ರಾಜಸ್ಥಾನ್ ಸಮಾಜದ ಶಿರವಿ ಸಮುದಾಯದ ಬಂಧುಗಳ ಒಗ್ಗಟ್ಟು.

ವೀರಮಾರ್ಗ ನ್ಯೂಸ್ : K R PETE : ರಾಜಸ್ಥಾನ್ ಸಮಾಜದ ಕನ್ನಡ ಪ್ರೇಮ, ಸಮಾಜದ ಒಗ್ಗಟ್ಟು ಹಾಗೂ ಸಂಘಟನೆ ನಾಡಿಗೆ ಮಾದರಿಯಾಗಿದೆ. ಧರ್ಮಗುರು ದಿವಾನ್ ಮಾಧವ ಸಿಂಗ್ ಜಿ ಅಭಿಮತ.. ಹಾಲಿಗೆ ಸಕ್ಕರೆ ಬೆರೆತರೆ ಹಾಲಿನ ರುಚಿಯು ಹೆಚ್ಚಾಗುವಂತೆ ಶಿರವಿ ಸಮಾಜದ ಬಂಧುಗಳು ಸಮಾಜದ ಎಲ್ಲಾ ಜಾತಿ, ವರ್ಗಗಳ ಜನರ ಜೊತೆ ಒಂದಾಗಿ ಬೆರೆಯುವ ಮೂಲಕ ನಾಡಿಗೆ ಕೋಮು ಸೌಹಾರ್ದತೆಯ ಸಂದೇಶ ಸಾರಿದ್ದಾರೆ ಎಂದು ಭಾರತ ದೇಶದ ಶಿರವಿ ಸಮಾಜದ 19ನೇ ಪರಮಗುರು ದಿವಾನ್ ಮಾಧವ ಸಿಂಗ್ ಜೀ ಹೇಳಿದರು. ಅವರು ಕೃಷ್ಣರಾಜಪೇಟೆ ಪಟ್ಟಣದಲ್ಲಿ ಶಿರವಿ ಸಮಾಜದ ವತಿಯಿಂದ ನಿರ್ಮಿಸಿರುವ ಆಯಿ’ಮಾ ಮಂದಿರದ ನೂತನ ಭವನವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷ್ಣರಾಜಪೇಟೆ ತಾಲೂಕಿನ ರಾಜಸ್ಥಾನ್ ಸಮಾಜದ ಶಿರವಿ ಸಮುದಾಯದ ಬಂಧುಗಳ ಒಗ್ಗಟ್ಟು ಹಾಗೂ ಸಂಘಟನೆಯು ರಾಜ್ಯಕ್ಕೆ ಮಾದರಿಯಾಗಿದೆ. ರಾಜಸ್ಥಾನ್ ಸಮಾಜದ ಬಂಧುಗಳು ಇಂದು ನಡೆದ ಭಾವೈಕ್ಯಯತೆಯ ಸಮಾನತೆ ಸಂದೇಶ ಸಾರುವ ಧರ್ಮ ರಥದ ಮೆರವಣಿಗೆಯಲ್ಲಿ ಕನ್ನಡ ಬಾವುಟಗಳನ್ನು ಕೈಯಲ್ಲಿ ಹಿಡಿದುಕೊಂಡು, ಕನ್ನಡದ ಶಲ್ಯಗಳನ್ನು ಹೊದ್ದುಕೊಂಡು ತಮ್ಮ ಕನ್ನಡ ಪ್ರೇಮವನ್ನು ಮೆರೆದಿರುವುದಲ್ಲದೆ, ತಮಗೆ ಆಶ್ರಯ ನೀಡಿರುವ ಕನ್ನಡದ ಮಣ್ಣಿನ ಋಣವನ್ನು ತೀರಿಸುವ ದಿಕ್ಕಿನಲ್ಲಿ ಭಾವೈಕ್ಯತೆಯ ಸಂದೇಶವನ್ನು ನಾಡಿಗೆ ನೀಡಿದ್ದಾರೆ. ಶಿರವಿ ಸಮಾಜದ ನಮ್ಮ ಬಂಧುಗಳ ಮೇಲೆ ಕನ್ನಡಿಗರು ಇಟ್ಟಿರುವ ಪ್ರೀತಿ, ಮಮತೆ, ವಿಶ್ವಾಸ, ಬೆಂಬಲ ಹಾಗೂ ಪ್ರೋತ್ಸಾಹವನ್ನು ಕಂಡು ನನಗೆ ಹೃದಯ ತುಂಬಿ ಬಂದಿದೆ. ಕೃಷ್ಣರಾಜಪೇಟೆಯ ಜನರ ಒಗ್ಗಟ್ಟು ಹಾಗೂ ಸಹಬಾಳ್ವೆಯು ಇಡೀ ದೇಶಕ್ಕೆ ಮಾದರಿಯಾಗಿದೆ. ಅನಾರೋಗ್ಯದ ನಡುವೆಯೂ ರಾಜಸ್ಥಾನದಿಂದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ನನಗೆ ಸಂತೋಷ ಹೆಚ್ಚಾಗಿ, ಹೃದಯ ತುಂಬಿ ಬಂದಿದೆ. ಕೃಷ್ಣರಾಜಪೇಟೆಯ ಜನತೆಯ ಸಹಕಾರದಿಂದ ರಾಜಸ್ಥಾನ್ ಸಮಾಜದ ಸಿರವಿ ಸಮುದಾಯದ ಬಂಧುಗಳು ಭವ್ಯವಾದ ದೇವಿಯ ಮಂದಿರವನ್ನು ನಿರ್ಮಿಸಿ ಕೋಮು ಸೌಹಾರ್ದತೆ, ಸಹಬಾಳ್ವೆಗೆ ಮಾದರಿ ಯಾಗಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಮಾತನಾಡಿ ಕೃಷ್ಣರಾಜಪೇಟೆ ತಾಲೂಕಿನಲ್ಲಿ ರಾಜಸ್ಥಾನ್ ಸಮಾಜದ ಬಂಧುಗಳು ಸ್ನೇಹ ಸೌಹಾರ್ದತೆಯಿಂದ ನೆಮ್ಮದಿಯ ಜೀವನ ನಡೆಸುವ ಜೊತೆಗೆ ತಮ್ಮ ವ್ಯಾಪಾರ ವಹಿವಾಟನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ ಕೆಆರ್ ಪೇಟೆ ಗ್ರಾಮದೇವತೆ ದೊಡ್ಡಕೇರಮ್ಮನವರ ಜಾತ್ರೆಯ ಸಂದರ್ಭದಲ್ಲಿ 10 ಸಾವಿರಕ್ಕೂ ಹೆಚ್ಚಿನ ಜನರಿಗೆ ಅನ್ನಪ್ರಸಾದವನ್ನು ನೀಡುವ ಮೂಲಕ ನಾವು ಕೊಡುಗೆ ದಾನಗಳು ಕೂಡ ಹೌದು ಎಂಬುದನ್ನು ನಿರೂಪಿಸಿ ತೋರಿಸಿಕೊಟ್ಟಿದ್ದಾರೆ ಸಮಾಜದ ಬಂಧುಗಳು ಪಟ್ಟಣದಲ್ಲಿ ನಿರ್ಮಿಸಿರುವಾಗ ಭವ್ಯವಾದ ಮಂದಿರದ ಅಭಿವೃದ್ಧಿಗೆ ಬೇಕಾಗಿರುವ ಹಣವನ್ನು ಸಹಾಯ ಧನದ ರೂಪದಲ್ಲಿ ಸರ್ಕಾರದಿಂದ ಕೊಡಿಸಿ ಕೊಡುವ ದಿಕ್ಕಿನಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಚ್ ಟಿ ಮಂಜು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸರ್ವೇ ಸಮಾಜದ ಜನರ ಒಗಟು ಹಾಗೂ ಸಹಬಾಳ್ವೆಯ ಜೀವನವನ್ನು ಶ್ಲಾಘಿಸಿದರಲ್ಲದೆ.

