ವಿದ್ಯಾರ್ಥಿಗಳು ಶಿಸ್ತು ಸಂಯಮವನ್ನು ಜೀವನದಲ್ಲಿ ಅಳವಡಿಸಿಕೊಂಡು ಏಕಾಗ್ರತೆಯಿಂದ ಅಭ್ಯಾಸ ಮಾಡಿ ಸಾಧನೆ ಮಾಡಬೇಕು ಎಂದು ಮೈಸೂರು ಮಹಾ ನಗರ ಪಾಲಿಕೆಯ ಮಾಜಿ ಮೇಯರ್ ಸಂದೇಶ್ ಸ್ವಾಮಿ ಹೇಳಿದರು
ಅವರು ಕೆ. ಆರ್. ಪೇಟೆ ಪಟ್ಟಣದ ಹೊರ ವಲಯದ ಪುರ ಗೇಟ್ ನಲ್ಲಿರುವ ಶ್ರೀ ಛಾಯಾದೇವಿ ವಿದ್ಯಾನಿಕೇತನ ಹಾಗೂ ಬಾನುಪ್ರಕಾಶ್ ಪ್ರೌಢ ಶಾಲೆಯ 18ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಓದಿನ ಸಮಯದಲ್ಲಿ ಮನಸ್ಸನ್ನು ಅಲ್ಲಿಂದಲ್ಲಿ ಹರಿಯಬಿಡದೇ ಏಕಾಗ್ರತೆಯಿಂದ ತಲೆ ಬಗ್ಗಿಸಿ ಪುಸ್ತಕವನ್ನು ಓದಿ ಮನನ ಮಾಡಿಕೊಂಡು ಪರೀಕ್ಷೆಯಲ್ಲಿ ಸರಿಯಾದ ಉತ್ತರವನ್ನು ಚೆನ್ನಾಗಿ ಬರೆದರೆ ಮುಂದೆ ಎಲ್ಲರಂತೆ ತಲೆ ಎತ್ತಿ ಸ್ವಾಭಿಮಾನದಿಂದ ಜೀವನ ನಡೆಸಬಹುದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಶ್ರದ್ಧಾ ಭಕ್ತಿಯಿಂದ ವ್ಯಾಸಂಗ ಮಾಡಿ ಬದಲಾವಣೆಯ ದಿಕ್ಕಿನಲ್ಲಿ ಸಾಗಬೇಕು.

ತಂದೆ ತಾಯಿಗಳು ಹಾಗೂ ಗುರುಹಿರಿಯರಿಗೆ ಕೀರ್ತಿ ತರುವ ವಿದ್ಯಾರ್ಥಿಗಳಾಗಿ ರೂಪುಗೊಳ್ಳಬೇಕು ಎಂದು ಸಂದೇಶ್ ಸ್ವಾಮಿ ಕರೆ ನೀಡಿದರು.ಸಮಾಜಸೇವಕ ಮಲ್ಲಿಕಾರ್ಜುನ ಅವರು ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿ ವಿದ್ಯಾರ್ಥಿಗಳು ಭತ್ತವನ್ನು ತುಂಬುವ ಚೀಲ ದಂತಾಗದೆ ಭತ್ತವನ್ನೇ ಬೆಳೆಯುವ ಗದ್ದೆಯಾಗಿ ಬದಲಾಗುವ ಮೂಲಕ ನಿಮ್ಮ ವ್ಯಕ್ತಿತ್ವವನ್ನು ಸಮಗ್ರವಾಗಿ ರೂಪಿಸಿಕೊಂಡು ಗುರಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮಾoತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆನಂದೇಗೌಡ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಕೆಯಿಂದ ದೂರವಿದ್ದು ಪುಸ್ತಕಗಳನ್ನು ನಿಮ್ಮ ಸ್ನೇಹಿತರನ್ನಾಗಿ ಮಾಡಿಕೊಂಡು ಜ್ಞಾನಾರ್ಜನೆ ಮಾಡಿ ಅಭಿವೃದ್ಧಿಯ ದಿಕ್ಕಿನತ್ತ ಸಾಗಬೇಕು ಎಂದು ಕಿವಿಮಾತು ಹೇಳಿದರು.ಮೈಸೂರಿನ ಛಾಯಾದೇವಿ ವಿದ್ಯಾನಿಕೇತನ ಟ್ರಸ್ಟ್ ಅಧ್ಯಕ್ಷ ಡಾ.ಭಾನುಪ್ರಕಾಶ್ ಮಾತನಾಡಿ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ನಮ್ಮ ಶಿಕ್ಷಣ ಸಂಸ್ಥೆಯು 18 ವರ್ಷದಿಂದ ನಿರಂತರವಾಗಿ ಅತ್ಯುತ್ತಮ ಸಾಧನೆ ಮಾಡುತ್ತಾ ಮುನ್ನಡೆಯುತ್ತಿದೆ.
ಮಕ್ಕಳ ಸಾಧನೆಯನ್ನು ಕಂಡು ಸಂಭ್ರಮಿಸುತ್ತಿರುವ ಪೋಷಕರು ನಮ್ಮ ಶಾಲೆಗೆ ಉತ್ತಮ ಬೆಂಬಲ ನೀಡುತ್ತಿರುವುದರಿಂದ ನಮ್ಮ ಶಾಲೆಯು ನಿರಂತರವಾಗಿ ಅತ್ಯುತ್ತಮ ಫಲಿತಾಂಶ ನೀಡಿ ಮುನ್ನಡೆಯುತ್ತಿದೆ ಎಂದರು.ಶಾಲೆಯ ಆಡಳಿತಾಧಿಕಾರಿ ಸವಿತಾ ರಮೇಶ್, ಸಾಹಿತಿ ಮಾರೇನಹಳ್ಳಿ ಲೋಕೇಶ್, ಬಿಇಓ ತಿಮ್ಮೇಗೌಡ, ಹಿರಿಕಳಲೆ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಸೇರಿದಂತೆ ಮಕ್ಕಳ ಪೋಷಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.*ವರದಿ.ಎಂ.ಕೆ.ಹರಿಚರಣ ತಿಲಕ್ , ಕೃಷ್ಣರಾಜಪೇಟೆ, ಮಂಡ್ಯ*.