ಧರ್ಮ ಪಾಲನೆಯಿಂದ ಬದುಕು ವಿಕಾಸ : ರಂಭಾಪುರಿಶ್ರೀ

ಧರ್ಮ ಪಾಲನೆಯಿಂದ ಬದುಕು ವಿಕಾಸ : ರಂಭಾಪುರಿಶ್ರೀ
ಬ್ಯಾಡಗಿ :
ಶಿಕ್ಷಣದಿಂದ ಮನುಷ್ಯನ ಬುದ್ಧಿ ಶಕ್ತಿ ಬೆಳೆಯುತ್ತದೆ. ಧರ್ಮದಿಂದ ಭಾವನೆಗಳು ಬೆಳೆಯುತ್ತವೆ. ಬದುಕಿ ಬಾಳುವ ಮನುಷ್ಯನಿಗೆ ಬುದ್ಧಿ ಶಕ್ತಿ ಮತ್ತು ಭಾವನೆಗಳೆರಡೂ ಮುಖ್ಯ, ಧರ್ಮ ಪರಿಪಾಲನೆಯಿಂದ ಬದುಕು ವಿಕಾಸಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲೂಕಿನ ಗುಡ್ಡದಮಲ್ಲಾಪುರ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಹಾಗೂ ಮೂಕಪ್ಪ ಶ್ರೀಗಳ ತುಲಾಭಾರದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮಾನವನ ಬುದ್ಧಿ ಶಕ್ತಿ ಬೆಳೆದಷ್ಟು ಭಾವನೆಗಳು ಬೆಳೆಯುತ್ತಿಲ್ಲ. ಹೀಗಾಗಿ ಸಮಾಜದಲ್ಲಿ ಸಂಘರ್ಷಗಳು ಹೆಚ್ಚಾಗುತ್ತಿವೆ. ಧರ್ಮದ ಆದರ್ಶಗಳ ಪರಿಪಾಲನೆ ಮಾಡುವ ಜನರ ಸಂಖ್ಯೆ ಕ್ಷೀಣಿಸುತ್ತಿದೆ. ಸಂಸ್ಕಾರ ಸದ್ವಿಚಾರಗಳ ಕೊರತೆ ಹೆಚ್ಚಾಗಿದೆ. ಎಲ್ಲೆಡೆಯೂ ಅಶಾಂತಿ ಅತೃಪ್ತಿ ಮನೋಭಾವ ಹೆಚ್ಚುತ್ತಿರುವುದು ನೋವಿನ ಸಂಗತಿ. ಮಾನವ ಧರ್ಮ ಉಳಿದು ಬೆಳೆದರೆ ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆಗೊಳ್ಳಲು ಸಾಧ್ಯ. ಸರ್ವ ಧರ್ಮಗಳ ರಕ್ಷಾ ಕವಚ ಮಾನವ ಧರ್ಮ ಎಂಬುದನ್ನು ಮರೆಯಬಾರದು. ವೀರಶೈವ ಧರ್ಮ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಾ ಬಂದಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವ ಬಂಧುತ್ವದ ಸಂದೇಶಗಳು ಜೀವ ಜಗತ್ತಿಗೆ ಸಂಜೀವಿನಿಯಾಗಿವೆ. ಗುಡ್ಡದಮಲ್ಲಾಪುರ ಕ್ಷೇತ್ರ ಜಾಗೃತ ಸ್ಥಳವಿದು. ಲಿಂ. ಹುಚ್ಚೇಶ್ವರ ಶ್ರೀಗಳವರ ತಪಸ್ಸು ಶಕ್ತಿ ಅದ್ಭುತವಾದುದು. ಅವರ ವೃಷಭರೂಪಿ ಮೂಕಪ್ಪ ಶ್ರೀಗಳಿಗೆ ತಮ್ಮ ಅಧಿಕಾರ ಹಸ್ತಾಂತರಿಸಿ ಆಶೀರ್ವದಿಸಿದರು. ಉಭಯ ಮೂಕಪ್ಪ ಶಿವಾಚಾರ್ಯ ಸ್ವಾಮಿಗಳು ಧರ್ಮ ಮಾರ್ಗದಲ್ಲಿ ನಡೆದು ಸಕಲ ಸದ್ಭಕ್ತರಿಗೆ ಒಳಿತನ್ನು ಉಂಟು ಮಾಡುತ್ತಿದ್ದಾರೆ. ೫೧ ವರುಷಗಳ ಹಿಂದೆ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಆಗಮಿಸಿ ಆಶೀರ್ವಾದ ಮಾಡಿದ ಘಳಿಗೆ ಮರೆಯಲಾಗದು. ಇಂದು ಮತ್ತೆ ಶ್ರೀ ರಂಭಾಪುರಿ ಪೀಠದ ಜಗದ್ಗುರುಗಳವರನ್ನು ಬರಮಾಡಿಕೊಂಡು ಬೃಹತ್ ಸಮಾರಂಭ ಹಮ್ಮಿಕೊಂಡಿರುವುದು ತಮಗೆ ಅತ್ಯಂತ ಹರುಷ ತಂದಿದೆ ಎಂದರು.

ರಾಣೆಬೆನ್ನೂರು ಶನೇಶ್ವರ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಗುಡ್ಡದ ಮಲ್ಲಾಪುರ ಕ್ಷೇತ್ರದ ಹಿರಿಮೆ-ಪಂಚಪೀಠಗಳ ಸಂಬಂಧವನ್ನು ಕುರಿತು ಉಪದೇಶಾಮೃತವನ್ನಿತ್ತರು. ರಟ್ಟೀಹಳ್ಳಿ ಶಿವಲಿಂಗ ಶ್ರೀಗಳು, ಮಡ್ಲೂರು ಮುರುಘರಾಜೇಂದ್ರ ಶ್ರೀಗಳು, ದಾಸೋಹಮಠದ ಧರ್ಮಾಧಿಕಾರಿ ಹುಚ್ಚಯ್ಯ ಸ್ವಾಮಿಗಳು ಸುತ್ತ ಮುತ್ತಲ ಪರಿಸರದ ವಿವಿಧ ಸಮುದಾಯಗಳ ಮುಖಂಡರು ಪಾಲ್ಗೊಂಡಿದ್ದರು. ಸವಣೂರಿನ ಡಾ|| ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಶ್ರೀ ಗಂಗಾಧರಸ್ವಾಮಿ ಹಿರೇಮಠ ಇವರಿಂದ ಪ್ರಾರ್ಥನೆ ಜರುಗಿತು.
ಸಮಾರಂಭಕ್ಕೂ ಮುನ್ನ ಶ್ರೀ ಮಲ್ಲಿಕಾರ್ಜುನಸ್ವಾಮಿ-ಭ್ರಮರಾಂಬಿಕಾ ದೇವಸ್ಥಾನಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ದಯಮಾಡಿಸಿ ಪೂಜೆ ಸಲ್ಲಿಸಿದರು.

Leave a Reply

Your email address will not be published. Required fields are marked *