ಕನ್ನಡ ಸಾಹಿತ್ಯ ಪರಿಷತ್ತು ‘ವಾಣಿಜ್ಯ ಪರಿಷತ್ತು’ ಆಗಿದೆ: ಜೆ.ಎಂ. ರಾಜಶೇಖರ ಆರೋಪ
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಕನ್ನಡ ಸಾಹಿತ್ಯ ಪರಿಷತ್ತು ತನ್ನ ಮೂಲ ಉದ್ದೇಶ ಮತ್ತು ಮೌಲ್ಯಗಳನ್ನು ಕಳೆದುಕೊಂಡಿದ್ದು, ಸಾಹಿತ್ಯ ಸೇವೆಯ ಬದಲಿಗೆ ಭ್ರಷ್ಟಾಚಾರ, ಹಣದ ಪ್ರಭಾವ ಮತ್ತು ರಾಜಕೀಯದ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಸಾಮಾಜಿಕ ಕಾರ್ಯಕರ್ತ ಜೆ.ಎಂ. ರಾಜಶೇಖರ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಪರಿಷತ್ತಿನಲ್ಲಿ ನೈಜ ಸಾಹಿತಿಗಳಿಗೆ ಸ್ಥಾನವಿಲ್ಲದಂತಾಗಿದೆ. ಚುನಾವಣೆಗಳಲ್ಲಿ ಹಣ, ಉಡುಗೊರೆ, ಊಟೋಪಚಾರ ಸೇರಿದಂತೆ ವಿವಿಧ ರೀತಿಯ ಆಮಿಷಗಳ ಮೂಲಕ ಮತ ಯಾಚನೆ ನಡೆಯುತ್ತಿದೆ ಎಂದು ದೂರಿದ್ದಾರೆ.
ಪರಿಷತ್ತಿನ ಹದಗೆಟ್ಟ ವಾತಾವರಣದಿಂದ ಬೇಸತ್ತು ತಾವು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳಿರುವ ಅವರು, ಸಾಹಿತ್ಯಕ್ಕಿಂತ ರಾಜಕೀಯ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು, ಸರ್ಕಾರದ ಅನುದಾನದ ಬಳಕೆ ಹಾಗೂ ಚುನಾವಣಾ ಪ್ರಕ್ರಿಯೆಯ ಬಗ್ಗೆ ಕೂಡ ಪ್ರಶ್ನೆ ಎತ್ತಿರುವ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರನ್ನು “ವಾಣಿಜ್ಯ ಪರಿಷತ್ತು” ಎಂದು ಬದಲಾಯಿಸಿಕೊಳ್ಳುವುದು ಸೂಕ್ತ ಎಂದು ವ್ಯಂಗ್ಯವಾಡಿದ್ದಾರೆ.
ಕನ್ನಡದ ಗೌರವ ಮತ್ತು ಸಾಹಿತ್ಯದ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಪರಿಷತ್ತಿನಲ್ಲಿ ಪಾರದರ್ಶಕತೆ ಹಾಗೂ ಮೂಲ ಉದ್ದೇಶಗಳ ಪುನಃಸ್ಥಾಪನೆ ಅಗತ್ಯ ಎಂದು ಅವರು ಒತ್ತಾಯಿಸಿದ್ದಾರೆ.
ಮೂರು ಕೊಲೆ, 37 ವರ್ಷ ಶಿಕ್ಷೆ – ದೇಶದಲ್ಲೇ ದೀರ್ಘಾವಧಿ ಜೈಲುವಾಸ ಅನುಭವಿಸಿ ಹೊರಬಂದ ಕಲಬುರಗಿಯ ಸಾಯ್ಬಣ್ಣ..!
ಬೆಂಗಳೂರು: ದೇಶದಲ್ಲೇ ಅತ್ಯಂತ ದೀರ್ಘಾವಧಿಯ ಜೈಲು ಶಿಕ್ಷೆ ಅನುಭವಿಸಿದ ಇತಿಹಾಸ ಹೊಂದಿರುವ ಕಲಬುರಗಿ ಜಿಲ್ಲೆಯ ಜೇವರ್ಗಿಯ ಸಾಯಿಬಣ್ಣ ಲಿಂಗಪ್ಪ ನಟೇಕರ್ (72) ಇತ್ತೀಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಸನ್ನಡತೆಯ ಆಧಾರದ ಮೇಲೆ ಮುಕ್ತಿ ಹೊಂದಿದ 24 ಜೀವಾವಧಿ ಕೈದಿಗಳಲ್ಲಿ ಈತ ಕೂಡ ಒಬ್ಬನಾಗಿದ್ದು, ಬರೋಬ್ಬರಿ 37 ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಹೊರಬಂದಿದ್ದಾನೆ.
