ಗ್ರಾಮದಲ್ಲಿ ದಸರಾ ದರ್ಬಾರ್.

ಹುಲಿಕಟ್ಟಿ ಗ್ರಾಮದಲ್ಲಿ ಸಂಭ್ರಮದಿಂದ ನಾಡಹಬ್ಬ ದಸರಾ ಆಚರಣೆ, ಡೊಳ್ಳು, ಸಮಾಳ ಹಾಗೂ ವಿವಿಧ ಕಲಾ ಮೇಳಗಳೊಂದಿಗೆ ದೇವರುಗಳ ಭವ್ಯ ಮೆರವಣಿಗೆ.

ರಾಣೇಬೆನ್ನೂರು ತಾಲೂಕಿನ ಹುಲಿಕಟ್ಟಿ ಗ್ರಾಮದ ಆರಾಧ್ಯದೇವರುಗಳಾದ ಪವಾಡ ಮಹಿಮೆಗೆ ಹೆಸರಾದ ಶ್ರೀ ಬೀರಲಿಂಗೇಶ್ವರ ದೇವರು, ಶ್ರೀ ಕಲ್ಮೇಶ್ವರ ದೇವರು, ಶ್ರೀ ಅಂಜನೇಯ ದೇವರು, ಶ್ರೀ ಏಕನಾಥೇಶ್ವರಿ ದೇವಿ, ಶ್ರೀ ದುರ್ಗಾದೇವಿ ಹಾಗೂ ಶ್ರೀ ಚೌಡೇಶ್ವರಿ ದೇವಿಯವರ ಸಾನ್ನಿಧ್ಯದಲ್ಲಿ ನಾಡಹಬ್ಬ ದಸರಾ ಮಹೋತ್ಸವವನ್ನು ಪ್ರತಿವರ್ಷದಂತೆ ಈ ವರ್ಷವೂ ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ದಸರಾ ಹಬ್ಬದ ಪ್ರಯುಕ್ತ ಗ್ರಾಮದ ಪ್ರಮುಖ ರಾಜಬೀದಿಯಲ್ಲಿ ದೇವರುಗಳ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಡೊಳ್ಳು ಮೇಳದ ಕುಣಿತ, ಸಮಾಳ ಮೇಳದ ಕುಣಿತ ಹಾಗೂ ವಿವಿಧ ಸಾಂಪ್ರದಾಯಿಕ ವಾದ್ಯಮೇಳಗಳ ಸದ್ದಿನೊಂದಿಗೆ ಮೆರವಣಿಗೆ ಸಾಗಿತು. ದೇವರ ಸ್ವರೂಪಿಣಿಯರಾದ ಜೋಗಮ್ಮನವರು ಸೊಬಾನೆ ಪದಗಳನ್ನು ಹಾಡುವ ಮೂಲಕ ಧಾರ್ಮಿಕ ವಾತಾವರಣಕ್ಕೆ ಮತ್ತೊಷ್ಟು ಮೆರುಗು ನೀಡಿದರು.

ಗ್ರಾಮದ ಸಮಸ್ತ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಒಗ್ಗೂಡಿ, ವಿವಿಧ ಹೂವಿನ ಅಲಂಕಾರಗಳಿಂದ ಶೃಂಗರಿಸಲಾದ ದೇವರುಗಳೊಂದಿಗೆ ಹೊರ ಬೀರಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಬನ್ನಿ ಮರದ ಬಳಿಮೆರವಣಿಗೆಯ ಮೂಲಕ ಆಗಮಿಸಿ, ಸಂಪ್ರದಾಯಬದ್ಧವಾಗಿ ಬನ್ನಿ ಪೂಜೆಯನ್ನು ನೆರವೇರಿಸಿದರು.

ದಸರಾ ಆಚರಣೆಯ ನಂತರ ಸರ್ವ ಭಕ್ತಾದಿಗಳು ದೇವರುಗಳ ದರ್ಶನ ಪಡೆದು, ದೇವರ ಆಶೀರ್ವಾದಕ್ಕೆ ಪಾತ್ರರಾದರು. ಬಳಿಕ ಹೊರಗುಡಿ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಅನ್ನಪ್ರಸಾದವನ್ನು ಸಕಲ ಭಕ್ತಾದಿಗಳು ಸ್ವೀಕರಿಸಿದರು.

ನಂತರ ದೇವರುಗಳನ್ನು ಮತ್ತೊಮ್ಮೆ ಗ್ರಾಮದ ರಾಜಬೀದಿಯ ಮೂಲಕ ವಿವಿಧ ವಾದ್ಯಮೇಳಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಮೆರವಣಿಗೆಯು ಸಾಗುವ ಮಾರ್ಗದುದ್ದಕ್ಕೂ ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ದೇವರುಗಳಿಗೆ ಎಣ್ಣೆ ಹಾಗೂ ಊದುಬತ್ತಿ ಸಮರ್ಪಿಸಿ, ಭಕ್ತಿಭಾವದಿಂದ ಓಕುಳಿಯಿಂದ ಗ್ರಾಮದ ದೊರೆಗಳಿಗೆ ದೇವತೆಗಳಿಗೆ ದೃಷ್ಟಿಯನ್ನು ತೆಗೆಯುವ ಮೂಲಕ ಪೂಜೆ ಸಲ್ಲಿಸಿದರು. ಪ್ರತಿಯೊಂದು ಮನೆಯವರಿಂದಲೂ ಗೌರವಪೂರ್ವಕವಾಗಿ ಪೂಜೆ ಸಲ್ಲಿಸಿದರು.