ಲೋಕಾಯುಕ್ತ ಬಲೆಗೆ ಬಿದ್ದ ಪ್ರಭಾರ ಕಂದಾಯ ನಿರೀಕ್ಷಕ.

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪ್ರಭಾರ ಕಂದಾಯ ನಿರೀಕ್ಷಕ

ಒಂದು ಲಕ್ಷಕ್ಕೆ ಬೇಡಿಕೆ; 30 ಸಾವಿರ ರೂ. ಸ್ವೀಕರಿಸುವ ವೇಳೆ ಅಧಿಕಾರಿ ಲಾಕ್

ವೀರಮಾರ್ಗ ನ್ಯೂಸ್ : ತುಮಕೂರು : ಜಮೀನಿನ ಪೌತಿಖಾತೆ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟು, 30 ಸಾವಿರ ರೂ. ಹಣ ಸ್ವೀಕರಿಸುವ ವೇಳೆ ಪ್ರಭಾರ ಕಂದಾಯ ನಿರೀಕ್ಷಕರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ.

ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯನ್ನು ನಾಗೇಶ್ ಎಂದು ಗುರುತಿಸಲಾಗಿದೆ. ಮಧುಗಿರಿ ಕಸಬಾ ಪ್ರಭಾರ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಶ್, ಜಮೀನೊಂದರ ಪೌತಿಖಾತೆ ಮಾಡಿಕೊಡಲು ರೇಣುಕೇಶ್ ಎಂಬುವವರ ಬಳಿ ಒಂದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈಗಾಗಲೇ ಮೊದಲ ಕಂತಿನ ಹಣವನ್ನು ಪಡೆದಿದ್ದ ನಾಗೇಶ್, ಮತ್ತೆ ಎರಡನೇ ಕಂತಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರೇಣುಕೇಶ್ ಅವರು ತುಮಕೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ನಾಗೇಶ್ ಅವರು 30 ಸಾವಿರ ರೂ. ಲಂಚದ ಹಣ ಸ್ವೀಕರಿಸುವ ವೇಳೆ ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ. ಲಂಚದ ಹಣವನ್ನು ವಶಪಡಿಸಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವರದಿ: ಚನ್ನೇಶ್ ಕೆ ಎಂ
ಬೆಂಗಳೂರು