ಕೆ.ಆರ್.ಪೇಟೆ ಪಟ್ಟಣದಲ್ಲಿ ತಾಯಿ ಚಾಮುಂಡೇಶ್ವರಿ ತಾಯಿ ಆಯಿಮಾ ದೇವಿಯ ಮಂದಿರವನ್ನು ಭವ್ಯವಾಗಿ ನಿರ್ಮಿಸಿ, ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಬದ್ಧತೆಯಿಂದ ಮಾಡುತ್ತಿದ್ದಾರೆ ಎಂದು ಹೇಳಿದರು. ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಶೀಳನೆರೆ ಅಂಬರೀಶ್, ಪುರಸಭೆ ಮಾಜಿ ಅಧ್ಯಕ್ಷ ನಟರಾಜ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಹೆಚ್.ಆರ್.ಲೋಕೇಶ್, ಕೆ.ಆರ್.ರವೀಂದ್ರಬಾಬು, ತಾಲೂಕು ಜೆಡಿಎಸ್ ಮುಖಂಡ ಜಾನಕಿರಾಮ್, ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯ ನಿರ್ಗಮಿತ ಆರಕ್ಷಕ ನಿರೀಕ್ಷಕಿ ಸುಮಾರಾಣಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪಟ್ಟಣದ ಪ್ರಮುಖರು ಹಾಗೂ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಿರವಿ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದ್ಯಮಿ ಕುಮಾರ್, ತಾಲೂಕು ವಿತರಕರ ಸಂಘದ ಅಧ್ಯಕ್ಷ ಕೆ.ಎಸ್. ರಾಜೇಶ್, ಸಕ್ಕರೆ ವ್ಯಾಪಾರಿ ರುಕ್ಮಾಂಗದ, ಹಿರಿಯ ಪತ್ರಕರ್ತರಾದ ಬಳ್ಳೇಕೆರೆ ಮಂಜುನಾಥ್, ಕೆ.ಆರ್. ನೀಲಕಂಠ, ಸೈಯದ್ ಖಲೀಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೃಷ್ಣರಾಜಪೇಟೆ ತಾಲೂಕಿನ ಸಿರವಿ ಸಮಾಜದ ಅಧ್ಯಕ್ಷ ಜೈ ರಾಮ್, ಕಾರ್ಯದರ್ಶಿ ದಿನೇಶ್, ಖಜಾಂಚಿ ಧರ್ಮೇಂದ್ರ, ಮಲ್ಲಾರಾಮ್, ಮೋತಿ ರಮೇಶ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು . ಕೆ.ಆರ್.ಪೇಟೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಾಜಸ್ಥಾನದಿಂದ ಆಗಮಿಸಿದ್ದ ಆಯಿಮಾ ಮಂದಿರದ ಧರ್ಮ ರಥದ ಮೆರವಣಿಗೆಯೊಂದಿಗೆ ರಾಜಸ್ಥಾನ್ ಸಮಾಜದ ಪುರುಷರು ಹಾಗೂ ಹೆಣ್ಣು ಮಕ್ಕಳು ಸಾಂಪ್ರದಾಯಿಕ ವೇಷ ಭೂಷಣ ಧರಿಸಿ, ಬಾಂಗ್ರಾ ನೃತ್ಯವನ್ನು ಪ್ರದರ್ಶಿಸಿ ನಾಡಿಗೆ ಭಾವೈಕ್ಯತೆಯ ಸಂದೇಶವನ್ನು ನೀಡಿದರು.

ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.