ಡಿಕೆಶಿ ಆಪ್ತ ಶಾಸಕನ ವಿರುದ್ಧ ರಾಜೇಂದ್ರ ರಾಜಣ್ಣ ಸ್ಫೋಟಕ ಹೇಳಿಕೆ..!

ವೀರಮಾರ್ಗ ನ್ಯೂಸ್ : ತುಮಕೂರು : ಸಹಕಾರ ಸಚಿವ ಕೆ.ಎನ್‌. ರಾಜಣ್ಣ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಮೊದಲಿನಿಂದಲೂ ಒಳಗೊಳಗೆ ಹಲ್ಲು ಮಸೆಯುತ್ತಿದ್ದು, ಆಗಾಗ್ಗೆ ಬಹಿರಂಗ ಹೇಳಿಕೆಗಳ ಮೂಲಕ ಅಸಮಾಧಾನ ಸ್ಫೋಟಗೊಳ್ಳುತ್ತಲೇ ಇದೆ. ಈಗ ರಾಜಣ್ಣ ಅವರ ಪುತ್ರ ರಾಜೇಂದ್ರ ರಾಜಣ್ಣ ಅವರು ಡಿ.ಕೆ.ಶಿವಕುಮಾರ್‌ರವರ ಆಪ್ತ ಶಾಸಕನ ವಿರುದ್ಧ
ಸ್ಫೋಟಕ ಹೇಳಿಕೆ ನೀಡುವ ಮೂಲಕ ಮತ್ತೊಂದು ಅಸಮಾಧಾನಕ್ಕೆ ಮುನ್ನುಡಿ ಬರೆದಿದ್ದಾರೆ. ಕೆ.ಎನ್‌.ರಾಜಣ್ಣ ಅವರ ಪುತ್ರ ವಿಧಾನಪರಿಷತ್‌ ಸದಸ್ಯ ರಾಜೇಂದ್ರ ರಾಜಣ್ಣ ಬಹಿರಂಗ ಹೇಳಿಕೆ ನೀಡುವ ಮೂಲಕ ಕುಣಿಗಲ್‌ ಕ್ಷೇತ್ರದ ಶಾಸಕ ಡಾ.ರಂಗನಾಥ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕಳೆದ 2 ತಿಂಗಳ ಹಿಂದೆ ಶಾಸಕ ಕುಣಿಗಲ್‌ ರಂಗನಾಥ್‌ರವರು ಕರೆ ಮಾಡಿ ಅಪ್ಪ-ಮಗ ಲಿಂಕ್‌ ಕೆನಲ್‌ಗೆ ಅಡಚಣೆ ಮಾಡುತ್ತಿದ್ದೀರಾ ಎಂದು ಧಮ್ಕಿ ಹಾಕಿದ್ದಾರೆ. ನಾವು ಯಾವುದನ್ನೂ ನಿಲ್ಲಿಸಿಲ್ಲ. ಟೆಂಡರ್‌ ಆಗಿದೆ. ಕೆಲಸ ಶುರುವಾಗಿದೆ. ಕುಣಿಗಲ್‌ ತಾಲೂಕಿಗೆ ನೀರು ಬರುವುದಕ್ಕೆ ಅಪ್ಪ-ಮಗ ಅಡಚಣೆ ಮಾಡುತ್ತಿದ್ದೀರಾ ಎಂದು ಏರುಧ್ವನಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಹೇಮಾವತಿ ನಾಲೆಯಿಂದ ಗುಬ್ಬಿ, ಕುಣಿಗಲ್‌, ತುರುವೇಕೆರೆ ಮೂಲಕ ತುಮಕೂರು ಜಿಲ್ಲೆಯ ಇತರ ಜಿಲ್ಲೆಗಳಿಗೆ ನೀರು ಬರಬೇಕು. ಆರಂಭದಲ್ಲೇ ಇವರು ನೀರು ಹರಿಸಿಕೊಂಡರೆ ಕೊನೆಯ ಭಾಗದ ಕೊರಟಗೆರೆಗೆ ನೀರು ತಲುಪುವುದು ಹೇಗೆ? ಎಂದು ಪ್ರಶ್ನಿಸಿದರು.
ಇತ್ತೀಚೆಗೆ ನಡೆದ ಸಭೆಯಲ್ಲಿ ಕೊರಟಗೆರೆ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂದು ಸಚಿವ ಕೆ.ಎನ್‌.ರಾಜಣ್ಣ ಗಮನ ಸೆಳೆದಿದ್ದಾರೆ. ಇದಕ್ಕೆ ನಮ ವಿರುದ್ಧ ಧಮ್ಕಿ ಹಾಕುವ ಕೆಲಸಗಳಾಗುತ್ತಿವೆ. ಪ್ರಭಾವಿ ಸಚಿವರಿದ್ದಾರೆ ಎಂಬ ಕಾರಣಕ್ಕೆ ಕುಣಿಗಲ್‌ನ ಶಾಸಕರು ನೀರನ್ನು ಬಳಸಿಕೊಂಡರೆ ಕೊರಟಗೆರೆ, ಮಧುಗಿರಿ ತಾಲ್ಲೂಕುಗಳ ಜನ ಏನಾಗಬೇಕು?, ನಿಮ ಕ್ಷೇತ್ರಕ್ಕೆ ನೀರು ಹರಿಸಿಕೊಳ್ಳಲು ನಮ ಅಭ್ಯಂತರವಿಲ್ಲ. ಆದರೆ ನಮ ತಾಲೂಕಿಗೆ ಅನ್ಯಾಯ ಮಾಡುತ್ತಿರುವುದೇಕೆ? ಎಂದು ಕೇಳಿದರು.
ತುಮಕೂರು ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರೆ ಕುಣಿಗಲ್‌ ತಾಲ್ಲೂಕಿನ ವಿಚಾರ ಮಾತ್ರ ಪ್ರಸ್ತಾಪವಾಗುತ್ತಿದೆ. ಉಳಿದಂತೆ ಯಾವ ತಾಲ್ಲೂಕುಗಳಿಲ್ಲವೇ?, ತುಮಕೂರು, ತುಮಕೂರು ಗ್ರಾಮಾಂತರ, ಮಧುಗಿರಿ, ಕೊರಟಗೆರೆ, ಗುಬ್ಬಿ ಇತರ ತಾಲ್ಲೂಕುಗಳು ಏನಾಗಬೇಕು? ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *