಟನೆ ಮಾಡಲಿಕ್ಕಾಗಲಿ ಅಥವಾ ಇನ್ನಾವುದೇ ಪ್ರಮುಖ ನಿರ್ಧಾರ ಕೈಗೊಳ್ಳಲಾಗಲಿ ಟ್ರಸ್ಟಿನ ಯಾವುದೇ ಅಧಿಕಾರ ಇರುವುದಿಲ್ಲ.ರಾಜ್ಯ ಸಂಘದ ಬೈಲಾ 6.14(23)ರಡಿಯಲ್ಲಿ ಪ್ರದತ್ತವಾದ ಅಧಿಕಾರದ ಪ್ರಕಾರ ಟ್ರಸ್ಟಿನ ಟ್ರಸ್ಟಿಗಳು ಯಾವುದೇ ಪ್ರಮುಖ ನಿರ್ಧಾರಗಳನ್ನು ತಗೆದುಕೊಳ್ಳುವ ಸಂಧರ್ಭದಲ್ಲಿ ಸಂಘದೊಂದಿಗೆ ಕಡ್ಡಾಯವಾಗಿ ಚರ್ಚಿಸಿ ಸಂಘದ ಅನುಮತಿ ಪಡೆಯಬೇಕಾಗುತ್ತದೆ.ಅಲ್ಲದೇ ಟ್ರಸ್ಟ್ ಡೀಡ್ ನ ನಿಯಮಾವಳಿ ಖಂಡಿಕೆ X(C) ಪ್ರಕಾರವೂ ಸಹ ಪೀಠ,ಅದರ ಶಾಖಾಮಠಗಳು ಮತ್ತು ಆಡಳಿತ ಮಂಡಳಿ(ಟ್ರಸ್ಟ) ಸದಸ್ಯರ ಕಾರ್ಯನಿರ್ವಹಣೆ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದ ಉಂಟಾದಲ್ಲಿ,ಈ ಪೀಠದ ವೀರಶೈವ ಲಿಂಗಾಯತ ಪಂಚಮಸಾಲಿ ಶಿಷ್ಯರು,ಸಂಘ,ಹಾಗೂ ಸಮಗ್ರ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವು,ಪೀಠದ ಮತ್ತು ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಧ್ಯಪ್ರವೇಶಿಸಿ ವಿಚಾರಗಳನ್ನು ಸರಿಪಡಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಪಂಚಮಸಾಲಿ ಸಮಾಜದ ಭಕ್ತರ ನಿರ್ಧಾರವೇ ಅಂತಿಮವಾಗಿರುತ್ತದೆ.ಈ ಕಾರಣದಿಂದ ದಿನಾಂಕ:13.04.2026ರಂದು ನಡೆದ ಸಮಾಜ ಮತ್ತು ರಾಜ್ಯ ಸಂಘ ,ಶಿಷ್ಯರು,ಭಕ್ತರು ಮತ್ತು ಲೆಕ್ಕಕೊಡಿ ಹೋರಾಟ ಸಮಿತಿಯ ಸದಸ್ಯರ ಸಮಕ್ಷಮ ನಡೆದ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ತೀರ್ಮಾನದಂತೆ ಹಾಲಿ ಟ್ರಸ್ಟಿಗಳಾದ ಬಿ.ಸಿ.ಉಮಾಪತಿ,ಚಂದ್ರಶೇಖರ ಪೂಜಾರ ಮತ್ತು ಜ್ಯೋತಿಪ್ರಕಾಶ ಹಾಗೂ ಇವರ ಜೊತೆ ಸಹಕಾರ ನೀಡಿದ ಟ್ರಸ್ಟಿಗಳನ್ನು ತಗೆದು ಹಾಕಿದ್ದು,ಸದರಿಯವರು ದಿನಾಂಕ:27.04.2026ರಂದು ಲೆಕ್ಕ ಕೊಡುತ್ತೇನೆಂದು ಹೇಳಿರುವುದು ಹಾಸ್ಯಾಸ್ಪದ.
ವಂದನೆಗಳೊಂದಿಗೆ,
ಸೋಮನಗೌಡ ಎಂ.ಪಾಟೀಲ
ಅಧ್ಯಕ್ಷರು,ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ(ರಿ)) ಬೆಂಗಳೂರು.