ಕರ್ತವ್ಯಕ್ಕೆ ತೆರಳಿದ್ದ ಪೊಲೀಸ್ ಕಾನ್ಸ್‌ಟೇಬಲ್‌ಗೆ ಸಾವು…

ಕರ್ತವ್ಯಕ್ಕೆ ತೆರಳಿದ್ದ ಪೊಲೀಸ್ ಕಾನ್ಸ್‌ಟೇಬಲ್‌ಗೆ ವಿಧಿಯ ಹೊಡೆತ..!! 15 ದಿನಗಳ ಸಾವು-ಬದುಕಿನ ಹೋರಾಟ ಅಂತ್ಯ, ಇಬ್ಬರು ಮಕ್ಕಳ ತಂದೆ ಇನ್ನಿಲ್ಲ..!

ವೀರಮಾರ್ಗ ನ್ಯೂಸ್ : ಶಿವಮೊಗ್ಗ : ಕರ್ತವ್ಯ ನಿರ್ವಹಿಸಲು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು, ಸುಮಾರು 15 ದಿನಗಳ ಸಾವು-ಬದುಕಿನ ಹೋರಾಟದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರನ್ನು ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಕಾನ್ಸ್‌ಟೇಬಲ್ ಗಿರೀಶ್ ಕುಮಾರ್ ಎಂದು ಗುರುತಿಸಲಾಗಿದೆ. ಅವರ ನಿಧನದಿಂದ ಪೊಲೀಸ್ ಇಲಾಖೆಯಲ್ಲಿ ಹಾಗೂ ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ.

ನಾಯಿಯೊಂದು ಅಡ್ಡ ಬಂದಿದ್ದರಿಂದ ಅಪಘಾತ..!!

ಗಿರೀಶ್ ಕುಮಾರ್ ಅವರು ಅಪರಾಧ ಪ್ರಕರಣವೊಂದರ ಆರೋಪಿಗಳ ಪತ್ತೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲು ಶಿಕಾರಿಪುರದಿಂದ ಆನಂದಪುರ ಹಾಗೂ ಸಾಗರ ಭಾಗದ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಾಪುರ ಕ್ರಾಸ್ ಸಮೀಪ ರಸ್ತೆಗೆ ನಾಯಿಯೊಂದು ಅಡ್ಡ ಬಂದಿದ್ದರಿಂದ ಅಪಘಾತ ಸಂಭವಿಸಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗಳಾಗಿದ್ದ ಅವರನ್ನು ತಕ್ಷಣ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ತಲೆಗೆ ಎರಡು ಶಸ್ತ್ರಚಿಕಿತ್ಸೆಗಳನ್ನು ನಡೆಸಿದರೂ ಅವರು ಕೋಮಾ ಸ್ಥಿತಿಯಲ್ಲೇ ಇದ್ದರು ಎನ್ನಲಾಗಿದೆ.

ವೈದ್ಯರು ಚಿಕಿತ್ಸೆ ಮುಂದುವರಿಸಿದರೂ ಸುಮಾರು 15 ದಿನಗಳ ಸುದೀರ್ಘ ಹೋರಾಟದ ಬಳಿಕ ಬುಧವಾರ ಅವರು ಕೊನೆಯುಸಿರೆಳೆದಿದ್ದಾರೆ.

ನಾಲ್ಕು ವರ್ಷಗಳಿಂದ ಶಿಕಾರಿಪುರದಲ್ಲಿ ಸೇವೆ

ಮೂಲತಃ ಶಿಕಾರಿಪುರ ತಾಲೂಕಿನ ಸಾಲೂರು ಗ್ರಾಮದವರಾದ ಗಿರೀಶ್ ಕುಮಾರ್ ಅವರು ಕಳೆದ ನಾಲ್ಕು ವರ್ಷಗಳಿಂದ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯದ ನಿಮಿತ್ತ ತೆರಳಿದ್ದಾಗಲೇ ಸಂಭವಿಸಿದ ಅಪಘಾತ ಅವರ ಬದುಕನ್ನು ದುರಂತದಲ್ಲಿ ಅಂತ್ಯಗೊಳಿಸಿದೆ.

ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಪತ್ನಿ ಅಂಚೆ ಇಲಾಖೆಯಲ್ಲಿ ಸರ್ಕಾರಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕುಟುಂಬಕ್ಕೆ ಆಧಾರವಾಗಿದ್ದ ತಂದೆಯ ಅಗಲಿಕೆ..!!

ಕುಟುಂಬದ ಜವಾಬ್ದಾರಿ ಹೊತ್ತು, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಗಿರೀಶ್ ಕುಮಾರ್ ಅವರ ಅಕಾಲಿಕ ನಿಧನ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ತುಂಬಲಾರದ ನಷ್ಟವಾಗಿದೆ. ಕರ್ತವ್ಯಕ್ಕೆ ತೆರಳಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಮರಳಿ ಬಾರದ ಲೋಕಕ್ಕೆ ತೆರಳಿರುವುದು ಸಹೋದ್ಯೋಗಿಗಳಲ್ಲೂ ದುಃಖ ಮೂಡಿಸಿದೆ.