ರೈತರ ಬೇಡಿಕೆ ಈಡೇರದಿದ್ದರೆ ನವೆಂಬರ್ 18ರಂದು ಬಂದ್‌ಗೆ ಕರೆ.

ಡಿಸೆಂಬರ್ 31ರವರೆಗೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಿ, ಇಲ್ಲವೇ ಎಕರೆಗೆ ₹50 ಸಾವಿರ ಬೆಳೆ ನಷ್ಟ ಪರಿಹಾರ ನೀಡಿ:

ರೈತರ ಬೇಡಿಕೆ ಈಡೇರದಿದ್ದರೆ ನವೆಂಬರ್ 18ರಂದು ಸಿಂಧನೂರು ಬಂದ್‌ಗೆ ಕರೆ

ಸಿಂಧನೂರು: ತುಂಗಭದ್ರಾ ಜಲಾಶಯದಿಂದ ರೈತರ ಕೃಷಿ ಬೆಳೆಗಳಿಗೆ ಅನುಕೂಲವಾಗುವಂತೆ ಡಿಸೆಂಬರ್ 31ರವರೆಗೆ ತುಂಗಭದ್ರಾ ಎಡದಂಡೆ ಮುಖ್ಯ ನಾಲೆಗೆ ನಿರಂತರವಾಗಿ ನೀರು ಹರಿಸಬೇಕು.ಒಂದು ವೇಳೆ ನೀರು ಹರಿಸಲು ಸಾಧ್ಯವಾಗದಿದ್ದರೆ ನೀರಿನ ಅಭಾವದಿಂದ ಬೆಳೆ ನಷ್ಟ ಅನುಭವಿಸುವ ರೈತರಿಗೆ ಪ್ರತಿ ಎಕರೆಗೆ ₹50,000 ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ತುಂಗಭದ್ರ ಜಲಾಶಯ ರೈತ ಒಕ್ಕೂಟ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿವೆ.

ಈ ಕುರಿತು ಸಿಂಧನೂರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರುಪಾದಿ ಕೆ ಗೋಮರ್ಸಿ ಮಾತನಾಡಿ ತುಂಗಭದ್ರಾ ಎಡದಂಡೆ ನಾಲೆಯ ನೀರನ್ನು ಅವಲಂಬಿಸಿ ಸಾವಿರಾರು ರೈತರು ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ.ಈಗಾಗಲೇ ಕೃಷಿ ಚಟುವಟಿಕೆಗಳಿಗಾಗಿ ರೈತರು ಲಕ್ಷಾಂತರ ರೂಪಾಯಿ ಸಾಲ ಮಾಡಿ ಬಂಡವಾಳ ಹೂಡಿದ್ದಾರೆ.ಇಂತಹ ಸಂದರ್ಭದಲ್ಲಿ ನಾಲೆಗೆ ಸಮರ್ಪಕವಾಗಿ ನೀರು ಹರಿಸದಿದ್ದರೆ ರೈತರ ಬೆಳೆಗಳು ಒಣಗಿ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಡಿಸೆಂಬರ್ 31ರವರೆಗೆ ನಾಲೆಗೆ ನೀರು ಹರಿಸುವುದು ಅತ್ಯಗತ್ಯವಾಗಿದೆ.ನೀರಿನ ಲಭ್ಯತೆ ಮತ್ತು ಹಂಚಿಕೆಯ ಕುರಿತು ಸರ್ಕಾರ ಹಾಗೂ ನೀರಾವರಿ ಇಲಾಖೆ , ಈ ಭಾಗದ ಎಲ್ಲಾ ಜನ ಪ್ರತಿನಿಧಿಗಳು ಸೂಕ್ತ ನಿರ್ಧಾರ ಕೈಗೊಂಡು ರೈತರ ಹಿತ ಕಾಪಾಡಬೇಕು.ಕೇವಲ ಭರವಸೆಗಳಿಗೆ ಸೀಮಿತವಾಗದೆ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಾಲೆಗೆ ಡಿಸೆಂಬರ್ 31ರವರೆಗೆ ನೀರು ಹರಿಸಲು ಸಾಧ್ಯವಾಗದಿದ್ದರೆ, ನೀರಿನ ಅಭಾವದಿಂದ ಬೆಳೆ ನಷ್ಟ ಅನುಭವಿಸುವ ರೈತರಿಗೆ ಪ್ರತಿ ಎಕರೆಗೆ ₹50,000 ಪರಿಹಾರವನ್ನು ಸರ್ಕಾರ ತಕ್ಷಣ ಘೋಷಿಸಿ ವಿತರಿಸಬೇಕು.ರೈತರ ಕೃಷಿ ವೆಚ್ಚ, ಸಾಲದ ಹೊರೆ ಮತ್ತು ಬೆಳೆ ನಷ್ಟವನ್ನು ಪರಿಗಣಿಸಿ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ದಿನಾಂಕ 18.11.2026ರ ಬುಧವಾರ ಸಿಂಧನೂರು ನಗರ ಬಂದ್ ಆಚರಿಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ಅಂದು ರೈತರ ಹಿತದೃಷ್ಟಿಯಿಂದ ನಡೆಯುವ ಬಂದ್‌ಗೆ ವ್ಯಾಪಾರಸ್ಥರು, ವರ್ತಕರು, ವಿವಿಧ ಸಂಘಟನೆಗಳು, ಸಾರ್ವಜನಿಕರು ಹಾಗೂ ರೈತ ಬಾಂಧವರು ಸ್ವಯಂಪ್ರೇರಿತವಾಗಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ರೈತರ ಬದುಕು ಮತ್ತು ಕೃಷಿಯನ್ನು ಉಳಿಸುವ ಉದ್ದೇಶದಿಂದ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಸರ್ಕಾರ ಕೂಡಲೇ ರೈತರ ಬೇಡಿಕೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಬೇಕು ಎಂದು ತುಂಗಭದ್ರ ಜಲಾಶಯ ರೈತ ಒಕ್ಕೂಟ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡರು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ರಾಮಕೃಷ್ಣ ಬಾಲಯ್ಯ ಕ್ಯಾಂಪ್,ನಿರುಪಾದಿ ಸುಲ್ತಾನಾಪುರ,ಗಿರಿಬಾಬು ಮಲ್ಲಿಕಾರ್ಜುನ್ ರೆಡ್ಡಿ ಸಾಸಲಮರಿ, ಶಿವರಾಜ್ ಸಾಸಲಮರಿ, ಹನುಮಪ್ಪ ತಿಡಿಗೋಳ,ವೆಂಕೋಬ ರೆಡ್ಡಿ ಮಲ್ಲಾಪುರ,ನಾಗರಾಜು ಬಿಂಗಿ, ಸೋಮನಗೌಡ ಗೊರೆಬಾಳ, ಯಮನಪ್ಪ ಪಗಡದಿನ್ನಿ, ಅಯ್ಯಪ್ಪ ಬನ್ನಿಗನೂರು, ಅಯ್ಯಪ್ಪ ಮೇಟಿ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.