ಲಕ್ಷ್ಮೇಶ್ವರ ಪುರಸಭೆ 2025-26ನೇ ಸಾಲಿಗೆ 1.18 ರೋಟಿ ಉಳಿತಾಯ ಬಜೆಟ್

ಪಟ್ಟಣದ ಸ್ವಚ್ಛತೆಗೆ ಹೆಚ್ಚುವರಿ ಕಾರ್ಮಿಕರ ನೇಮಕ ಅಗತ್ಯ : ಶಾಸಕ ಲಮಾಣಿ
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ 2025-26ನೇ ಸಾಲಿನ 1.18 ಕೋಟಿ ರೂಪಾಯಿಗಳ ಉಳಿತಾಯದ ಬಜೆಟ್ ಮಂಡಿಸಲಾಯಿತು. ಮುಖ್ಯಾಧಿಕಾರಿ ಮಹೇಶ ಹಡಪದ ಅವರು ಶಾಸಕ ಚಂದ್ರು ಲಮಾಣಿ ಅವರ ಸಮ್ಮುಖದಲ್ಲಿ ಬಜೆಟ್ ಮಂಡಿಸಿ ಮಾತನಾಡಿದರು.
“ಎಲ್ಲ ಮೂಲಗಳಿಂದ 724.45 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಅದರಲ್ಲಿ 723.27 ಕೋಟಿ ಖರ್ಚು ಮಾಡಲು ಉದ್ದೇಶಿಸಲಾಗಿದ್ದು, 1.18 ಕೋಟಿ ಉಳಿತಾಯವನ್ನು ಅಂದಾಜಿಸಲಾಗಿದೆ” ಎಂದು ತಿಳಿಸಿದರು.
ಶಾಸಕ ಚಂದ್ರು ಲಮಾಣಿ ಮಾತನಾಡಿ, ‘ಉಳಿತಾಯ ಬಜೆಟ್ ಮಂಡನೆ ಸ್ವಾಗತಾರ್ಹ. ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಅಧಿಕಾರಿಗಳು ಹೆಚ್ಚಿನ ಪ್ರಯತ್ನ ಮಾಡಬೇಕು. ಮನೆ ನಿರ್ಮಾಣಕ್ಕೆ ಪರವಾನಿಗೆ ನೀಡುವುದು ವಿಳಂಬ ಆಗುತ್ತಿದೆ ಎಂಬ ದೂರುಗಳು ಬಂದಿವೆ. ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬಾರದು ಎಂದರು.

“ಸದ್ಯವಿರುವ ಪೌರ ಕಾರ್ಮಿಕರಿಂದ ಪಟ್ಟಣದ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ. ಹೆಚ್ಚುವರಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು. ಪಟ್ಟಣದಲ್ಲಿ ಸಾವಿರಾರು ಜನರು ಸೈಟ್ ಖರೀದಿಸಿ ಹಾಗೆಯೇ ಬಿಟ್ಟಿದ್ದು, ಮಾಲೀಕರು ಸ್ವಚ್ಛತೆಯನ್ನು ಮಾಡದ ಕಾರಣ ಮಲಿನತೆ ಹೆಚ್ಚಾಗಿದೆ. ಕಾರಣ, ಮಾಲೀಕರಿಗೆ ನೋಟೀಸು ನೀಡಬೇಕು‘ ಎಂದು ಹೇಳಿದರು.
“ತುಂಗಭದ್ರಾ ನದಿ ಹರಿದರೆ ಮಾತ್ರ ಪಟ್ಟಣಕ್ಕೆ ನೀರು ಬರುತ್ತದೆ.
ಮೇವುಂಡಿಯಲ್ಲಿರುವ ಜಾಕ್ವೆಲ್‌ನ್ನು ಹಮ್ಮಗಿ ಅಥವಾ ಸಾಸಲವಾಡದಲ್ಲಿ ಸ್ಥಾಪಿಸಬೇಕು. ಸೂರಣಗಿಯಿಂದ ಅಲ್ಲಿವರೆಗೆ ಪೈಪೈನ್ ಅಳವಡಿಸಿದರೆ ಮಾತ್ರ ಭವಿಷ್ಯದಲ್ಲಿ ನೀರಿನ ಸಮಸ್ಯೆ ಎದುರಿಸಬಹುದು. ಇದಕ್ಕಾಗಿ ಸರ್ಕಾರದಿಂದ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನೀರು ಬಿಡುವವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಕೆಲಸ ಮಾಡದವರನ್ನು ತೆಗೆದು ಬೇರೆಯವರನ್ನು ನೇಮಿಸಿಕೊಳ್ಳಬೇಕು. ಅಧಿಕಾರಿಗಳು ಸದಸ್ಯರಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಬೇಕು’ ಎಂದು ಸೂಚಿಸಿದರು.
ನಾಮ ನಿರ್ದೇಶಿತ ಸದಸ್ಯ ಪ್ರಕಾಶ ಕೊಂಚಿಗೇರಿಮಠ ಆಶ್ರಯ ನಿವೇಶನಗಳನ್ನು ಯಾವಾಗ ಹಂಚುತ್ತೀರಿ ಎಂದು ಕೇಳಿದರು. ಆಗ ಸುದೀರ್ಘ ಚರ್ಚೆ ನಡೆಯಿತು.
ಸದಸ್ಯ ಮಹೇಶ ಹೊಗೆಸೊಪ್ಪಿನ ಮಾತನಾಡಿ ಎಲ್ಲ ಸದಸ್ಯರ ಸಭೆ ಕರೆದು ಆಶ್ರಯ ನಿವೇಶನಗಳ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು. ಅದಕ್ಕೆ ಶಾಸಕರು ಒಪ್ಪಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಫಿರ್ದೋಷ್ ಆಡೂರ, ರಾಜೇಶ ಕುಂಬಿ, ಮಹೇಶ ಹೊಗೆಸೊಪ್ಪಿನ, ಜಯಕ್ಕ ಕಳ್ಳಿ, ಜಯಕ್ಕ ಅಂದಲಗಿ, ಪ್ರವೀಣ ಬಾಳಿಕಾಯಿ, ಪ್ರವೀಣ ಬಾಳಿಕಾಯಿ. ಅಶ್ವಿನಿ ಅಂಕಲಕೋಟಿ, ಸಾಯಿಬ್ಬಾನ್ ಹವಾಲ್ದಾರ. ನೀಲಪ್ಪ ಪೂಜಾರ, ವಿಜಯ ಕರಡಿ ಬಜೆಟ್ ಕುರಿತು ಮಾತನಾಡಿದರು.

Leave a Reply

Your email address will not be published. Required fields are marked *