ವೀರಮಾರ್ಗ ನ್ಯೂಸ್ ಕಲಕೇರಿ : ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕು. ಗುರಿ ಇಲ್ಲದ ಗುರು ಇಲ್ಲದ ಮಾನವ ಜೀವನ ನಿರರ್ಥಕ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ಕಲಕೇರಿ ಸುಕ್ಷೇತ್ರದ ಶ್ರೀ ಗುರು ಮರುಳಾರಾಧ್ಯ ಸಂಸ್ಥಾನ ಹಿರೇಮಠದಲ್ಲಿ ಜರುಗಿದ ಪುರಾಣ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ಧರ್ಮ ವೀರಶೈವ. ಈ ಧರ್ಮದ ತತ್ವ ಸಿದ್ಧಾಂತಗಳು ಜೀವನ ವಿಕಾಸಕ್ಕೆ ಅಡಿಪಾಯವಾಗಿವೆ. ಸ್ವಾರ್ಥ ಗೆದ್ದವನು ಶಾಂತಿ ಪಡೆದವನು ಮತ್ತು ಸತ್ಯ ಅರಿತವನು ನಿಜವಾದ ಸುಖಿ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಸುಖದ ಮೂಲ ಧರ್ಮದ ಪರಿಪಾಲನೆಯಲ್ಲಿದೆ. ಚತುರ್ವಿಧ ಪುರುಷಾರ್ಥಗಳಲ್ಲಿ ಧರ್ಮವೇ ಮೊದಲಿರುವುದನ್ನು ಗಮನಿಸಬಹುದು. ಕಲಕೇರಿ ಶ್ರೀ ಗುರು ಮರುಳಾರಾಧ್ಯ ಸಂಸ್ಥಾನ ಹಿರೇಮಠ ತನ್ನದೇ ಆದ ಇತಿಹಾಸವನ್ನು ಹೊಂದಿ ಆದರ್ಶ ಗುರು ಪರಂಪರೆ ಬೆಳೆಸಿಕೊಂಡು ಬಂದಿದೆ.

ಕಲಬುರ್ಗಿ ಶ್ರೀ ಶರಣ ಬಸವೇಶ್ವರರಿಗೆ ಶಿವದೀಕ್ಷೆಯಿತ್ತು ಅನುಗ್ರಹಿಸಿದ ಶ್ರೇಯಸ್ಸು ಶ್ರೀ ಮಠಕ್ಕೆ ಸಲ್ಲುತ್ತದೆ. ಲಿಂ.ಶ್ರೀ ಬಸವಲಿಂಗ ಮರುಳಸಿದ್ಧ ಶಿವಾಚಾರ್ಯರ ಅಮೃತ ಶಿಲಾ ಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ಇಂದಿನ ಪಟ್ಟಾಧ್ಯಕ್ಷರಾದ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ಹಲವಾರು ವೈಶಿಷ್ಠ್ಯಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ತಮಗೆ ಸಂತೋಷ ತಂದಿದೆ ಎಂದು ಶ್ರೀಗಳವರಿಗೆ ರೇಶ್ಮೆ ಮಡಿ ಸ್ಮರಣಿಕೆ ಫಲ ಪುಷ್ಪವಿತ್ತು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ ಕಲಕೇರಿ ಹಿರೇಮಠದ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮನುಷ್ಯನಿಗೆ ಶಾಸ್ತ್ರದ ಭಯವಾದರೂ ಇರಬೇಕು. ಇಲ್ಲದೇ ಇದ್ದರೆ ಶಸ್ತ್ರದ ಭಯವಾದರೂ ಇರಬೇಕು. ಶಾಸ್ತ್ರದ ಮರ್ಯಾದೆ ಮೀರಿ ನಡೆದಾಗ ಆತಂಕ ತಪ್ಪಿದ್ದಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ದಶಧರ್ಮ ಸೂತ್ರಗಳ ಪರಿಪಾಲನೆಯಿಂದ ನಮ್ಮೆಲ್ಲರ ಬಾಳು ಬೆಳಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ನಮ್ಮ ಮೇಲೆ ನಮ್ಮ ಭಕ್ತರ ಮೇಲೆ ಸದಾ ಇರಲೆಂದು ಆಶಿಸಿದರು. ಜಳಕೋಟ ಶಿವಾನಂದ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಹಲಕರ್ಟಿ ಅಭಿನವ ಮುನೀಂದ್ರ ಶಿವಾಚಾರ್ಯರು, ಕಲಕೇರಿ ಗದ್ದಿಗಿಮಠದ ಗುರು ಮಡಿವಾಳೇಶ್ವರ ಶಿವಾಚಾರ್ಯರು, ದೇವರಹಿಪ್ಪರಗಿ ಜಡಿ ಸಿದ್ಧೇಶ್ವರ ಶಿವಾಚಾರ್ಯರು ಮೊದಲ್ಗೊಂಡು ಹಲವಾರು ಮಠಾಧೀಶರು ಉಪಸ್ಥಿತರಿದ್ದರು. ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಸೇರಿದಂತೆ ಹಲವಾರು ರಾಜಕೀಯ ಧುರೀಣರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಕಾಲಜ್ಞಾನಿ ಕಡಕೋಳದ ಮಡಿವಾಳೇಶ್ವರ ಪುರಾಣ ಮಂಗಲಗೊಂಡಿತು.
ಈರಣ್ಣ ಝಳಕಿ ಇವರಿಂದ ನಿರೂಪಣೆ ನಡೆಯಿತು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.