ತಾಲೂಕಿನ 93 ಶಾಲೆಗಳಿಗೆ 1 ಕೋಟಿ 55 ಲಕ್ಷ ರೂ. ವೆಚ್ಚದಲ್ಲಿ ಸೌಲಭ್ಯ ಕಲ್ಪನೆ : ಶಾಸಕ ಶ್ರೀನಿವಾಸ

ವೀರಮಾರ್ಗ ನ್ಯೂಜ್ ಹಾನಗಲ್ : ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸರಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು ಕೈ ಜೋಡಿಸುವಂತೆ ನೀಡಿದ ಕರೆಗೆ ತಾಲೂಕಿನಲ್ಲಿ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಮಾತ್ರವಲ್ಲದೇ ಹಳೆ ಬೇರು, ಹೊಸ ಚಿಗುರು ಹೆಸರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವಾಗಿ ರೂಪಗೊಳ್ಳಲು ಪ್ರೇರಣೆಯಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಅಕ್ಕಿಆಲೂರಿನ ಸಿ.ಜಿ. ಬೆಲ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಬೇರು, ಚಿಗುರು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಶಾಲೆ, ಕಾಲೇಜುಗಳು ಅಭಿವೃದ್ಧಿ ಹೊಂದಬೇಕಿದೆ. ಈ ನಿಟ್ಟಿನಲ್ಲಿ ಇಂದಿನ ಜಾಗತಿಕ ಸ್ಪರ್ಧೆ, ಸವಾಲುಗಳನ್ನು ಎದುರಿಸುವಂತೆ ರೂಪಿಸುವ ಅಗತ್ಯವಿದೆ. ಈ ಜವಾಬ್ದಾರಿಯನ್ನು ಸರಕಾರದ ಮೇಲೆ ಹೊರಿಸಿ ಕೈಕಟ್ಟಿ ಕುಳಿತುಕೊಂಡರೆ ಪ್ರಯೋಜನವಾಗದು. ಸರಕಾರಿ ಶಾಲೆ, ಕಾಲೇಜುಗಳಲ್ಲಿ ಕಲಿತ ಪ್ರತಿಯೊಬ್ಬರೂ ಸಹ ಕೈ ಜೋಡಿಸಿದರೆ ಈ ಕಾರ್ಯ ಸುಲಭ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಹಾನಗಲ್ ತಾಲೂಕಿನಲ್ಲಿ ನಡೆಸುತ್ತಿರುವ ಅಭಿಯಾನ ಫಲ ನೀಡಿದೆ. 93 ಶಾಲೆಗಳಿಗೆ 1 ಕೋಟಿ 55 ಲಕ್ಷ ರೂ. ವೆಚ್ಚದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಈ ವೆಚ್ಚವ ಅರ್ಧ ಭಾಗ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು ನೀಡಿದರೆ, ಉಳಿದರ್ಧ ವೈಯಕ್ತಿಕವಾಗಿ ಭರಿಸಿದ್ದೇನೆ. ಇದರ ಪ್ರೇರಣೆಯಿಂದಲೇ ಶಿಕ್ಷಣ ಇಲಾಖೆ ಹಳೆ ಬೇರು, ಹೊಸ ಚಿಗುರು ಅಭಿಯಾನ ರೂಪಿಸಿ, ಸಮುದಾಯದ ಸಹಕಾರದಿಂದ ಶಾಲೆಗಳ ಅಭಿವೃದ್ಧಿಗೆ ಮುಂದಾಗಿದೆ ಎಂದರು.

ಪ್ರಾಚಾರ್ಯ ವಿ.ಎಂ.ಕುಮ್ಮೂರ ಮಾತನಾಡಿ, ಕಾಲೇಜಿನಲ್ಲಿ ಇದುವರೆಗೆ ಅಭ್ಯಾಸ ಕೈಗೊಂಡ ಹಳೆಯ ವಿದ್ಯಾರ್ಥಿಗಳನ್ನೆಲ್ಲ ಸಂಪರ್ಕಿಸುತ್ತಿದ್ದೇವೆ. ಶೀಘ್ರದಲ್ಲಿ ಹಳೆ ವಿದ್ಯಾರ್ಥಿಗಳ ಒಕ್ಕೂಟ ರಚಿಸಿ ಸಹಾಯ ಪಡೆದುಕೊಳ್ಳುವ ಆಲೋಚನೆ ಮಾಡಿದ್ದೇವೆ. ಇಡೀ ಜಿಲ್ಲೆಯಲ್ಲಿಯೇ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಕಲ್ಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಉದ್ಯಮಿ ಸದಾಶಿವ ಬೆಲ್ಲದ, ತಾಪಂ ಮಾಜಿ ಅಧ್ಯಕ್ಷ ಎಲ್.ಕೆ.ಶೇಷಗಿರಿ, ನಿವೃತ್ತ ಡಿಎಚ್‌ಒ ಡಾ.ಈಶ್ವರ ಮಾಳೋದೆ, ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮೆಹಬೂಬಅಲಿ ಬ್ಯಾಡಗಿ, ಮುಖಂಡರಾದ ಯಾಸೀರ್‌ಅರಾಫತ್ ಮಕಾನದಾರ, ಅಲ್ತಾಪ್ ಶಿರಹಟ್ಟಿ, ಉಪನ್ಯಾಸಕಿ ಡಾ.ಯಮುನಾ ಕೋಣೇಸರ್ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *