ವಿದ್ಯಾರ್ಥಿ ಹಿಮಾಚಲ ಪ್ರದೇಶದ 6,111 ಮೀಟರ್ ಎತ್ತರದ ‘ಯುನಮ್ ಪೀಕ್’ ಯಶಸ್ವಿ ಆರೋಹಣ.

ಮಾಧ್ಯಮ ಪ್ರಕಟಣೆ (Press Statement)

ವಿಷಯ : ಹಾವೇರಿ ಜಿಲ್ಲೆಯ ಸಾಹಸಿ ಯುವಕ, ದಾವಣಗೆರೆ R. L. ಲಾ ಕಾಲೇಜಿನ ವಿದ್ಯಾರ್ಥಿ ಮನೋಜ ಹೊನ್ನಪ್ಪ ಚಿಕ್ಕಪ್ಪನವರ ಅವರಿಂದ ಹಿಮಾಚಲ ಪ್ರದೇಶದ 6,111 ಮೀಟರ್ ಎತ್ತರದ ‘ಯುನಮ್ ಪೀಕ್’ ಯಶಸ್ವಿ ಆರೋಹಣ.

ಹಾವೇರಿ / ರಾಣೇಬೆನ್ನೂರು :

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದ ಸಾಹಸಿ ಯುವಕ ಮನೋಜ ಹೊನ್ನಪ್ಪ ಚಿಕ್ಕಪ್ಪನವರ (ಪ್ರಸ್ತುತ ದಾವಣಗೆರೆಯ R. L. ಲಾ ಕಾಲೇಜಿನಲ್ಲಿ LLB ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ) ಅವರು ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಕಣಿವೆಯಲ್ಲಿರುವ ಸಮುದ್ರ ಮಟ್ಟದಿಂದ ಸುಮಾರು 6,111 ಮೀಟರ್ (20,049 ಅಡಿ) ಎತ್ತರದ ಅತ್ಯಂತ ಸವಾಲಿನ ‘ಯುನಮ್ ಪೀಕ್’ (Yunam Peak) ಹಿಮಶಿಖರವನ್ನು ಯಶಸ್ವಿಯಾಗಿ ಏರುವ ಮೂಲಕ ಇಡೀ ಜಿಲ್ಲೆಗೆ, ತಮ್ಮ ಹುಟ್ಟೂರಿಗೆ, ಶಿಕ್ಷಣ ಸಂಸ್ಥೆಗೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ಹಿಮಾಚಲ ಪ್ರದೇಶ ಸರ್ಕಾರದ ಪ್ರಸಿದ್ಧ ‘ಅಟಲ್ ಬಿಹಾರಿ ವಾಜಪೇಯಿ ಪರ್ವತಾರೋಹಣ ಮತ್ತು ಕ್ರೀಡಾ ಸಂಸ್ಥೆ’ಯ (ABVIMAS) ಜಿಸ್ಪಾ (Jispa) ಉಪ ಕೇಂದ್ರದ ಅಡಿಯಲ್ಲಿ ನಡೆದ ಸುದೀರ್ಘ ಹಾಗೂ ಕಠಿಣ ‘ಬೇಸಿಕ್ ಮೌಂಟೇನಿಯರಿಂಗ್ ಕೋರ್ಸ್’ (Basic Mountaineering Course – BMC) ತರಬೇತಿಯ ಭಾಗವಾಗಿ ಅವರು ಈ ಸಾಹಸಯಾತ್ರೆಯನ್ನು ಕೈಗೊಂಡಿದ್ದರು. ಈ ಉನ್ನತ ಮಟ್ಟದ ತರಬೇತಿಯಲ್ಲಿ ಪಾಲ್ಗೊಳ್ಳಲು ಕರ್ನಾಟಕ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯು ಮನೋಜ ಅವರಿಗೆ ವಿಶೇಷ ಅವಕಾಶ ಮತ್ತು ಸಂಪೂರ್ಣ ಬೆಂಬಲ ಕಲ್ಪಿಸಿಕೊಟ್ಟಿತ್ತು.

