ಠಾಣೆಯಲ್ಲೇ ತಾಳಿ ಕಿತ್ತೆಸೆದಿದ್ದ ಶ್ರೀಮಂತ ಯುವತಿ; 6 ತಿಂಗಳ ಬಳಿಕ ಪೇಂಟರ್ ಪ್ರಿಯಕರನನ್ನೇ ಹುಡುಕಿ ಬಂದು ಮರುಮದುವೆಯಾದಳು!
ವೀರಮಾರ್ಗ ನ್ಯೂಸ್ : ಚಿಕ್ಕಬಳ್ಳಾಪುರ : ಪ್ರೀತಿ ಹಾಗೂ ಪ್ರೇಮಕ್ಕೆ ಬಡತನ-ಶ್ರೀಮಂತಿಕೆ, ಜಾತಿ-ಬೇಧದ ಗೋಡೆಗಳಿಲ್ಲ ಎಂಬ ಮಾತಿಗೆ ಸಾಕ್ಷಿಯಾಗುವಂತಹ ರೋಚಕ ಮತ್ತು ಸಿನಿಮೀಯ ಶೈಲಿಯ ಪ್ರೇಮಕಥೆಯೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಆರು ತಿಂಗಳ ಹಿಂದೆ ಹೆತ್ತವರ ಒತ್ತಡಕ್ಕೆ ಮಣಿದು, ಪೊಲೀಸ್ ಠಾಣೆಯಲ್ಲೇ ಪ್ರಿಯಕರ ಕಟ್ಟಿದ್ದ ತಾಳಿಯನ್ನು ಕಿತ್ತೆಸೆದು ಹೋಗಿದ್ದ ಶ್ರೀಮಂತ ಯುವತಿಯೊಬ್ಬಳು, ಇದೀಗ ತನ್ನ ಅಸಲಿ ಪ್ರೀತಿಯನ್ನು ಹುಡುಕಿಕೊಂಡು ಬಂದು ಅದೇ ಯುವಕನ ಹೆಗಲೇರಿದ್ದಾಳೆ!
ಮನೆಯವರ ತೀವ್ರ ವಿರೋಧ ಹಾಗೂ ಜೀವ ಬೆದರಿಕೆಯ ನಡುವೆಯೂ ಈ ಪ್ರೇಮಿಗಳು ಸದ್ಯ ದೇವಸ್ಥಾನದಲ್ಲಿ ಮರುಮದುವೆಯಾಗುವ ಮೂಲಕ ಒಂದಾಗಿದ್ದಾರೆ.
ಪೇಂಟರ್ ಹುಡುಗ, ಶ್ರೀಮಂತ ಹುಡುಗಿಯ ಲವ್ ಸ್ಟೋರಿ!
ಚಿಕ್ಕಬಳ್ಳಾಪುರದ ಕಂದವಾರ ಬಡಾವಣೆಯ ನಿವಾಸಿಯಾದ ಕೀರ್ತನಾ ಬಲಜಿಗ ಸಮುದಾಯದ ಶ್ರೀಮಂತ ಕುಟುಂಬಕ್ಕೆ ಸೇರಿದ ಯುವತಿ. ಅದೇ ನಗರದ ಎಸ್‌ಟಿ (ST) ಸಮುದಾಯಕ್ಕೆ ಸೇರಿದ ಸಾಯಿ ಸಂದೀಪ್ ಎಂಬ ಯುವಕ ಪೇಂಟಿಂಗ್ ಕೆಲಸ ಮಾಡಿಕೊಂಡಿರುವ ಸಾಮಾನ್ಯ ಬಡ ಯುವಕ. ಆರ್ಥಿಕ ಹಾಗೂ ಸಾಮಾಜಿಕ ವ್ಯತ್ಯಾಸಗಳಿದ್ದರೂ ಇವರಿಬ್ಬರ ನಡುವೆ ಪ್ರೀತಿ ಮೊಳೆತಿತ್ತು. ಆರು ತಿಂಗಳ ಹಿಂದೆ ಮನೆಯವರಿಗೆ ತಿಳಿಸದೆ ಈ ಜೋಡಿ ಪ್ರೇಮ ವಿವಾಹವಾಗಿತ್ತು.
