ವೀರಮಾರ್ಗ ನ್ಯೂಜ್ ಆಳಂದ : ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖ ಶಾಂತಿ ಬದುಕಿಗೆ ಧರ್ಮ ಪರಿಪಾಲನೆ ಮುಖ್ಯ. ರಚನಾತ್ಮಕ ಮತ್ತು ಗುಣಾತ್ಮಕ ಸತ್ಕಾರ್ಯಗಳಿಂದ ಸಮಾಜ ಸದೃಢಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಭಾನುವಾರ ತಾಲೂಕಿನ ಚಲಗೇರಾ ಗ್ರಾಮದಲ್ಲಿ ಶ್ರೀ ಜಗದ್ಗುರು ರಂಭಾಪುರೀಶ್ವರ ಸದನದ ಲೋಕಾರ್ಪಣೆ-ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಜೀವನದಲ್ಲಿ ಧರ್ಮ ಅರ್ಥ ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸದಿದ್ದರೆ ಜೀವನ ವ್ಯರ್ಥ. ಸುಖವನ್ನು ಎಲ್ಲರೂ ಬಯಸುವರು. ಆದರೆ ಆ ದಾರಿಯಲ್ಲಿ ನಡೆಯುವುದಿಲ್ಲ. ಪಾಪದ ಫಲ ಯಾರೂ ಬಯಸುವುದಿಲ್ಲ. ಆದರೆ ಪುಣ್ಯ ಕಾರ್ಯ ಮಾಡಲು ಹಿಂಜರಿಯುತ್ತಾನೆ. ಬಿತ್ತಿದ ಬೀಜದ ಬೆಳೆಯನ್ನೇ ಬೆಳೆಯುವಂತೆ ಅವರವರ ಆಚರಣೆಯಂತೆ ಫಲಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಮೌಲ್ಯಾಧಾರಿತ ಜೀವನಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಟ್ಟ ದಶ ಧರ್ಮ ಸೂತ್ರಗಳು ಸಕಲರ ಬಾಳಿಗೆ ಬೆಳಕು ತೋರಿವೆ. ಮಾದನ ಹಿಪ್ಪರಗಿ ಹಿರೇಮಠದ ಶಾಖಾ ಚಲಗೇರಾ ಗ್ರಾಮದಲ್ಲಿ ಭವ್ಯ ಸುಂದರ ಮಠ ನಿರ್ಮಾಣ ಮಾಡಿ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಒಂದು ಹೊಸ ಇತಿಹಾಸವನ್ನೇ ಸೃಷ್ಠಿ ಮಾಡಿದ್ದಾರೆ. ಅವರ ನಿರಂತರ ಶ್ರಮ ಮತ್ತು ಸಾಧನೆ ವರ್ಣಿಸಲು ಅಸದಳ. ಶ್ರೀಗಳವರಿಂದ ಈ ಭಾಗದಲ್ಲಿ ಧರ್ಮ ಸಂಸ್ಕೃತಿ ಪರಂಪರೆಯ ಶಕ್ತಿ ಸಂವರ್ಧನೆಗೊಳ್ಳುತ್ತಿರುವುದು ತಮಗೆ ಅತ್ಯಂತ ಸಂತೋಷ ಉಂಟು ಮಾಡಿದೆ. ಪ್ರಯತ್ನದಿಂದ ಅಸಾಧ್ಯವಾದುದನ್ನು ಸಾಧ್ಯ ಮಾಡಿದ ಶಾಂತವೀರ ಶ್ರೀಗಳಿಗೆ ರೇಶ್ಮೆ ಮಡಿ ಸ್ಮರಣಿಕೆ ಫಲ ಪುಷ್ಪವಿತ್ತು ಶುಭ ಹಾರೈಸಿದರು.
ನೇತೃತ್ವ ವಹಿಸಿದ ಚಲಗೇರಾ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಈ ಭಾಗದ ಭಕ್ತರಿಗೆ ಹಬ್ಬದ ಸಂಭ್ರಮ ಉಂಟಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಎಲ್ಲ ಭಕ್ತರ ಸಹಕಾರದಿಂದ ಭವ್ಯ ಸುಂದರವಾದ ಶ್ರೀ ಜಗದ್ಗುರು ರಂಭಾಪುರೀಶ್ವರ ಸದನ ನಿರ್ಮಾಣಗೊಂಡು ಇಂದು ಉದ್ಘಾಟನೆಯಾಗುತ್ತಿರುವುದು ಸಕಲ ಸದ್ಭಕ್ತರಿಗೆ ಹರುಷ ಉಂಟು ಮಾಡಿದೆ. ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ಎಲ್ಲ ದಾನಿಗಳನ್ನು ಎಷ್ಟು ಸ್ಮರಿಸಿದರೂ ಕಡಿಮೆ ಎಂದರು.

ಸಮಾರಂಭ ಉದ್ಘಾಟಿಸಿದ ಕಲಬುರ್ಗಿ ಕೆ.ಎಮ್.ಎಫ್. ಅಧ್ಯಕ್ಷ ಆರ್.ಕೆ.ಪಾಟೀಲ ಮಾತನಾಡಿ ವೀರಶೈವ ಧರ್ಮ ಸಕಲರ ಹಿತವನ್ನು ಬಯಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಥಾಪಿಸಿದ ವೀರಶೈವ ಧರ್ಮದಲ್ಲಿ ಗಂಡು ಹೆಣ್ಣು, ಉಚ್ಛ ನೀಚ, ಬಡವ ಬಲ್ಲಿದ ಎನ್ನದೇ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿದ್ದಾರೆ. ಶಾಂತವೀರ ಶಿವಾಚಾರ್ಯರ ಭಗೀರಥ ಪ್ರಯತ್ನದಿಂದ ಈ ಭಾಗದ ಭಕ್ತರಿಗೆ ಅಮೂಲ್ಯವಾದ ಕೊಡುಗೆ ಕೊಟ್ಟಿದ್ದಾರೆಂದರು. ಆಲಮೇಲ ಚಂದ್ರಶೇಖರ ಶಿವಾಚಾರ್ಯರು, ಮಾದನ ಹಿಪ್ಪರಗಿ ವಿರಕ್ತಮಠದ ಅಭಿನವ ಶಿವಲಿಂಗ ಸ್ವಾಮಿಗಳು, ನೀರಗುಡಿ ಮಲ್ಲಿನಾಥ ಮಹಾರಾಜರು, ಹತ್ತಿಕಣಬದ ಪ್ರಭುಶಾಂತ ಸ್ವಾಮಿಗಳು, ಹಿರೊಳ್ಳಿ ಶಿವಬಸವ ಶ್ರೀಗಳು, ಸರಸಂಬಾ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಜಿ.ಪಂ. ಸದಸ್ಯ ಗುರುಶಾಂತ ಎಸ್.ಪಾಟೀಲ್, ಕಾಂಗ್ರೆಸ್ ಯುವ ಮುಖಂಡರಾದ ಅರುಣಕುಮಾರ ಎಮ್.ವಾಯ್. ಪಾಟೀಲ, ಶಿವಾನಂದ ಪಾಟೀಲ, ಗುರುಗೌಡ ಕೋರಳ್ಳಿ, ಶರಣು ಭೂಸನೂರ, ಶರಣು ನರೋಣಿ, ಡಿಸಿಸಿ ಬ್ಯಾಂಕ ನಿರ್ದೇಶಕರಾದ ಅಶೋಕ ಸಾವಳೇಶ್ವರ, ಬಸವರಾಜ ಉಪ್ಪಿನ, ಈರಣ್ಣ ಝಳಕಿ, ಉದ್ಯಮಿದಾರರಾದ ಆನಂದ ದೇಶಮುಖ, ಶಿವಶರಣಪ್ಪ ಸೀರಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.
ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು.ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.