ಸಮಾಜಕ್ಕಾಗಿ ಶ್ರಮಿಸಿದ ಮಹಾತ್ಮರ ಹೆಸರು ಶಾಶ್ವತ: ಸಿಂಧಗಿಶ್ರೀ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ಮಾನವರು, ತನಗಾಗಿ, ತನ್ನ ಹೆಂಡತಿ ಮಕ್ಕಳಿಗಾಗಿ ಶ್ರಮಿಸಿದರೆ, ಶಿವ ಶರಣ ಮಠಾದೀಶರು ಸಮಾಜದ ಒಳಿತಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಬಂದವರಾಗಿದ್ದಾರೆ ಎಂದು ಸಿಂಧಗಿ ಶ್ರೀ ಶಿವಾನಂದ ಶಿವಾಚಾರ್ಯರು ನುಡಿದರು.
ತಾಲೂಕಿನ ಹೋತನಹಳ್ಳಿ ಗ್ರಾಮದ ಸಿಂಧಗಿ ಮಠದಲ್ಲಿ ನಡೆದ ಶ್ರೀ ಲಿಂ.ಶಾಂತವೀರೇಶ್ವರರ 45 ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಶ್ರೀಗಳು, ಲಿಂ.ಸಿಂಧಗಿ ಶಾಂತವೀರೇಶ್ವರರ ಪುಣ್ಯಸ್ಮರಣೋತ್ಸವವನ್ನು 45 ವರ್ಷಗಳಿಂದ ನಾಡಿನಾಧ್ಯಂತ ಮಾಡಿಕೊಂಡು ಬರಲಾಗುತ್ತಿದೆ. ಅದಕ್ಕೆ ಅವರು ಸಮಾಜಕ್ಕಾಗಿ ನೀಡಿದ ಕೊಡುಗೆಯೇ ಕಾರಣವಾಗಿದೆ. ನಮ್ಮ ತಂದೆ, ತಾತರ ಹೆಸರು ಮಾತ್ರ ನಮಗೆ ಗೊತ್ತಿರಲು ಸಾಧ್ಯ, ನಮ್ಮ ಮುತ್ತಾತ, ಮರಿಮುತ್ತಾತರ ಹೆಸರನ್ನು ಮರೆತು ಬಿಡುತ್ತೇವೆ. ಆದರೆ ಸಮಾಜಕ್ಕಾಗಿ ಶ್ರಮಿಸಿ, ಶಿವನಲ್ಲಿ ಲೀನರಾದ ಮಠಾದೀಶರ ಹೆಸರು ಜನರ ಮನದಲ್ಲಿ ಶಾಸ್ವತವಾಗಿರಲಿವೆ ಎಂದು ಹೇಳಿದರು.

ಶ್ರೀ ಮಠದ ಪೀಠಾಧಿಪತಿ ಶ್ರೀ ಶಂಭುಲಿಂಗ ಶಿವಾಚಾರ್ಯರು, ಸಭೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಮನುಷ್ಯನ ದಿನನಿತ್ಯದ ಜಂಜಾಟದ ಬದುಕಿನಲಿ ನೆಮ್ಮದಿ ನೀಡುವ ತಾಣಗಳು ಯಾವುದಾದರೂ ಇದ್ದರೆ, ಅವು ಮಠ ಮಾನ್ಯಗಳು ಎಂಬುದನ್ನು ಯಾರು ಮರೆಯಬಾರದು. ಲಿಂ.ಶಾಂತವೀರೇಶ್ವರರ ಪುಣ್ಯಸ್ಮರಣೋತ್ಸವಕ್ಕೆ ಗ್ರಾಮಸ್ತರು ಜಾತ್ಯಾತೀತವಾಗಿ ಸಹಾಯ, ಸಹಕಾರ ನೀಡಿಕೊಂಡು ಬರುತ್ತಿರುವುದು ಸಂತಸ ತಂದಿದೆ. ಶ್ರೀಮಠದ ಅಭಿವೃದ್ಧಿಕಾರ್ಯ ಮುಂದುವರೆದಿದ್ದು, ಬರುವ ದಿನಗಳಲ್ಲಿ ಕಲ್ಯಾಣಮಂಟಪ, ನೂತನ ದೇವಸ್ಥಾನ ಲೋಕಾರ್ಪಣೆ ಗೊಳ್ಳಲಿರುವುದು ಶ್ರೀಮಠದ ಭಕ್ತರ ನಿಸ್ವಾರ್ಥ ಶ್ರಮದ ಪ್ರತಿಫಲವಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ದ್ಯಾಮಣ್ಣ ಸವಣೂರ, ಉಪಾಧ್ಯಕ್ಷ ಚಂದ್ರಪ್ಪ ಗೂಳಣ್ಣವರ, ಚಂದ್ರಪ್ಪ ಬೆಳವತ್ತಿ, ರಾಜಣ್ಣ ಕುಲಕರ್ಣಿ, ಹನಮಂತಪ್ಪ ಯು.ವಿ, ಧರ್ಮಣ್ಣ ಬಂಗಿ, ರವಿ ಬಂಗಿ, ಬಸಣ್ಣ ಕೆಮ್ಮಣ್ಣಕೇರಿ, ಮಹನಿಂಗಪ್ಪ ಅಕ್ಕಿ, ಪ್ರವೀಣ ಗೂಳಣ್ಣವರ, ಬಸವರಾಜ ಬೆಳವತ್ತಿ, ಮಹದೇವಪ್ಪ ಸವಣೂರ, ಶಂಕ್ರಪ್ಪ ಬಳ್ಳಾರಿ ಸೇರಿದಂತೆ ಇತರರು ಇದ್ದರು.