ಪೊಲೀಸ್ ಠಾಣೆಯಲ್ಲೇ ನಡೆದಿತ್ತು ಹೈಡ್ರಾಮಾ!
ಅಂತಸ್ತಿನ ಭೇದದ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ಈ ಮದುವೆಯನ್ನು ತೀವ್ರವಾಗಿ ವಿರೋಧಿಸಿ ಗಲಾಟೆ ಮಾಡಿದ್ದರು. ಪೋಷಕರ ತೀವ್ರ ಒತ್ತಡ, ಭಾವನಾತ್ಮಕ ಬ್ಲ್ಯಾಕ್‌ಮೇಲ್‌ಗೆ ಮಣಿದಿದ್ದ ಕೀರ್ತನಾ, ಕಳೆದ ಜನವರಿ 6 ರಂದು ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲೇ ಸಂದೀಪ್ ಕಟ್ಟಿದ್ದ ತಾಳಿಯನ್ನು ಕಿತ್ತೆಸೆದು ಹೆತ್ತವರ ಜೊತೆ ಮನೆಗೆ ಮರಳಿದ್ದಳು. ಈ ಹೈಡ್ರಾಮಾದಿಂದಾಗಿ ಇವರ ಪ್ರೇಮಕಥೆ ಅಲ್ಲಿಗೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು.
6 ತಿಂಗಳ ಬಳಿಕ ಬದಲಾಯಿತು ಕ್ಲೈಮ್ಯಾಕ್ಸ್!
ಹೆತ್ತವರ ಒತ್ತಾಯಕ್ಕೆ ಮಣಿದು ಅಂದು ತಾಳಿ ಕಿತ್ತುಹಾಕಿದ್ದರೂ ಕೀರ್ತನಾಳಿಗೆ ಸಂದೀಪ್ ಮೇಲಿದ್ದ ಪ್ರೀತಿ ಮಾತ್ರ ಕೊಂಚವೂ ಕಡಿಮೆಯಾಗಿರಲಿಲ್ಲ. ಕಳೆದ ಆರು ತಿಂಗಳಿಂದ ಮನೆಯವರ ಕಣ್ಣುತಪ್ಪಿಸಿ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಆಕೆ, ಇತ್ತೀಚೆಗೆ ‘‘ನಿನ್ನನ್ನು ಬಿಟ್ಟು ನನಗಿರಲು ಸಾಧ್ಯವಿಲ್ಲ’’ ಎಂದು ಸಂದೀಪ್‌ಗೆ ಸ್ವತಃ ಫೋನ್ ಮಾಡಿ ಕರೆಸಿಕೊಂಡಿದ್ದಾಳೆ.
ತಕ್ಷಣವೇ ಹೆತ್ತವರನ್ನು ಎದುರಿಸಿ ಮನೆ ಬಿಟ್ಟು ಹೊರಟುಬಂದ ಕೀರ್ತನಾ, ದೇವಸ್ಥಾನದ ಮುಂಭಾಗದ ರಸ್ತೆಯಲ್ಲೇ ನಿಂತು ಸಂದೀಪ್ ಕೈಯಿಂದ ಮತ್ತೊಮ್ಮೆ ಹಸನ್ಮುಖಿಯಾಗಿ ತಾಳಿ ಕಟ್ಟಿಸಿಕೊಂಡಿದ್ದಾಳೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್!
ತಮ್ಮ ಪ್ರೀತಿಯನ್ನು ಗೆದ್ದುಕೊಂಡ ಈ ಜೋಡಿ ಸದ್ಯ ಮರುಮದುವೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಸಿನಿಮಾ ಕಥೆಯನ್ನೂ ಮೀರಿಸುವಂತಿರುವ ಈ ಜೋಡಿಯ ಮರುಮದುವೆಯ ದೃಶ್ಯಗಳು ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಪ್ರೇಮಿಗಳ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವರದಿ : ಚನ್ನೇಶ ಬೆಂಗಳೂರು.