ದೇವರು&ಧರ್ಮದ ಮಾರ್ಗದಿಂದ ಮಾತ್ರ ಮನಸ್ಸಿಗೆ ಶಾಂತಿ-ನೆಮ್ಮದಿ.

ವೀರಮಾರ್ಗ ನ್ಯೂಸ್ : K R PETE : ದೇವರು ಮತ್ತು ಧರ್ಮದ ಮಾರ್ಗದಿಂದ ಮಾತ್ರ ಮನಸ್ಸಿಗೆ ಶಾಂತಿ, ನೆಮ್ಮದಿ.. ಡಾ. ಮಹೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಮತ.. ಇಂದಿನ ಒತ್ತಡದ ಜೀವನದಲ್ಲಿ ಮಾನವರಾದ ನಾವು ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗಿದಾಗ ಮಾತ್ರ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ಪಡೆಯಲು ಸಾಧ್ಯವಿದೆ ಎಂದು ನಣ್ಣೆನಹಳ್ಳಿ-ಅಯ್ಯನಹಳ್ಳಿ ಪುರವರ್ಗ ಹಿರೇಮಠದ ಪೀಠಾಧಿಪತಿಗಳಾದ ಡಾ. ಮಹೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳು ಹೇಳಿದರು…

ಕೃಷ್ಣರಾಜಪೇಟೆ ತಾಲೂಕಿನ ಹೊಸಹೊಳಲು ಗ್ರಾಮದ ವಿಜಯನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಉಕ್ಕಡಗಾತ್ರಿ ಶ್ರೀಗುರು ಕರಿಬಸವೇಶ್ವರ ಅಜ್ಜಯ್ಯ ಸ್ವಾಮಿಯವರ ದೇವಾಲಯದ 48ನೇ ದಿನದ ಮಂಡಲ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆರೆದಿದ್ದ ಸಾವಿರಾರು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು. ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದ ಒತ್ತಡದ ಜೀವನದಲ್ಲಿ ಬದುಕು ನಡೆಸುತ್ತಿರುವ ಮಾನವರಾದ ನಾವು, ನಮ್ಮ ಕೆಲಸದ ಒತ್ತಡದಲ್ಲಿ ಅಲ್ಪ ಸಮಯವನ್ನು ಬಿಡುವು ಮಾಡಿಕೊಂಡು ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗಿದಾಗ ಮಾತ್ರ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ಪಡೆಯುವ ಜೊತೆಗೆ, ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕೂಡ ಪಡೆಯಬಹುದಾಗಿದೆ. ಆದ್ದರಿಂದ ಸಾಧನೆ ಮಾಡಲು ಕಷ್ಟವಾದರೂ ನ್ಯಾಯ ನೀತಿ ಧರ್ಮ ಹಾಗೂ ಸತ್ಯದ ಮಾರ್ಗದಲ್ಲಿ ಸಾಗಿ ಗುರಿ ಮುಟ್ಟಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು ಎಂದು ಶ್ರೀಗಳು ಮನವಿ ಮಾಡಿದರು. ಉತ್ತರ ಕರ್ನಾಟಕದ ರಾಣೇಬೆನ್ನೂರಿನ ಪಕ್ಕದಲ್ಲಿರುವ ಉಕ್ಕಡಗಾತ್ರಿಯ ಕರಿಬಸವ ಅಜ್ಜಯ್ಯನನ್ನು ದರ್ಶನ ಮಾಡಲು ಈ ಭಾಗದ ಭಕ್ತರು 250 ಕಿಲೋ ಮೀಟರ್ ದೂರ ಪ್ರಯಾಣ ಮಾಡಬೇಕಾಗಿತ್ತು , ಅಜ್ಜಯ್ಯನವರ ಪರಮ ಭಕ್ತರಾಗಿರುವ ಸುರೇಶ್ ಅಜ್ಜಯ್ಯ ಅವರು ಹೊಸ ಹೊಳಲು ಗ್ರಾಮದಲ್ಲಿಯೇ ಕರೆಬಸವ ಅಜ್ಜಯ್ಯನವರ ದೇವಾಲಯವನ್ನು ಸ್ಥಾಪಿಸಿ ಇಲ್ಲಿಯೇ ಅಜ್ಜಯ್ಯನ ದರ್ಶನ ಮಾಡಿ ಪೂಜೆ ಪುರಸ್ಕಾರಗಳನ್ನು ಕೈಗೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ಬೆಳಕು ಚೆಲ್ಲುವ ದೇವಾಲಯಗಳನ್ನು ಉಳಿಸಿ ಬೆಳೆಸಿ ಸಂರಕ್ಷಣೆ ಮಾಡುವ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿರುವ ಹೊಸಹೊಳಲು ಗ್ರಾಮಸ್ಥರು ನಾಗರೀಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಡಾ.ಮಹೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳು ಹೇಳಿದರು. ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ನಾಗೇಂದ್ರಕುಮಾರ್,ಸಮಾಜ ಸೇವಕರಾದ ಆರ್‌ಟಿಓ ಮಲ್ಲಿಕಾರ್ಜುನ, ಮಂಡ್ಯ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಎಂ. ಬಿ.ಹರೀಶ್, ನಿರ್ದೇಶಕರಾದ ಡಾಲು ರವಿ ಪುರಸಭೆ ಸದಸ್ಯರಾದ ಹೆಚ್.ಆರ್. ಲೋಕೇಶ್ ಹೆಚ್.ಡಿ.ಅಶೋಕ್, ಕೆ.ಮಂಜುಳಾ ಚನ್ನಕೇಶವ, ದಾನಿಗಳಾದ ಸೋಮಶೇಖರ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಹೆಚ್‌.ಕೆ.ಅಶೋಕ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯಲಕ್ಷ್ಮಿ ರಾಜಶೇಖರ್, ಕರ್ನಾಟಕ ರಕ್ಷಣಾ ವೇದಿಕೆಯ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೇನಹಳ್ಳಿ ವೇಣು, ಉಪಾಧ್ಯಕ್ಷ ಹೊಸಹೊಳಲು ಗೋಪಿ, ಹೆಚ್.ಜೆ.ಶ್ರೀನಿವಾಸ್, ಗಂಟಯ್ಯ ಗೋಪಾಲ್, ರಘು, ಸೇರಿದಂತೆ ಸಾವಿರಾರು ಭಕ್ತಾದಿಗಳು ಅಜ್ಜಯ್ಯನ ದೇವಾಲಯದ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ : ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.