ಅಪಾಯಕಾರಿ ಕಠಿಣ ಹವಾಮಾನದಲ್ಲೂ ಕಗ್ಗಂಟಾಗದ ಧೈರ್ಯ :

ಸಮುದ್ರ ಮಟ್ಟದಿಂದ 20,049 ಅಡಿಗೂ ಅಧಿಕ ಎತ್ತರ ಇರುವ ಪ್ರದೇಶದಲ್ಲಿ ಆಮ್ಲಜನಕದ ತೀವ್ರ ಅಭಾವ, ಮೈನಸ್ ಡಿಗ್ರಿಗಿಂತಲೂ ಕಡಿಮೆ ಇರುವ ತಾಪಮಾನ ಹಾಗೂ ಅತ್ಯಂತ ಕಠಿಣ ಹವಾಮಾನದ ಸವಾಲುಗಳನ್ನು ಎದುರಿಸುತ್ತಾ ತಮ್ಮ ತರಬೇತಿ ತಂಡದೊಂದಿಗೆ ಸಾಗಿದ ಮನೋಜ, ಯುನಮ್ ಶಿಖರದ ತುದಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ತರಬೇತಿ ಸಂಸ್ಥೆಗೆ, ತಾವು ವ್ಯಾಸಂಗ ಮಾಡುತ್ತಿರುವ ದಾವಣಗೆರೆಯ R. L. ಲಾ ಕಾಲೇಜಿಗೂ ಹಾಗೂ ತಮ್ಮ ಗ್ರಾಮಕ್ಕೂ ಕೀರ್ತಿ ತಂದಿದ್ದಾರೆ.

ಸಾಹಸಿ ಮನೋಜ ಅವರ ಮಾತು :

ಹಿಮಾಲಯದ ಕಠಿಣ ಪರಿಸರದಲ್ಲಿ ಪರ್ವತಾರೋಹಣ ಮಾಡುವುದು ಕೇವಲ ನಮ್ಮ ದೈಹಿಕ ಶಕ್ತಿಯಷ್ಟೇ ಅಲ್ಲ, ಅದು ನಮ್ಮ ತಾಳ್ಮೆ, ಮಾನಸಿಕ ಶಕ್ತಿ ಮತ್ತು ಶಿಸ್ತಿನ ಪರೀಕ್ಷೆಯಾಗಿದೆ. ABVIMAS ಸಂಸ್ಥೆಯ ಅನುಭವಿ ಮಾರ್ಗದರ್ಶಕರ ತರಬೇತಿಯ ಜೊತೆಗೆ, ನನ್ನ ಮೇಲೆ ಭರವಸೆಯಿಟ್ಟು ಈ ಸಾಹಸಕ್ಕೆ ಅವಕಾಶ ಮಾಡಿಕೊಟ್ಟ ಕರ್ನಾಟಕ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ ಹಾಗೂ ನನ್ನ ವಿದ್ಯಾಭ್ಯಾಸಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿರುವ R. L. ಲಾ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದಕ್ಕೆ ನಾನು ಸದಾ ಚಿರಋಣಿ. ಇವರ ಪ್ರೋತ್ಸಾಹವೇ ನಾನು 6,111 ಮೀಟರ್ ಎತ್ತರದ ಶಿಖರವನ್ನು ಏರಲು ಪ್ರಮುಖ ಪ್ರೇರಣೆಯಾಯಿತು” ಎಂದು ಮನೋಜ ಹೊನ್ನಪ್ಪ ಚಿಕ್ಕಪ್ಪನವರ ಕೃತಜ್ಞತೆ ಹಾಗೂ ಸಂತಸ ಹಂಚಿಕೊಂಡಿದ್ದಾರೆ.

ಇವರ ಈ ಅಪರೂಪದ ಸಾಹಸಿಕ ಸಾಧನೆಗೆ ಗ್ರಾಮಸ್ಥರು, ಕುಟುಂಬಸ್ಥರು, R. L. ಲಾ ಕಾಲೇಜಿನ ಸಿಬ್ಬಂದಿ ಹಾಗೂ ಕ್ರೀಡಾಭಿಮಾನಿಗಳು ತೀವ್ರ ಸಂತೋಷ ವ್ಯಕ್ತಪಡಿಸಿದ್ದು, ಇವರ ಮುಂದಿನ ಉನ್ನತ ಮಟ್ಟದ ಪರ್ವತಾರೋಹಣ ಯಾತ್ರೆಗಳಿಗೆ ಹಾಗೂ ವೃತ್ತಿಜೀವನಕ್ಕೆ ಶುಭ ಹಾರೈಸಿದ್ದಾರೆ.