ನಗರದ ಶ್ರೀರಾಮ ಮಂದಿರದಲ್ಲಿ ಅದ್ದೂರಿ ರಾಮನವಮಿ ಆಚರಣೆ
ವೀರಮಾರ್ಗ ನ್ಯೂಸ್ ಗದಗ : ಅವಳಿ ನಗರದ ವಿವಿದೆಡೆ ರವಿವಾರ ಅದ್ದೂರಿಯಾಗಿ ಶ್ರೀರಾಮ ನವಮಿ ಆಚರಿಸಲಾಯಿತು. ಅಲ್ಲದೆ, ಬಂದ ಭಕ್ತರಿಗೆ ಕೋಸಂಬ್ರಿ ಹಾಗೂ ಪಾನಕವನ್ನು ವಿತರಿಸಲಾಯಿತು.
ನಗರದ ಕುಷ್ಟಗಿ ಚಾಳದಲ್ಲಿರುವ ಐತಿಹಾಸಿಕ ಶ್ರೀರಾಮ ಮಂದಿರದಲ್ಲಿ ಪ್ರಾಥಃಕಾಲದಲ್ಲಿ ಶ್ರೀ ಲಕ್ಷ್ಮಣ ಸೀತಾಮಾತಾ ಸಮೇತ ವೇದೋಕ್ತ ಮಂತ್ರಪುಷ್ಪಾಂಜಲಿಗಳಿಂದ ಶ್ರೀರಾಮನಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು. ನಂತರ ದೇವಸ್ಥಾನದಲ್ಲಿರುವ ಶ್ರೀ ಆಂಜನೇಯ, ಶ್ರೀಗಣಪತಿ, ನವಗ್ರಹ ದೇವತೆಗಳು ಹಾಗೂ ಶ್ರೀ ಈಶ್ವರ ದೇವರಿಗೆ ಪೂಜೆ ಸಲ್ಲಿಸಲಾಯಿತು.ಬಳಿಕ ರಾಮತಾರಕ ಹೋಮವನ್ನು ಮಾಡಿ, ಶ್ರೀರಾಮನನ್ನು ತೊಟ್ಟಿಲಿಗೆ ಹಾಕಲಾಯಿತು.

ಬೆಳಿಗ್ಗೆಯಿಂದಲೇ ಶೃದ್ಧಾಭಕ್ತಿಯಿಂದ ರಾಮಮಂದಿರಕ್ಕೆ ಆಗಮಿಸಿದ ಮಹಿಳೆಯರು, ಮಕ್ಕಳು ಸೇರಿದಂತೆ ಭಕ್ತರೆಲ್ಲರು ಆಗಮಿಸಿ, ಶ್ರೀರಾಮನಿಗೆ ಭಕ್ತಿ ಸಮರ್ಪಿಸಿದರು. ಹೂ, ಹಣ್ಣು, ಕಾಯಿ ಕರ್ಪೂರ ಮಾಡಿಸಿ ರಾಮಾರಾಧನೆಯಲ್ಲಿ ತಲ್ಲೀನರಾದರು.
ಶ್ರೀರಾಮಚಂದ್ರನಿಗೆ ಜೈ ಜೈ ಎಂದು ಉದ್ಘಾರ ಹಾಕುತ್ತಾ ಜೋಗುಳ ಹಾಡಿ ಲಾಲಿ ಸುವ್ವಾಲಿ ಎಂದು ಶ್ರೀರಾಮನನ್ನು ತೊಟ್ಟಿಲಿಗೆ ಹಾಕಿ ತೂಗಿದ ಮುತ್ತೈದೆಯರು ಜೋ ಜೋ ರಘುರಾಮ ಹೇ ರಘುರಾಮ ಎಂದು ರಾಮನ ಸ್ಮರಣೆ ಮಾಡಿದರು.
ಈ ಸಂದರ್ಭದಲ್ಲಿ ಮಂದಿರದ ಪ್ರಧಾನ ಅರ್ಚಕರಾದ ದಿವಾಕರ ಭಟ್ ದೀಕ್ಷಿತ, ಮಾರ್ತಾಂಡ ದೀಕ್ಷಿತ, ಅಕ್ಷಯ ದೀಕ್ಷಿತ, ವಿನಾಯಕ ದೀಕ್ಷಿತ, ಹಾಗೂ ಮಂದಿರದ ಪರಮಭಕ್ತರಾದ ಶ್ರೀ ಕೋದಂಡರಾಮ ಕುಷ್ಟಗಿ, ನವೀನ ಕುಷ್ಟಗಿ, ವೈಶಾಖ ಕುಷ್ಟಗಿ, ಕಾರ್ತಿಕ ಕುಷ್ಟಗಿ, ರಘುನಾಥ ಹರ್ಲಾಪೂರ, ಆನಂದ ಗೋಡಬೊಲೆ, ವಿಭಾ ದೇಸಾಯಿ ಸೇರಿದಂತೆ ಓಣಿಯ ಗುರು-ಹಿರಿಯರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನವೀನ ಕುಷ್ಟಗಿ ಅವರು ಮಾತನಾಡಿ, ನಮ್ಮ ಪೂರ್ವಜರಾದ ರಾಮಚಂದ್ರಪ್ಪ ಅಡಿವೆಪ್ಪ ಕುಷ್ಟಗಿ ಹಾಗೂ ಶ್ರೀಮತಿ ತಾರಾಬಾಯಿ ಕಷ್ಟಗಿ ದಂಪತಿಗಳು ೧೯೩೦ರಲ್ಲಿ ಸ್ಥಾಪಿಸಿದ ದೇವಸ್ಥಾನ ಇದಾಗಿದ್ದು, ಇಂದಿಗೂ ಈ ದೇವಸ್ಥಾನ ಜಾಗೃತವಾಗಿದೆ. ಜೊತೆಗೆ ಭಕ್ತರ ಸಹಕಾರ ಬಹುಮುಖ್ಯವಾಗಿದ್ದು ಇಂದಿಗೂ ಇಲ್ಲಿ ಧಾರ್ಮಿಕ ಆಚಣೆಗಳು ನಿರಂತರವಾಗಿವೆ. ಇದಕ್ಕೆ ಕುಷ್ಟಗಿ ಚಾಳದ ಹಿರಿಯರು ಹಾಗೂ ಗದಗ-ಬೆಟಗೇರಿ ಸದ್ಭಕ್ತರೇ ಕಾರಣರಾಗಿದ್ದಾರೆ ಎಂದು ಹೇಳಿದರು.