ಸಾಯಿಬಣ್ಣನ ಇತಿಹಾಸ 1988ರಲ್ಲಿ ಆರಂಭವಾಗಿತ್ತು.ತನ್ನ ಮೊದಲ ಪತ್ನಿ ಮಲ್ಕವ್ವ ಬೇರೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಸಂಶಯದ ಮೇಲೆ ಆಕೆಯನ್ನು ಕೊಲೆ ಮಾಡಿದ್ದ ಈತನಿಗೆ 1993ರಲ್ಲಿ ಶಿಕ್ಷೆಯಾಗಿತ್ತು. ಆದರೆ, ಜೈಲಿನಲ್ಲಿದ್ದಾಗ ಪೆರೋಲ್ (ತಾತ್ಕಾಲಿಕ ಬಿಡುಗಡೆ) ಮೇಲೆ ಹೊರಬಂದ ಈತ ನಾಗಮ್ಮ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದನು. 1994ರಲ್ಲಿ ಎರಡನೇ ಪತ್ನಿಯೂ ಮತ್ತೊಬ್ಬನ ಜೊತೆ ಇರುವುದನ್ನು ಕಂಡು ಆಕ್ರೋಶಗೊಂಡು ಆಕೆಯನ್ನೂ ಹಾಗೂ ತಡೆಯಲು ಬಂದ ತನ್ನದೇ ಮಗು ವಿಜಯಲಕ್ಷ್ಮಿಯನ್ನೂ ಕೊಂದಿದ್ದನು.
ಮಗಳು ಮತ್ತು ಹೆಂಡತಿಯ ಕ್ರೂರ ಕೊಲೆ ಪ್ರಕರಣಕ್ಕೆ ನ್ಯಾಯಾಲಯ ಈತನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈತ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ರಾಷ್ಟ್ರಪತಿಗಳ ಬಳಿ 7 ವರ್ಷಗಳಿಗೂ ಹೆಚ್ಚು ಕಾಲ ಬಾಕಿ ಇತ್ತು. ಸುದೀರ್ಘ ವಿಳಂಬ ಮತ್ತು ಒಂದು ದಶಕಕ್ಕೂ ಹೆಚ್ಚು ಕಾಲ ಕಾನೂನುಬಾಹಿರವಾಗಿ ಏಕಾಂತ ಕಾರಾಗೃಹ ವಾಸದಲ್ಲಿದ್ದ ಅಂಶವನ್ನು ಪರಿಗಣಿಸಿ, ಕರ್ನಾಟಕ ಹೈಕೋರ್ಟ್ ಈತನ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಡಿಸಿತ್ತು.
ಪ್ರಸ್ತುತ 37 ವರ್ಷಗಳ ಸುದೀರ್ಘ ಸೆರೆವಾಸ ಮುಗಿಸಿ ವೃದ್ಧಾಪ್ಯದಲ್ಲಿ ಹೊರಬಂದಿರುವ ಸಾಯಿಬಣ್ಣನಿಗೆ ತಾನು ಮಾಡಿದ ಮೂರು ಕೊಲೆಗಳ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲದಿರುವುದು ಸಾರ್ವಜನಿಕರಲ್ಲಿ ತೀವ್ರ ಆಶ್ಚರ್ಯ ಮೂಡಿಸಿದೆ. ಜೈಲಿನ ನಿಯಮಗಳ ಪ್ರಕಾರ ಸನ್ನಡತೆ ತೋರಿದರೂ, ಮಾನಸಿಕವಾಗಿ ಈತನ ಕ್ರೂರ ಮತ್ತು ಪಶ್ಚಾತ್ತಾಪವಿಲ್ಲದ ವಿಚಿತ್ರ ಮನಸ್ಥಿತಿ ಹಾಗೇ ಉಳಿದಿರುವುದು ಈ ಇಡೀ ಕಥೆಯ ಕರಾಳ ಮುಖವಾಗಿದೆ.