ನಕಲಿ ಸುಪ್ರೀಂ ಕೋರ್ಟ್ ಆದೇಶ ಪ್ರಕರಣ ಡಿಐಜಿ ಸೋಮಶೇಖರ್ ಬಂಧನ…

ಪರಪ್ಪನ ಅಗ್ರಹಾರದಲ್ಲಿ ನಕಲಿ ಸುಪ್ರೀಂ ಕೋರ್ಟ್ ಆದೇಶ ಪ್ರಕರಣ.
ಜೈಲು ಇಲಾಖೆ ಡಿಐಜಿ ಸೋಮಶೇಖರ್ ಬಂಧನ…

ವೀರಮಾರ್ಗ ನ್ಯೂಸ್ : ಆನೇಕಲ್ : ನಕಲಿ ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯನ್ನು ಜೈಲಿನಿಂದ ಬಿಡುಗಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಐಜಿ ಸೋಮಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಶಂಕರ್ ಬಿನ್ ಶಂಕರ್, ಎ. ಸಿಟಿಪಿ-12503 ಎಂಬ ಜೀವಾವಧಿ ಶಿಕ್ಷೆಗೊಳಗಾದ ಕೈದಿಯನ್ನು 2018ರ ನವೆಂಬರ್ 13ರಂದು ನಕಲಿ ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನು ಆಧರಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ.
ಕೈದಿ ಬಿಡುಗಡೆಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ವೇಳೆ ನಕಲಿ ಕೋರ್ಟ್ ಆದೇಶದ ಮೂಲಕ ಅಕ್ರಮವಾಗಿ ಬಿಡುಗಡೆ ಮಾಡಿರುವುದು ಬೆಳಕಿಗೆ ಬಂದಿದೆ. ನಕಲಿ ದಾಖಲೆ ಸೃಷ್ಟಿಸಿ ಕೈದಿ ಬಿಡುಗಡೆಗೆ ಜೈಲು ಅಧಿಕಾರಿಗಳೇ ಸಹಕರಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಡಿಎ ಅಧಿಕಾರಿ ಶ್ರೀಕಾಂತ್ ಎಸ್. ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೇಂದ್ರ ಕಾರಾಗೃಹದ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ.
ತನಿಖೆ ವೇಳೆ ಮಾಹಿತಿ ಮರೆಮಾಚಿದ ಆರೋಪ ಸೋಮಶೇಖರ್ ವಿರುದ್ಧವೂ ಕೇಳಿಬಂದಿದ್ದು, ಇದೀಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಇದೇ ತಿಂಗಳ 9ರವರೆಗೆ ಸೋಮಶೇಖರ್ ಪೊಲೀಸ್ ಕಸ್ಟಡಿಯಲ್ಲಿರಲಿದ್ದಾರೆ ಎಂದು ತಿಳಿದುಬಂದಿದೆ.
ನಕಲಿ ಸುಪ್ರೀಂ ಕೋರ್ಟ್ ಆದೇಶದ ಹಿಂದೆ ಇನ್ನಷ್ಟು ಅಧಿಕಾರಿಗಳ ಕೈವಾಡವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಮಹತ್ವದ ಮಾಹಿತಿ ಹೊರಬರುವ ಸಾಧ್ಯತೆ ಇದೆ.