ನೀ ಎಲ್ಲೇ ನಾನು ಅಲ್ಲೇ…

ನೀ ಎಲ್ಲಿ ಹೋದರಲ್ಲಿ

ನೀ ಎಲ್ಲಿ ಹೋದರಲ್ಲಿ ನಾ
ಬರುವೆ ನಿನ್ನ ಹಿಂದೆ ಭಾವವಾಗಿ
ಓ ….. ಒಲವೇ..

ನೀನಾರ ಮಗಳೊ…ನಾನ್ಯಾರ ಮಗನೊ
ಹೇಗೆ ಹೆಣಿಯಿತು ಸಂಬಂಧ
ಉಸಿರು ಉಸಿರಿಗೂ ಒಂದೇ ಎನುವಂತೆ

ತಿಳಿಯಲಿಲ್ಲ ನಾನಾಡುವಾಗ ಬೀದಿಯಲಿ
ಬೆಳೆದು ನಿಂತಾಗ ಬದುಕಿನಲಿ ನೀ
ನನಗೆಂದು ಹುಟ್ಟಿಬಂದ ಒಲವೆಂದು

ನೀ ಎಂದಾದರೂ ಕನಸು ಕಂಡಿದ್ದೇನು
ಲಗ್ನ ಮಂಟಪದಲಿ ನಿನ್ನೆದುರು ನಾನಿಲ್ಲುವನೆಂದು
ಹೇಗೆ ಕೂಡಿತು ಇದು ಯಾರ ಲೆಕ್ಕಾಚಾರ

ಕೈಯಲ್ಲಿಡಿದ ಅರಿಶಿನ ದಾರದ ತಾಳಿ
ಯಾರು ಕುಟ್ಟಿ ಮಾಡಿದನೋ ಅವನು ವ್ಯಾಪಾರಿ
ಜನ್ಮಜನ್ಮಾಂತರದ ಋಣದ ಪಟ್ಟಟ್ಟಿದೆ ಎಂತಹ ಸೋಜಿಗವದು

ನನ್ನ ಹೆಜ್ಚೆಗಳಿಗೆ ನಿನ್ನ ಹೆಜ್ಜೆಗಳ ಕೂಡಿಸಿರುವೆ
ಬಣ್ಣ ಹಚ್ಚಿಕೊಂಡಿರುವೆ ಪಾದಗಳಿಗೆ
ನಾನು ನೀನು ಇರುವ ತನಕದಲಿ ಮಾಸದದು.

ನಾನೇಗೆ ಏಗಿದನೋ ನೀನೆಗೆನ್ನ
ಸಹಿಸಿದೆಯೋ ಒಬ್ಬರಿಗೊಬ್ಬರಿಗದುವೆ
ಒಪ್ಪಿಸಿಕೊಂಡಿಹವೊ ಒಲವೇ ಅದೇನು ನಿನ್ನ ಶಕ್ತಿ.

ಓ .. ಒಲವೇ ನೀನೆಂದು ಕೊರಡಲ್ಲವೋ
ಚಿಗುರುತನ ನಿನ್ನ ಬಸಿರಾಗಿಹುದು
ನಾಳೆ ಇದೆ ಎಂದು ಭರವಸೆ ಇತ್ತಿಹುದು

ಹಗಲು ರಾತ್ರಿಗಳ ಹಾಡಾಗಿಸಿದೆ ನೀನು
ಹಲವು ರಾಗಗಳಲಿ ಪಾಡಿಹೆ ನೀನು
ಓ… ಒಲವೇ ನೀ ಎಂದೆಂದೂ ಕ್ರಿಯಾತ್ಮಕ ಭಾವವೇ

 ಕಾವ್ಯ ಕಾರಂಜಿ ಕವನ ಮಾಲಿಕೆಯಲ್ಲಿ ದಿನಕ್ಕೊಂದು ಹೊಸ ಕವನ.

“ತವರೂರು ದಾರಿಯಲಿ “

ಮರಿ ಕೋಗಿಲ ಕೂಗ್ಯಾವ ಮಾವಿನ ಮರದಾಗ
ತೆಂಗು ಬಾಳೆ ತೂಗ್ಯಾವ ತವರೂರ ದಾರ್ಯಾಗ
ನನ್ನಣ್ಣ ಸರದಾರ ಎದುರುಗೊಂಡಾನ ನನ್ನನ್ನೂರು ಬೀದ್ಯಾಗ.

ಹೊನ್ನು ಬೆಳೆದಾನ ಹೊಳೆದಂಡಿ ಹೊಲದಾಗ
ಮುತ್ತಿನ ರಾಶಿ ಎತ್ತೇರಿ ಬಂದಾದ ಕಣದಾಗ
ಮುತ್ತಿನ ರಾಶಿಲಿ ಉಡಿ ತುಂಬ್ಯಾರ ತಾಯಿ ಮೈಸವ್ವಗ.

ಮುತ್ತಿನ ತೆನಿ ತೂಗ್ತಾವ ಹೊಲದಾಗ
ಹಕ್ಕಿ ಹಾರಾಡಿ ಬಂದು ಕುಂತಾವ ತೆನಿ ಮ್ಯಾಗ
ಹಡದವ್ವ ಬುತ್ತಿ ಹೊತ್ತು ಹೊರಟಾಳ ತಲಿಮ್ಯಾಗ.

ಚಕ್ಕಡಿ ಹೂಡ್ಯಾರ ಜೋಡೆತ್ತಿಗ
ಹುರಿಗೆಜ್ಜೆ ಕಟ್ಟ್ಯಾರ ಬಣ್ಣದ ಬಾರ್ಕೋಲಿಗ
ಮುತ್ತಿನ ರಾಶಿ ತುಂಬ್ಯಾರ ಎತ್ತಿನ ಬಂಡ್ಯಾಗ.

ಹಸು ಹಾಲು ಕರಿತಾವ ಮನಿಯಾಗ
ಹಾಲಭಿಷೇಕ ಮಾಡ್ಯಾರ ಶಿವಲಿಂಗನ ಗುಡಿಯಾಗ
ಹಸುಗೂಸು ಹಾಲಾಡ್ತಾದ ಹಡದವ್ವನ್ನ ಮಡಿಲಾಗ.

ಗಂಗವ್ವ ಭೋರಾಡಿ ಹರದಾಳ ಧರೆಯೊಳಗ
ಭೂಮತಾಯಿ ಹಸರುಟ್ಟು ಮೆರೆದಾಳ ಮನದಾಗ
ಕಲ್ಲುಕೋಳಿ ಕೂಗ್ಯಾದ ಕಲ್ಯಾಣ ಶರಣರ ನುಡಿಯಾಗ.

ಬೆಳ್ಳಿಚುಕ್ಕಿ ಮೂಡ್ಯಾದ ಮೂಡಣದಾಗ
ಗಂಟೆನಾದ ಮೊಳಗ್ತಾದ ವೀರಭದ್ರನ ಗುಡಿಯಾಗ
ಸುಖ ನೆಮ್ಮದಿ ನೆಲೆಸಲಿ ತಾಯಿ ಮೀನಕೇರಿ ಊರಾಗ.

ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ.ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ.